ನಟ ಮತ್ತು ನಿರೂಪಕ ಮಾಸ್ಟರ್ ಆನಂದ್ ಅವರು ಈಗ ಜೀ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ವಿಶಿಷ್ಟ ನಿರೂಪಣಾ ಶೈಲಿಯಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಮೂಲಕ, ಅವರು ಚಿತ್ರಮಂದಿರದ ಶಿಸ್ತಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಥಿಯೇಟರ್‌ಗೆ ಹೋಗುವುದಿಲ್ಲ! ಏಕೆ?
“ನಾನು ಥಿಯೇಟರ್‌ಗಳಿಗೆ ಹೋಗುವುದಿಲ್ಲ” ಎಂದು ಮಾಸ್ಟರ್ ಆನಂದ್ ಬಹಿರಂಗಪಡಿಸಿದ್ದಾರೆ. “ಯಾವುದೇ ಸಿನಿಮಾ ಬಿಡುಗಡೆಗೆಯಾದರೂ ನನ್ನ ಪತ್ನಿ, ಮಕ್ಕಳು, ಸ್ನೇಹಿತರು ಥಿಯೇಟರ್‌ಗೆ ಹೋಗಿ ನೋಡುತ್ತಾರೆ. ಆದರೆ ನಾನು ಮಾತ್ರ ಹೋಗುವುದಿಲ್ಲ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ” ಎಂದು ಅವರು ವಿವರಿಸಿದರು.
ಚಿತ್ರಮಂದಿರ ನಮಗೆ ದೇವಸ್ಥಾನ
“ನಾವು ಚಿಕ್ಕವಯಸ್ಸಿನಿಂದ ಸಿನಿಮಾ ಮಾಡಿಕೊಂಡು ಬಂದವರು. ಸೆಟ್‌ನಲ್ಲಿ ಕ್ಯಾಮೆರಾಗೆ ನಮಸ್ಕಾರ ಮಾಡಿ, ಅದನ್ನು ದೇವರ ಥರ ನೋಡುತ್ತಿದ್ದೇವೆ. ಸಿನಿಮಾದ ಜಗತ್ತಿಗೆ ನಾವು ದೇವರ ರೀತಿಯ ಗೌರವ ಕೊಡುತ್ತಿದ್ದೇವೆ. ಥಿಯೇಟರ್ ಎಂಬುದು ನಮಗೆ ದೇವಾಲಯದಷ್ಟು ಪವಿತ್ರ” ಎಂದು ಮಾಸ್ಟರ್ ಆನಂದ್ ಅಭಿಪ್ರಾಯಪಟ್ಟಿದ್ದಾರೆ.
ಸ್ಕ್ರೀನ್‌ಗೆ ಗೌರವ ಇರಬೇಕು!
“ಥಿಯೇಟರ್‌ನಲ್ಲಿ ಜನ ಮುಂಭಾಗದ ಸೀಟ್‌ಗಳ ಮೇಲೆ ಕಾಲು ಹಾಕುವುದು, ಅಲ್ಲೇ ಉಗುಳುವುದು, ಕಸದ ಬಾಟಲು, ಪಾಪ್‌ಕಾರ್ನ್ ಚೆಲ್ಲುವುದು – ಇವೆಲ್ಲವೂ ಬೇಜಾರಾಗುತ್ತದೆ. ನಾನು ಟಿನೇಜ್ ಅಲ್ಲಿ ಓಡಾಡಿದ್ದೇವೆ, ಪಾಪ್‌ಕಾರ್ನ್ ಎಲ್ಲಾ ಚೆಲ್ಲಿದ್ದೇವೆ ಈ ಥರದ್ದೆಲ್ಲಾ ಚೇಷ್ಠೇ ಮಾಡಿದ್ದೇವೆ. ಆದರೆ ಸ್ಕ್ರೀನ್ ಅನ್ನು ಕೊಂಡಾಡುವುದು ನಮ್ಮ ಕರ್ತವ್ಯ” ಎಂದು ಅವರು ಹೇಳಿದ್ದಾರೆ.
ರೆಕಾರ್ಡ್ ಮಾಡೋದು ಎಷ್ಟು ಸರಿ?
“ಇತ್ತೀಚೆಗೆ ಜನ ಸಿನಿಮಾದ ಮುಖ್ಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದು ಪೈರಸಿಗೆ ಸಹಾಯ ಮಾಡುತ್ತದೆ. ಇದನ್ನು ಯಾಕೆ ಯಾರೂ ತಡೆಯುತ್ತಿಲ್ಲ? ಇದನ್ನು ನಿಲ್ಲಿಸಬೇಕು” ಎಂದು ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಬಿಟ್ಟು ಸಿನಿಮಾ ನೋಡಲು ಆಗೋದಿಲ್ಲವೇ?
“ಸಿನಿಮಾದಲ್ಲಿ ಒಂದು ಹಾಡು ಬಂತು ಅಂದರೆ ಮೊಬೈಲ್ ತೆಗೆದು ಚಾಟ್ ಮಾಡೋದು, ವಿಡಿಯೋ ತಗೆದು ಅಪ್‌ಲೋಡ್ ಮಾಡೋದು… ಹೀಗೆ ನೋಡಿದಾಗ, ಹಿಂದಿನವರಿಗೆ ಅಷ್ಟೇ ಅಲ್ಲ, ಪಕ್ಕದವರಿಗೆ ಸಹ ತೊಂದರೆಯಾಗುತ್ತದೆ. ಅಷ್ಟೊಂದು ಸಮಯವೂ ಫೋನ್ ಬಿಟ್ಟು ಸಿನಿಮಾ ನೋಡಲು ಆಗದಿದ್ದರೆ ಏನರ್ಥ?” ಎಂದು ಅವರು ಕೇಳಿಕೊಂಡಿದ್ದಾರೆ.