ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಶುರುವಾಗಿದೆ. 4000 ಕೋಟಿ ವೆಚ್ಚದ ಬ್ರಹ್ಮಾಂಡದ ಸೃಷ್ಟಿಗೆ ದೆಹಲಿಯ ಭಾರತ್ ಮಂಟಪದಲ್ಲಿ ಚಾಲನೆ ಸಿಕ್ಕಿದೆ. ಹಾಗಾದರೆ ಏನಿದು ಯಶ್ ಆಂಡ್ ಟೀಮ್‌ನ ಮಹಾ ಸಂಕಲ್ಪ..? ಈ ಮಹಾಕಾವ್ಯದ ಹಿಂದಿರುವ ರೋಚಕ ಮಾಹಿತಿ ಇಲ್ಲಿದೆ…
- ರಾಮಾಯಣದ ಭವ್ಯ ಆರಂಭಕ್ಕೆ ದೆಹಲಿ ಸಾಕ್ಷಿ..!
- ‘ಪ್ರಥಮ ಸಂಕಲ್ಪ’ದಿಂದ ಶುರುವಾದ ಮಹಾಯಜ್ಞ..!
- 4000 ಕೋಟಿ ರಾಮಾಯಣಕ್ಕೆ ಮಹಾ ಮುಹೂರ್ತ
- ಹಾಲಿವುಡ್ ತಂತ್ರಜ್ಞರ ಜೊತೆ ಭಾರತೀಯ ಮಹಾಕಾವ್ಯ
ರಾಮಾಯಣ ಎಂದರೆ ಕೇವಲ ಹಳೆಯ ಪುರಾಣದ ಕಥೆಯಲ್ಲ, ಅದು ನಮ್ಮ ರಕ್ತದಲ್ಲಿ ಹರಿಯುವ ಸಂಸ್ಕಾರ. ತಲೆಮಾರುಗಳಿಂದ ನಾವು ಪಾಲಿಸಿಕೊಂಡು ಬಂದಿರುವ ಮೌಲ್ಯಗಳು, ಧರ್ಮ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕ ಈ ಮಹಾಕಾವ್ಯ. ಇದನ್ನು ಜಾಗತಿಕ ವೇದಿಕೆಯಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ವಿಷಯವಾಗಿದೆ.
ಹೌದು, ಅಕಾಡೆಮಿ ಪ್ರಶಸ್ತಿ ವಿಜೇತ ತಂತ್ರಜ್ಞರನ್ನು ಹೊಂದಿರುವ ನಮಿತ್ ಮಲ್ಹೋತ್ರಾ ಮಾಲೀಕತ್ವದ ಪ್ರೈಮ್ ಫೋಕಸ್ ಸ್ಟುಡಿಯೋಸ್, ಜಾಗತಿಕ ಮಟ್ಟದ ವಿಎಫ್‌ಎಕ್ಸ್ ದಿಕ್ಸೂಚಿ ಡಿ-ನೆಗ್ ಮತ್ತು ನಟ ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಸಿನಿಮಾ ಅತಿ ಭವ್ಯವಾಗಿ ಮೂಡಿಬರುತ್ತಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಯಶ್ ಅವರ ಸೃಜನಾತ್ಮಕ ದೃಷ್ಟಿಕೋನ ಮತ್ತು ನಮಿತ್ ಮಲ್ಹೋತ್ರಾ ಅವರ ಗ್ಲೋಬಲ್ ನೆಟ್‌ವರ್ಕ್ ಈ ಚಿತ್ರಕ್ಕೆ ಅತಿ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.
ದೇಶದ ರಾಜಧಾನಿ ನವದೆಹಲಿಯ ಪ್ರತಿಷ್ಠಿತ ‘ಭಾರತ್ ಮಂಟಪ’ದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯಾದ ರಾಮಾಯಣವನ್ನು ಜಗತ್ತಿನ ಅತಿ ದೊಡ್ಡ ವೇದಿಕೆಗೆ ಪರಿಚಯಿಸುವ ಈ ಐತಿಹಾಸಿಕ ಪ್ರಯಾಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಈ ಅದ್ಭುತ ಪಯಣದ ಮಹಾ ಆರಂಭವನ್ನೇ ಚಿತ್ರತಂಡ ‘ಪ್ರಥಮ ಸಂಕಲ್ಪ’ ಎಂದು ಘೋಷಿಸಿದೆ.
ಭಾರತೀಯ ಸನಾತನ ಸಂಪ್ರದಾಯದಂತೆ ಯಾವುದೇ ಒಂದು ಮಹತ್ಕಾರ್ಯಕ್ಕೆ, ಯುದ್ಧಕ್ಕೆ ಅಥವಾ ಧರ್ಮಕಾರ್ಯಕ್ಕೆ ಕೈಹಾಕುವ ಮುನ್ನ ದೃಢ ನಿರ್ಧಾರ ಮಾಡುವುದನ್ನೇ ‘ಸಂಕಲ್ಪ’ ಎನ್ನಲಾಗುತ್ತದೆ. ಅದೇ ರೀತಿ, ಈ ಕಥೆಯನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಗೌರವದಿಂದ ಮತ್ತು ಭವ್ಯತೆಯಿಂದ ಪ್ರಸ್ತುತಪಡಿಸಲು ಯಶ್ ಹಾಗೂ ನಮಿತ್ ಮಲ್ಹೋತ್ರಾ ಟೀಮ್ ತೊಟ್ಟಿರುವ ಆ ದೃಢ ನಿರ್ಧಾರವೇ ಈ ಪ್ರಥಮ ಸಂಕಲ್ಪ.
ನಿರ್ದೇಶಕ ನಿತೇಶ್ ತಿವಾರಿ ರಾಮಾಯಣದ ಭಾವುಕತೆಯನ್ನು ತಂತ್ರಜ್ಞಾನದೊಂದಿಗೆ ಬೆಸೆದು ಅದ್ಭುತವಾಗಿ ತೆರೆಗೆ ತರುತ್ತಿದ್ದಾರೆ. ಸದ್ಯ ನಿತೇಶ್ ಏನು ಹೇಳಿದ್ದಾರೆ ನೋಡಿ.
- ರಾಮನಾಗಿ ರಣ್‌ಬೀರ್ ಕಪೂರ್.. ಸೀತೆಯಾಗಿ ಸಾಯಿ ಪಲ್ಲವಿ
- ಲಂಕಾಧಿಪತಿ ರಾವಣನಾಗಿ ನಮ್ಮ ಹೆಮ್ಮೆಯ ಕನ್ನಡಿಗ ಯಶ್
- ಹನುಮಂತನಾಗಿ ಅಬ್ಬರಿಸಲಿದ್ದಾರೆ ಬಾಲಿವುಡ್‌ನ ಸನ್ನಿ ಡಿಯೋಲ್
- ಅಮೆರಿಕಾದಲ್ಲಿ ಟ್ರೈಲರ್ ಲಾಂಚ್‌ಗೂ ಮುನ್ನ ದೆಹಲಿಯಲ್ಲಿ ದರ್ಶನ
ಈ ಮಹಾಕಾವ್ಯದ ಕೇಂದ್ರಬಿಂದು, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ದೆಹಲಿಯ ವೇದಿಕೆಯಲ್ಲಿ ಕಣ್ಣಿನ ಇನ್ಫೆಕ್ಷನ್‌ನಿಂದಾಗಿ ಕಪ್ಪು ಗ್ಲಾಸ್ ಧರಿಸಿ ಬಂದಿದ್ದ ರಣ್‌ಬೀರ್, ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದು ಯಾಕೆ ನೀವೇ ನೋಡಿ.
ತಮ್ಮ ಸಹಜ ನಟನೆ ಮತ್ತು ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ಳೋ ಸಾಯಿ ಪಲ್ಲವಿ ಈ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಭಾರತೀಯ ನಾರಿಯ ಪಾವಿತ್ರ್ಯತೆ, ತಾಳ್ಮೆ ಮತ್ತು ಗಾಂಭೀರ್ಯವನ್ನು ತೆರೆಯ ಮೇಲೆ ತರಲು ಸಾಯಿ ಪಲ್ಲವಿ ಅವರಿಗಿಂತ ಸೂಕ್ತ ನಟಿ ಮತ್ತೊಬ್ಬರಿಲ್ಲ ಎಂಬುದು ಚಿತ್ರತಂಡದ ನಂಬಿಕೆ.
ಇಡೀ ಭಾರತೀಯ ಸಿನಿರಂಗ ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿರುವುದು ನಮ್ಮ ಹೆಮ್ಮೆಯ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ಅವರ ರಾವಣನ ಅವತಾರಕ್ಕಾಗಿ ಚಿತ್ರದ ಸಹ-ನಿರ್ಮಾಪಕರೂ ಆಗಿರುವ ಯಶ್, ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ ರಾಜನಾಗಿದ್ದ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನೆಗೆಟಿವ್ ಶೇಡ್‌ನಲ್ಲೇ ಜಾಗತಿಕ ಮಟ್ಟದಲ್ಲಿ ಹವಾ ಸೃಷ್ಟಿಸಲು ಯಶ್ ಅವರ ‘ಮಾನ್‌ಸ್ಟರ್ ಮೈಂಡ್’ ಗೇಮ್ ಪ್ಲಾನ್ ರೆಡಿಯಾಗಿದ್ದು, ದೆಹಲಿ ವೇದಿಕೆಯಲ್ಲಿ ಕನ್ನಡದ ಕಂಪು ಪಸರಿಸಿದ್ದಾರೆ
ಬಾಲಿವುಡ್‌ನ ಮಾಸ್ ಆ್ಯಕ್ಷನ್ ಕಿಂಗ್, ಸನ್ನಿ ಡಿಯೋಲ್ ಈ ಚಿತ್ರದಲ್ಲಿ ರಾಮನ ಪರಮ ಭಕ್ತ, ಮಹಾಬಲಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಇವೆಂಟ್‌ನ ಮತ್ತೊಂದು ಬಿಗ್ ಹೈಲೈಟ್ ಆಗಿತ್ತು. ಹಾಗೆ ಟೆಲಿವಿಷನ್ ಇತಿಹಾಸದ ದಂತಕಥೆ, ಅಂದು ದೂರದರ್ಶನದ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿ ಇಡೀ ದೇಶದಾದ್ಯಂತ ದೇವರಂತೆ ಪೂಜಿಸಲ್ಪಟ್ಟ ಹಿರಿಯ ನಟ ಅರುಣ್ ಗೋವಿಲ್ ಈ ಚಿತ್ರದಲ್ಲಿ ಅಯೋಧ್ಯೆಯ ರಾಜ, ದಶರಥ ಮಹಾರಾಜನ ಪಾತ್ರದಲ್ಲಿ ಭಾಗಿಯಾಗಿದ್ದಾರೆ. ಅಂದು ರಾಮನಾಗಿದ್ದವರು ಇಂದು ರಾಮನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಕಥೆಗೆ ಮತ್ತಷ್ಟು ಭಾವನಾತ್ಮಕ ತೂಕ ಮತ್ತು ನೈಜತೆಯನ್ನು ತಂದುಕೊಟ್ಟಿದೆ.
ಚಿತ್ರದ ಅಧಿಕೃತ ಟ್ರೇಲರ್ ಜುಲೈ 24 ರಂದು ಅಮೆರಿಕಾದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಆದರೆ, ಅದಕ್ಕೂ ಮುನ್ನವೇ ದೆಹಲಿಯಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ನೆರೆದಿದ್ದ ಅತಿಥಿಗಳಿಗೆ ಚಿತ್ರದ ಭವ್ಯತೆಯ ಝಲಕ್ ಹಾಗೂ ಎಕ್ಸ್‌ಕ್ಲೂಸಿವ್ ಟ್ರೇಲರ್ ಗುಚ್ಚದ ದರ್ಶನ ಮಾಡಿಸಲಾಗಿದ್ದು, ಕಾರ್ಯಕ್ರಮದಲ್ಲಿದ್ದ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





