ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡರನ್ನು ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದಲ್ಲಿ ಪೊಲೀಸರು ಈ ಹಿಂದೆ ಬಂಧಿಸಿದ್ದರು. ನಂತರ ಅವರಿಗೆ ಜಾಮೀನು ದೊರಕಿತ್ತು. ಆದರೆ, ಈಗ ರಜತ್ ಅವರನ್ನು ಬಸವೇಶ್ವರನಗರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ವಿನಯ್ ಗೌಡವಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಏನಿದು ಪ್ರಕರಣ
ರಜತ್ ಮತ್ತು ವಿನಯ್ ಅವರ ಮೇಲೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪವಿತ್ತು. ಇದಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ರೀಲ್ಸ್‌ಗೆ ಬಳಸಿದ ಶಸ್ತ್ರಾಸ್ತ್ರವನ್ನು ಪೊಲೀಸರಿಗೆ ಒಪ್ಪಿಸುವಂತೆ ಆದೇಶಿಸಲಾಗಿತ್ತು. ಆದರೆ, ಆ ಸಮಯದಲ್ಲಿ ರಬ್ಬರ್ ಮಚ್ಚು ನೀಡಲಾಗಿತ್ತು. ನಂತರ, ಇದು ತಪ್ಪಾಗಿದೆ ಎಂದು ಹೇಳಿ ನಿಜವಾದ ಮಚ್ಚನ್ನು ನೀಡುತ್ತೇವೆಂದು ವಾದಿಸಿದ್ದರು. ಆದರೆ, ರಜತ್ ಅವರು ರೀಲ್ಸ್‌ಗೆ ಬಳಸಿದ ಮಚ್ಚನ್ನು ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ಬಳಸಿದ ಮಾರಕಾಸ್ತ್ರವನ್ನು ಇನ್ನೂ ಹಾಜರುಪಡಿಸಿಲ್ಲ. ಇದು ಸಾಕ್ಷ್ಯ ನಾಶದ ಪ್ರಯತ್ನವೆಂದು ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ. ರಜತ್‌ಗೆ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಕೋರ್ಟ್ ನಿರ್ದೇಶನದಂತೆ ವಿಚಾರಣೆಗೆ ಹಾಜರಾಗುವುದು, ಪೊಲೀಸರ ಕರೆಗೆ ಸ್ಪಂದಿಸುವುದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿತ್ತು. ಆದರೆ, ರಜತ್ ಕೋರ್ಟ್‌ಗೆ ಹಾಜರಾಗಲಿಲ್ಲ. ಇದರ ಪರಿಣಾಮವಾಗಿ, ನಾನ್-ಬೇಲ್ ವಾರೆಂಟ್ ಹೊರಡಿಸಲಾಯಿತು. ಈಗ ಆ ವಾರೆಂಟ್‌ನ ಪ್ರಕಾರ ರಜತ್ ಅವರನ್ನು ಮತ್ತೆ ಬಂಧಿಸಲಾಗಿದೆ.
ಪೊಲೀಸರು ರಜತ್ ಅವರನ್ನು 24ನೇ ಎಸಿಜೆಎಂ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಈ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು. ಹಾಜರಾಗದಿದ್ದಕ್ಕಾಗಿ ಕೋರ್ಟ್ ರಜತ್‌ಗೆ ಶಿಕ್ಷೆ ವಿಧಿಸಬಹುದು ಅಥವಾ ಜಾಮೀನು ರದ್ದುಗೊಳಿಸಬಹುದು.
ಈ ಪ್ರಕರಣದಲ್ಲಿ ವಿನಯ್ ಗೌಡರನ್ನು ಇನ್ನೂ ಬಂಧಿಸಿಲ್ಲ. ಅವರು ತಮ್ಮ ಮನೆಗೆ ತೆರಳಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಆದರೆ, ಪೊಲೀಸರು ಅವರನ್ನು ಬಂಧಿಸಲು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ವಿನಯ್ ಅವರು ಕೂಡ ಕೋರ್ಟ್‌ಗೆ ಹಾಜರಾಗದಿದ್ದರೆ, ಅವರ ವಿರುದ್ಧವೂ ವಾರೆಂಟ್ ಹೊರಡಿಸಬಹುದು.





