ಬೆಂಗಳೂರು: ಎಸ್‌ಎನ್‌ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಲಿಗ್ರಾಮ ಸುರೇಶ್ ನಿರ್ಮಾಣದ ಮತ್ತು ವೆಂಕಟ್ ಭಾರದ್ವಾಜ್ ನಿರ್ದೇಶನದ “ರಕ್ಕಿ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರೇಣುಕಾಂಬ ಥಿಯೇಟರ್‌ನಲ್ಲಿ ನಡೆಯಿತು.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದ ಅವರು, ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದೊಂದಿಗೆ ಭಾಗವಹಿಸಿದರು.
ಜರ್ಮನಿಯಲ್ಲಿ ಇಪ್ಪತ್ತು ವರ್ಷಗಳಿಂದ ನೆಲೆಸಿರುವ ಸಾಲಿಗ್ರಾಮ ಮೂಲದ ಸುರೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಪುತ್ರ ರಕ್ಕಿ ಈ ಚಿತ್ರದ ನಾಯಕನಾಗಿ ಚೊಚ್ಚಲ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಎರಡು ಕಥೆಗಳನ್ನು ಸುರೇಶ್ ಅವರಿಗೆ ತಿಳಿಸಿದ್ದೆ. ಅವರು ಈ ಕಥೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ವಿವರಿಸಿದರು. ಅಶ್ವಿನಿಯವರು ಕಥೆಯನ್ನು ಕೇಳಿ, ಒಪ್ಪಿಕೊಂಡು ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಇಂದು ಅವರಿಂದ ಚಾಲನೆ ಸಿಕ್ಕಿರುವುದು ಸಂತೋಷದ ವಿಷಯ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ತಿಳಿಸಿದರು.
“ರಕ್ಕಿ” ಚಿತ್ರವು ಆಕ್ಷನ್, ಸಸ್ಪೆನ್ಸ್, ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕಥಾಹಂದರವನ್ನು ಹೊಂದಿದೆ. ಚಿತ್ರದ ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ನಲ್ಲಿ ನಡೆಯಲಿದೆ. “ರಕ್ಕಿ ಎಂದರೆ ಹಚ್ಚಿದ ಪಟಾಕಿಯಂತೆ, ಯಾವಾಗ ಸಿಡಿಯುತ್ತದೆ ಎಂಬುದು ಗೊತ್ತಿಲ್ಲ. ಚಿತ್ರದ ನಾಯಕನ ಪಾತ್ರವೂ ಇದೇ ರೀತಿಯ ತೀವ್ರತೆಯನ್ನು ಹೊಂದಿದೆ,” ಎಂದು ವೆಂಕಟ್ ಭಾರದ್ವಾಜ್ ವಿವರಿಸಿದರು. ಚಿತ್ರದಲ್ಲಿ ಆಶಿಕಾ ಸೋಮಶೇಖರ್ ಮತ್ತು ಪಲ್ಲವಿ ಮಂಜುನಾಥ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬಿ. ಸುರೇಶ್, ಹರಿಣಿ ಶ್ರೀಕಾಂತ್, ಸುಂದರರಾಜ್, ರಮೇಶ್ ಪಂಡಿತ್, ಸಂಪತ್ ಮೈತ್ರೇಯ, ಗಂಟೆ ಗೋವಿಂದ ಸೇರಿದಂತೆ ಗಣನೀಯ ತಾರಾಬಳಗ ಚಿತ್ರದಲ್ಲಿದೆ.
ಲೋಕಿ ತವಸ್ಯ ಸಂಗೀತ ನಿರ್ದೇಶನ, ಐಸ್ಸಾಕ್ಸ್ ಪ್ರಭಾಕರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮತ್ತು ಲಾರೆನ್ಸ್ ಪ್ರೀತಮ್ ಅವರ ಸಹನಿರ್ದೇಶನ ಚಿತ್ರಕ್ಕೆ ತಾಂತ್ರಿಕ ಬಲವನ್ನು ನೀಡಿದೆ.
ನಾಯಕ ರಕ್ಕಿ ಮಾತನಾಡಿ, ನನ್ನ ಹೆಸರೇ ಚಿತ್ರದ ಶೀರ್ಷಿಕೆಯಾಗಿರುವುದು ವಿಶೇಷ. ಜರ್ಮನಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಉದ್ಯೋಗದಲ್ಲಿದ್ದೇನೆ. ನಟನೆಯ ಮೇಲಿನ ಆಸಕ್ತಿಯಿಂದ, ಈ ಚಿತ್ರಕ್ಕೆ ಪೂರ್ವ ತಯಾರಿ ಮಾಡಿಕೊಂಡು ನಾಯಕನಾಗಿ ನಟಿಸುತ್ತಿದ್ದೇನೆ. ನನ್ನ ಚೊಚ್ಚಲ ಚಿತ್ರಕ್ಕೆ ಎಲ್ಲರ ಬೆಂಬಲವಿರಲಿ ಎಂದರು.
ನಿರ್ಮಾಪಕ ಸಾಲಿಗ್ರಾಮ ಸುರೇಶ್ ನಾನು ಮೂಲತಃ ಸಾಲಿಗ್ರಾಮದವನು. ಐಟಿ ಉದ್ಯೋಗಿಯಾಗಿ ಜರ್ಮನಿಯಲ್ಲಿ ಇಪ್ಪತ್ತು ವರ್ಷಗಳಿಂದ ವಾಸಿಸುತ್ತಿದ್ದೇನೆ. ನನ್ನ ತಂದೆ ರಾಜಶೇಖರ್, ಡಾ. ರಾಜಕುಮಾರ್ ಅವರ ‘ಹೊಸಬೆಳಕು’ ಚಿತ್ರವನ್ನು ನಿರ್ಮಿಸಿದ್ದರು. ಈಗ ನಾನು ‘ರಕ್ಕಿ’ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ನನ್ನ ಮಗ ರಕ್ಕಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾನೆ. ವೆಂಕಟ್ ಭಾರದ್ವಾಜ್ ಎರಡು ಕಥೆಗಳನ್ನು ಸಿದ್ಧಪಡಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕಥೆಯನ್ನು ತಿಳಿಸಿದಾಗ, ಅವರು ಈ ಕಥೆಯನ್ನು ಒಪ್ಪಿಕೊಂಡರು. ಚಿತ್ರಕ್ಕೆ ಚಾಲನೆ ನೀಡಿದ ಅಶ್ವಿನಿಯವರಿಗೆ ಧನ್ಯವಾದಗಳು ಎಂದರು.
ನಟ ಬಿ. ಸುರೇಶ್, ಚಿತ್ರದಲ್ಲಿ ನಾನು ಡ್ಯಾನಿ ಎಂಬ ಭೂಗತ ಲೋಕದ ದೊರೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಥೆಯು ತುಂಬಾ ಚೆನ್ನಾಗಿದ್ದು, ಈ ಚಿತ್ರ ಹತ್ತರಲ್ಲಿ ಒಂದಾಗದೆ, ಒಂದೇ ಒಂದಾಗಲಿ ಎಂದರು. ನಾಯಕಿಯರಾದ ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್, ಮತ್ತು ಹರಿಣಿ ಶ್ರೀಕಾಂತ್ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿ, ಚಿತ್ರದ ಯಶಸ್ಸಿಗೆ ಶುಭ ಕೋರಿದರು.





