ಉಡುಪಿ: ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ರನ್ನರ್ ಅಪ್ ಆಗಿರುವ ನಟಿ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಹುಟ್ಟೂರಾದ ಕರಾವಳಿ ಪ್ರದೇಶದಲ್ಲಿ ಭರ್ಜರಿ ಸ್ವಾಗತ ಮಾಡಲಾಯಿತು. ಹೆಜಮಾಡಿ ಟೋಲ್‌ನಿಂದ ಪಡುಬಿದ್ರೆಯವರೆಗೆ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ ರಕ್ಷಿತಾ ಶೆಟ್ಟಿ, ರಸ್ತೆ ಎರಡೂ ಬದಿಗಳಲ್ಲಿ ಸೇರಿದ್ದ ಅಭಿಮಾನಿಗಳಿಗೆ ಕೈ ಬೀಸುತ್ತಾ ಸಂತಸ ವ್ಯಕ್ತಪಡಿಸಿದರು. ಈ ಮೆರವಣಿಗೆಯಲ್ಲಿ ರಕ್ಷಿತಾ ಬಂಗುಡೆ ಮೀನು ಕೈಯಲ್ಲಿ ಹಿಡಿದು ಬಂದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಿಗ್‌ಬಾಸ್ ಮನೆಯಲ್ಲಿದ್ದಾಗಲೂ ರಕ್ಷಿತಾ ತಮ್ಮ ವಿಭಿನ್ನ ಆಲೋಚನೆಗಳಿಂದ ಗಮನ ಸೆಳೆದಿದ್ದರು. ಮೀನುಗಾರರ ಬದುಕು, ಅವರ ಹೋರಾಟ, ಸಮುದ್ರದ ಜೊತೆಗಿನ ಸಂಬಂಧವನ್ನು ಜನರಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ಬಿಗ್‌ಬಾಸ್ ಮನೆಯೊಳಗೆ ಮೀನುಗಾರರನ್ನು ಕರೆಸುವ ಬೇಡಿಕೆಯನ್ನು ಅವರು ಇಟ್ಟಿದ್ದರು. ಈ ಮಾತುಗಳು ಅವರಿಗೆ ಕರಾವಳಿ ಜನರ ಹೃದಯ ಗೆಲ್ಲಲು ದೊಡ್ಡ ಕಾರಣವಾಗಿದ್ದವು.
ರಕ್ಷಿತಾ ಆಗಮಿಸುವ ಸುದ್ದಿ ತಿಳಿದ ತಕ್ಷಣವೇ ಹೆಜಮಾಡಿ ಟೋಲ್ ಬಳಿ ನೂರಾರು ಜನ ಸೇರಿದ್ದರು. ಅಭಿಮಾನಿಗಳು ಘೋಷಣೆ ಕೂಗುತ್ತಾ, ಹೂವಿನ ಮಳೆ ಸುರಿಸುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಮೆರವಣಿಗೆಯು ನಿಧಾನವಾಗಿ ಪಡುಬಿದ್ರೆಯವರೆಗೆ ಸಾಗಿದ್ದು, ರಕ್ಷಿತಾ ಅವರ ವಾಹನದ ಜೊತೆಗೆ ಅಭಿಮಾನಿಗಳು ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.
ಬಿಗ್‌ಬಾಸ್ ಶೋದಲ್ಲಿ ರಕ್ಷಿತಾ ಶೆಟ್ಟಿ ಮಾತನಾಡಿದ ಅನೇಕ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದರಲ್ಲೂ ಮಲ್ಲಮ್ಮನೊಂದಿಗೆ ಕಂಬಳ ಸ್ಪರ್ಧೆಯ ಬಗ್ಗೆ ವಿವರಿಸಿದ ವಿಡಿಯೋ ಕರಾವಳಿ ಭಾಗದಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಕನ್ನಡವನ್ನು ಶುದ್ಧವಾಗಿ ಮಾತನಾಡಲಾಗದಿದ್ದರೂ, ಕರಾವಳಿ ಸಂಸ್ಕೃತಿ, ಜನಜೀವನ, ಪರಂಪರೆಗಳ ಬಗ್ಗೆ ರಕ್ಷಿತಾ ಮನೆಯೊಳಗಿನ ಸ್ಪರ್ಧಿಗಳಿಗೆ ವಿವರಿಸುತ್ತಿದ್ದರು.





