ಮುಂಬೈ (ಆ.09): ಸಿನಿಮಾ ಕಾರ್ಯಕ್ರಮವೊಂದರ ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ನಟಿ ನಿಖಿತಾ ರಾವಲ್ ಅವರು ಅತ್ಯಂತ ಮುಜುಗರಕ್ಕೀಡಾದ ಘಟನೆ ನಡೆದಿದೆ. ಕ್ಯಾಮೆರಾಗಳಿಗೆ ಫೋಸ್ ನೀಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ಕೇಳಿ ಬಂದು, ಇದ್ದಕ್ಕಿದ್ದಂತೆ ನಟಿಗೆ ಬಲವಂತವಾಗಿ ಲಿಪ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಕೋಲಾಹಲ ಸೃಷ್ಟಿಸಿದೆ.
ರೆಡ್ ಕಾರ್ಪೆಟ್‌ನಲ್ಲಿ ಅಚಾನಕ್ಕಾಗಿ ನಡೆದ ಅಹಿತಕರ ಘಟನೆ
ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಿಖಿತಾ ರಾವಲ್, ಆಗಸ್ಟ್ 8 ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಅವರು ರೆಡ್ ಕಾರ್ಪೆಟ್ ಮೇಲೆ ಆಗಮಿಸಿ ಪಾಪರಾಜಿಗಳಿಗೆ ಮುಗುಳುನಗುತ್ತಾ ಫೋಸ್ ನೀಡುತ್ತಿದ್ದರು.
ಈ ವೇಳೆಯೇ ಅಚಾನಕ್ಕಾಗಿ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದರು. ಪ್ರೀತಿಯಿಂದಲೇ ಅಭಿಮಾನಿಯೊಂದಿಗೆ ಸೆಲ್ಫಿಗೆ ಫೋಸ್ ನೀಡಿದ್ರು ನಿಖಿತಾ ರಾವಲ್. ಸಾಮಾನ್ಯವಾಗಿ ಅಭಿಮಾನಿಗಳು ಸೆಲ್ಫಿ ಬಳಿಕ ಕೈಕುಲುಕುವುದು ಅಥವಾ ಅಪ್ಪಿಕೊಳ್ಳುವುದು ವಾಡಿಕೆ. ಆದರೆ ಈ ಅಭಿಮಾನಿ ಮೊದಲು ಅಪ್ಪಿಕೊಂಡರು, ಅದೂ ಸಹಜ ಎಂಬಂತೆ ನಟಿ ಸುಮ್ಮನಿದ್ದರು.
ನಟಿ ಬಿಡಿಸಿಕೊಳ್ಳಲು ಹೆಣಗಾಡಿದರೂ ವಿಫಲ
ಬಳಿಕ ಏಕಾಏಕಿ ಮಹಿಳಾ ಅಭಿಮಾನಿ ನಿಖಿತಾ ರಾವಲ್ ಅವರನ್ನು ಬಲವಂತವಾಗಿ ಹಿಡಿದು ಚುಂಬಿಸಲು ಮುಂದಾದರು. ನಿಖಿತಾ ಬಿಡಿಸಿಕೊಳ್ಳಲು, ತಳ್ಳಲು ಪ್ರಯತ್ನಿಸಿದರು. ಆದರೆ ಅವರಿಗಿಂತ ಗಟ್ಟಿಮುಟ್ಟಾಗಿದ್ದ ಮಹಿಳಾ ಅಭಿಮಾನಿಯಿಂದ ದೂರ ಸರಿಯಲು ಸಾಧ್ಯವಾಗಲಿಲ್ಲ.
ನಟಿಯ ಎಲ್ಲಾ ಪ್ರಯತ್ನಗಳು ವಿಫಲಗೊಂಡ ಬಳಿಕವೇ ಮಹಿಳಾ ಅಭಿಮಾನಿ ತಾವಾಗಿಯೇ ಬಿಟ್ಟರು. ಆದರೂ ಅವರು ಕೆನ್ನೆಗೂ ಒಂದು ಚುಂಬನ ನೀಡಿ ಅಲ್ಲಿಂದ ತೆರಳಿದರು. ಆಘಾತಕ್ಕೊಳಗಾದ ನಿಖಿತಾ ರಾವಲ್ ಅವರು ಒಂದು ಕ್ಷಣ ಮಾತು ಬರದೇ ಸ್ತಬ್ಧರಾಗಿ ನಿಂತುಬಿಟ್ಟರು. ಸಿಬ್ಬಂದಿಗಳು ತಕ್ಷಣ ಮಹಿಳಾ ಅಭಿಮಾನಿಯನ್ನು ಕಾರ್ಯಕ್ರಮದಿಂದ ಹೊರಗಾಕಿದರು.
ಭದ್ರತಾ ಲೋಪ ಎಂದು ವ್ಯಾಪಕ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿನ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. “ನಟಿಯರ ಬಳಿ ಅನಧಿಕೃತ ವ್ಯಕ್ತಿಗಳು ತೆರಳಲು ಅವಕಾಶ ನೀಡಿದ್ದು ಯಾಕೆ? ಭದ್ರತೆ ಎಲ್ಲಿತ್ತು?” ಎಂದು ಹಲವರು ಪ್ರಶ್ನಿಸಿದ್ದಾರೆ.
ಇದು ಸಂಪೂರ್ಣ ಭದ್ರತಾ ಲೋಪ ಎಂದು ಹಲವು ಕನ್ನಡಿಗರು ಸೇರಿದಂತೆ ದೇಶಾದ್ಯಂತದ ಸಿನಿಮಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಇಂತಹ ಸಣ್ಣ ಲೋಪವೂ ದೊಡ್ಡ ಗಂಡಾಂತರಕ್ಕೆ ಕಾರಣವಾಗಬಲ್ಲದು. ಸೆಲೆಬ್ರಿಟಿಗಳ ಜೀವಕ್ಕೂ ಅಪಾಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.





