ಬಾಲಿವುಡ್‌ನ ಹಿರಿಯ ನಟ ಪಂಕಜ್ ಧೀರ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅಕ್ಟೋಬರ್ 15 ರಂದು ಮುಂಬೈನಲ್ಲಿ ಅವರು ಕ್ಯಾನ್ಸರ್‌ನ ವಿರುದ್ಧದ ಹೋರಾಟದಲ್ಲಿ ಸೋತಿದ್ದಾರೆ. ಬಿ.ಆರ್. ಚೋಪ್ರಾ ನಿರ್ದೇಶನದ ಅಂಬಾಲಿವುಡ್ ಧಾರಾವಾಹಿಯಲ್ಲಿ ಕರ್ಣನ ಪಾತ್ರಕ್ಕೆ ಅಮರರಾದ ಪಂಕಜ್ ಧೀರ್, 1980-90ರ ದಶಕದಲ್ಲಿ ದೇಶಾದ್ಯಂತ ಮನೆಮಾತಾಗಿದ್ದರು.
ಮೂಲಗಳ ಪ್ರಕಾರ, ಪಂಕಜ್ ಧೀರ್ ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೆಲವು ತಿಂಗಳ ಹಿಂದೆ ಕಾಯಿಲೆ ಮರುಕಳಿಸಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಫಲ ನೀಡದ ಪರಿಣಾಮ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಒಂದು ಹಂತದಲ್ಲಿ ಅವರು ಈ ಕಾಯಿಲೆಯಿಂದ ಮುಕ್ತಿ ಪಡೆದಿದ್ದರು ಎಂಬುದಾಗಿ ಅವರ ಆಪ್ತರು ತಿಳಿಸಿದ್ದಾರೆ. ಆದರೆ ಮತ್ತೆ ಬಾಧಿಸಿದ ಕ್ಯಾನ್ಸರ್ ಅವರ ಜೀವ ಕಸಿದುಕೊಂಡಿದೆ.
ಪಂಕಜ್ ಧೀರ್ ಅವರ ನಿಧನದ ಕುರಿತು CINTAA (Cine and TV Artistes’ Association) ಅಧಿಕೃತ ಪ್ರಕಟಣೆ ಹೊರಡಿಸಿದೆ. “ನಮ್ಮ ಟ್ರಸ್ಟ್‌ನ ಆಜೀವ ಅಧ್ಯಕ್ಷರು ಹಾಗೂ ಮಾಜಿ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಪಂಕಜ್ ಧೀರ್ ಜೀ ಅವರು ಇಂದು ನಿಧನರಾದರು. ಅವರ ಅಗಲಿಕೆ ನಮ್ಮೆಲ್ಲರಿಗೂ ಭಾರೀ ನಷ್ಟ,” ಎಂದು ಹೇಳಿಕೆ ತಿಳಿಸಿದೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 4:30 ಕ್ಕೆ ಮುಂಬೈನ ವಿಲೇ ಪಾರ್ಲೆ ಪ್ರದೇಶದ ಪವನ್ ಹನ್ಸ್ ಪಕ್ಕದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.
1980ರ ದಶಕದಲ್ಲಿ ಪಂಕಜ್ ಧೀರ್ ತಮ್ಮ ಅಭಿನಯ ಪಯಣ ಪ್ರಾರಂಭಿಸಿದರು. ಬಿ.ಆರ್. ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಕರ್ಣನ ಪಾತ್ರದಿಂದ ಅವರು ಖ್ಯಾತಿಗೆ ಪಾತ್ರರಾದರು. ನಂತರ ಅವರು ಸನಮ್ ಬೇವಫಾ, ಬಾದ್‌ಶಾ, ಸಾದ್, ಕರ್ಝ್, ಚಂದ್ರಕಾಂತ, ಸಸುರಾಲ್ ಸಿಮರ್ ಕಾ, ಬೇಹದ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದರು.
ಪಂಕಜ್ ಧೀರ್ ಅವರ ನಿಧನ ಸುದ್ದಿ ಹರಿದೊಡನೆ, ಸಹನಟರು, ನಿರ್ದೇಶಕರು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. “ಮಹಾಭಾರತದ ಕರ್ಣ ಇಂದು ನಿಜ ಜೀವನದ ಕರ್ಮಯೋಧನಾಗಿ ಚಿರನಿದ್ರೆಗೆ ಶರಣಾಗಿದ್ದಾರೆ,” ಎಂದು ಅನೇಕರು ಶೋಕ ಸಂದೇಶ ಹಂಚಿಕೊಂಡಿದ್ದಾರೆ.