ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಹಾಸ್ಯ ಕಲಾವಿದ, ಕಾಮಿಡಿ ಕಿಲಾಡಿಗಳು ಸೀಸನ್ 3 ಖ್ಯಾತಿಯ ರಾಕೇಶ್ ಪೂಜಾರಿ (33) ಅವರು ಮೇ 11, 2025 ರಂದು ಹೃದಯಾಘಾತದಿಂದ ನಿಧನರಾದರು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ರಾಕೇಶ್, ಕನ್ನಡ ಮತ್ತು ತುಳು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಅವರ ನಿಧನಕ್ಕೂ ಮುನ್ನ ಕಾಂತಾರ ಚಾಪ್ಟರ್ 1 ಚಿತ್ರೀಕರಣದಲ್ಲಿ ರಾಕೇಶ್ ಭಾಗಿಯಾಗಿದ್ದರು ಎಂದು ತಪ್ಪಾಗಿ ಸುದ್ದಿ ಹರಡಿತ್ತು. ಇದಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ.
ಕಾಂತಾರ ಚಿತ್ರೀಕರಣದ ಬಗ್ಗೆ ತಪ್ಪು ಸುದ್ದಿ
ನಿನ್ನೆ ಕಾಂತಾರ ಚಾಪ್ಟರ್ 1 ಚಿತ್ರೀಕರಣದಲ್ಲಿ ರಾಕೇಶ್ ಭಾಗಿಯಾಗಿದ್ದರು ಎಂದು ಕೆಲವು ವರದಿಗಳು ಹೇಳಿದ್ದವು. ಆದರೆ ಇದು ಸತ್ಯವಲ್ಲ. ಹೊಂಬಾಳೆ ಫಿಲ್ಮ್ಸ್ ಹೇಳಿರುವ ಪ್ರಕಾರ, ರಾಕೇಶ್ ತಮ್ಮ ಪಾತ್ರದ ಚಿತ್ರೀಕರಣವನ್ನು ಒಂದು ತಿಂಗಳ ಹಿಂದೆಯೇ ಮುಗಿಸಿದ್ದರು. ಕೇವಲ ಸಣ್ಣ ಪ್ಯಾಚ್‌ವರ್ಕ್ ಮಾತ್ರ ಬಾಕಿಯಿತ್ತು. ರಿಷಬ್ ಶೆಟ್ಟಿ ಮುಂದಿನ ಶೆಡ್ಯೂಲ್‌ನಲ್ಲಿ ಇದನ್ನು ಚಿತ್ರಿಸಲು ಯೋಜಿಸಿದ್ದರು. ಮೇ 11 ರಂದು ಯಾವುದೇ ಚಿತ್ರೀಕರಣ ನಡೆದಿರಲಿಲ್ಲ, ಮತ್ತು ರಾಕೇಶ್ ಚಿತ್ರತಂಡದ ಜೊತೆ ಇರಲಿಲ್ಲ. ಈ ಸ್ಪಷ್ಟನೆ ನೀಡುವ ಮೂಲಕ ರಾಕೇಶ್ ಸಾವಿನ ಊಹಾಪೋಹಗಳಿಗೆ ತೆರೆಎಳೆದಿದೆ.
ಹೊಂಬಾಳೆ ಫಿಲ್ಮ್ಸ್‌ನ ಸ್ಪಷ್ಟನೆ
ಹೊಂಬಾಳೆ ಫಿಲ್ಮ್ಸ್ ತಮ್ಮ ಅಧಿಕೃತ ಹೇಳಿಕೆಯಲ್ಲಿ, ರಾಕೇಶ್ ಪೂಜಾರಿಯ ನಿಧನಕ್ಕೂ ಕಾಂತಾರ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ರೀತಿ ತಪ್ಪು ಸುದ್ದಿಯು ಇತ್ತೀಚೆಗೆ ಚಿತ್ರದ ಜೂನಿಯರ್ ಕಲಾವಿದ ಕಪಿಲ್ ನಿಧನದ ಸಂದರ್ಭದಲ್ಲೂ ಹರಿದಾಡಿತ್ತು. ಕಪಿಲ್ ಕೂಡ ಚಿತ್ರೀಕರಣದ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂಬ ಗಾಸಿಪ್‌ಗೆ ಹೊಂಬಾಳೆ ಸ್ಪಷ್ಟನೆ ನೀಡಿತ್ತು. ಅವರು ತಮ್ಮ ವೈಯಕ್ತಿಕ ಸಮಯದಲ್ಲಿ ನಿಧನರಾಗಿದ್ದರು ಎಂದು ತಿಳಿಸಿದೆ. ಈಗ ರಾಕೇಶ್ ವಿಷಯದಲ್ಲೂ ಇದೇ ರೀತಿಯ ಸುದ್ದಿ ಹರಿದಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಗ್ಯಾರಂಟಿ ನ್ಯೂಸ್‌ಗೆ ಹೊಂಬಾಳೆ ಫಿಲಂಸ್‌ನಿಂದ ಸ್ಪಷ್ಟನೆ ನೀಡಿದೆ.
ರಾಕೇಶ್ ಪೂಜಾರಿಯ ಕೊನೆಯ ಕ್ಷಣಗಳು
ರಾಕೇಶ್ ಅವರು ಮೇ 11 ರಂದು ಬೆಳಗ್ಗೆ ಆರೋಗ್ಯವಾಗಿದ್ದರು ಎಂದು ಅವರ ಆಪ್ತ ಸ್ನೇಹಿತ ಗೋವಿಂದೇ ಗೌಡ (ಜಿಜಿ) ತಿಳಿಸಿದ್ದಾರೆ. ಸಂಜೆ, ಕಾರ್ಕಳದ ನಿಟ್ಟೆಯಲ್ಲಿ ಗೆಳೆಯರ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಸುಸ್ತು ಎನಿಸಿತು ಎಂದು ರಾಕೇಶ್ ಹೇಳಿದ್ದರು. ವಿಡಿಯೋವೊಂದರಲ್ಲಿ ಅವರು ಎದೆಯನ್ನು ಮುಟ್ಟಿಕೊಂಡರೂ, ನಗುಮುಖದಿಂದ ಕಾಣಿಸಿಕೊಂಡಿದ್ದರು, ಆದರೆ ಅವರು ಎದೆನೋವನ್ನು ನಿರ್ಲಕ್ಷಿಸಿದ್ದರು. ಮಧ್ಯರಾತ್ರಿ ಹೃದಯಾಘಾತಕ್ಕೊಳಗಾಗಿ ಅವರು ನಿಧನರಾದರು ಎಂದು ವರದಿಗಳು ತಿಳಿಸಿವೆ.
ರಾಕೇಶ್ ಪೂಜಾರಿ ತಮ್ಮ ಹಾಸ್ಯ ಪ್ರತಿಭೆಯಿಂದ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಳಿಸಿದ್ದರು. ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಗೆದ್ದ ಅವರು, ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಅಭಿಮಾನಿಗಳಿಗೆ, ಕುಟುಂಬಕ್ಕೆ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ರಕ್ಷಿತಾ ಪ್ರೇಮ್ ಸೇರಿದಂತೆ ಅನೇಕರು ಭಾವುಕ ಸಂತಾಪ ಸೂಚಿಸಿದ್ದಾರೆ.





