ಬೇಟೆಗೆ ಹೊರಟ್ರೆ ಬರಿಗೈಲಿ ಬರೋ ಮಾತೇ ಇಲ್ಲ ಅಂತ ದಿಲ್ ಇಟ್ಕೊಂಡು ದುನಿಯಾ ವಿಜಯ್ ಬೆಳ್ಳಿ ಪರದೆಗೆ ಮಾರುತನಾಗಿ ಎಂಟ್ರಿ ಕೊಡೋಕೆ ಮುಹೂರ್ತ ಫಿಕ್ಸ್ ಆಗಿದೆ. ಕಲಾಸಾಮ್ರಾಟ್ ಎಸ್ ನಾರಾಯಣ್ ಹಾಗೂ ವಿಜಯ ಕಾಂಬೋ ಮಾರುತನ ದರ್ಶನ ಯಾವಾಗ ಅನ್ನೋದ್ರ ಡಿಟೈಲ್ಸ್ ಇಲ್ಲಿದೆ.
ಸ್ಯಾಂಡಲ್‌ವುಡ್ ಸಲಗ ವಿಜಯ್ ಕೆ ಮಂಜು ಪುತ್ರ ನಟ ಶ್ರೇಯಸ್ ಮಂಜು ನಟಿಸಿರೋ ಸಿನಿಮಾ ಮಾರುತ. ಸದ್ಯ ಟೀಸರ್ ಹಾಗೂ ಪೋಸ್ಟರ್ ಮೂಲಕ ಗಮನ ಸೆಳೆದ ಮಾರುತ, ಇದೇ ಅಕ್ಟೋಬರ್ ಅಂತ್ಯಕ್ಕೆ ತೆರೆಗೆ ಬರೋದು ಕನ್ಫರ್ಮ್ ಆಗಿದೆ. ಅಂದಹಾಗೆ ಮಾರುತ ಸಿನಿಮಾದಲ್ಲಿ ದುನಿಯಾ ವಿಜಯ್ ಬೇಟೆಗೆ ಹೊರಟ್ರೆ ಬರಿ ಗೈಲಿ ಬರೋ ಮಾತೇ ಇಲ್ಲ ಅಂತ ಅಬ್ಬರಿಸಿದ್ರೆ, ನಟ ಶ್ರೇಯಸ್ ಮಂಜು ವಿಭಿನ್ನ ಪಾತ್ರದ ಮೂಲಕ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ.
ಶ್ರೇಯಸ್ ಜೊತೆ ಬೇಟೆಗೆ ಹೊರಟ ದುನಿಯಾ ವಿಜಯ್
ರಾಜಾಹುಲಿ, ಅರಮನೆ, ಮಾತಾಡ್ ಮಾತಾಡು ಮಲ್ಲಿಗೆ, ಹೃದಯವಂತ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಿಸಿದವರು ಕೆ ಮಂಜು.. ಇನ್ನೂ ವಾಲಿ, ಕೃಷ್ಣ, ಬಾಸ್ ಮುಂತಾದ ಸಿನಿಮಾಗಳಿಗೆ ಬಂಡವಾಳ ಹೂಡಿದವರು ರಮೇಶ್ ಯಾದವ್. ಸೂರ್ಯವಂಶ, ಸಿಂಹಾದ್ರಿಯ ಸಿಂಹ, ಚೆಲುವಿನ ಚಿತ್ತಾರ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದವರು ಎಸ್ ನಾರಾಯಣ್. ಸ್ಯಾಂಡಲ್‌ವುಡ್‌ನ ಈ ಮೂವರು ದಿಗ್ಗಜರು ಮಾರುತ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.
ಕಲಾಸಾಮ್ರಾಟ್ ಮಾರುತಗೆ ಕೈ ಜೋಡಿಸಿದ ಸೀನಿಯರ್ಸ್
ಮಾರುತ ಸಿನಿಮಾಗೆ ಕಲಾಸಾಮ್ರಾಟ್ ಎಸ್ ನಾರಾಯಣ್ ಆಕ್ಷನ್ ಕಟ್ ಹೇಳಿದ್ದು, ಇದು ಅವರು ನಿರ್ದೇಶನದ 51ನೇ ಸಿನಿಮಾ. ಸದ್ಯ ಕೌಟುಂಬಿಕ ಜಂಜಾಟದ ಜಟಾಪಟಿಯ ನಡುವೆಯೂ ಮಾರುತ ಸಿನಿಮಾ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ ನಿರ್ದೇಶಕ ಎಸ್ ನಾರಾಯಣ್. ಸದ್ಯ ಕಲಾಸಾಮ್ರಾಟ್ ಹಾಗೂ ದುನಿಯಾ ವಿಜಯ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮಾರುತ ಸಿನಿಮಾದ ಹಾಡೊಂದು ರೀಸೆಂಟ್ ಆಗಿ ಬಿಡುಗಡೆಯಾಯಿತು. ಎಸ್ ನಾರಾಯಣ್ ಅವರೇ ಬರೆದು, ರಾಗ ಸಂಯೋಜಿಸಿರುವ ಈ ಹಾಡನ್ನು, ಚಂದನ್ ಶೆಟ್ಟಿ ಹಾಡಿದ್ರು.
ಅ-31 ಕ್ಕೆ ಮಾರುತ ದರ್ಶನ.. ದಸರಾಗೆ ಚಂಡಮಾರುತ ಫಿಕ್ಸ್
ಅಂದಹಾಗೆ ದುನಿಯಾ ವಿಜಯ್ ಚಿತ್ರತಂಡಕ್ಕೆ ಬರುವವರೆಗೂ ಈ ಶೀರ್ಷಿಕೆ ಬಂದಿರಲಿಲ್ಲ. ಅವರು ಬಂದ ನಂತರ ಮಾರುತ ಶೀರ್ಷಿಕೆ ಇಡಲಾಯಿತು. ಏಕೆಂದರೆ ಹಿಂದೆ ನಾವಿಬ್ಬರು ಚಂಡ ಚಿತ್ರ ಮಾಡಿದ್ದೆವು. ಈಗ ಮಾರುತ ಚಿತ್ರ ಮಾಡಿದ್ದೇವೆ. ಎರಡು ಸೇರಿ ಯಶಸ್ಸಿನ ಚಂಡಮಾರುತ ಆಗುವ ಭರವಸೆ ಇದೆ ಎಂದು ಕೆ ಮಂಜು ಹೇಳಿಕೊಂಡಿದ್ರು. ವಿಜಯ್ ಹಾಗೂ ನಿರ್ಮಾಪಕ ಕೆ.ಮಂಜು ಕಾಂಬಿನೇಶನ್ ನ ಮೂರನೇ ಚಿತ್ರ ಇದು.
ಕ್ರೇಜಿಸ್ಟಾರ್ ಜೊತೆ ಒಂಟಿ ಸಲಗ.. ಥೀಯೇಟರ್‌ನಲ್ಲಿ ಹಬ್ಬ..!
ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು, ಬೃಂದಾ, ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಡಾ ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಮಾರುತ ಚಿತ್ರದ ವಿಶೇಷ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಟಿಸಿದ್ದಾರೆ.
ತಮ್ಮ ಅಮೋಘ ನಟನೆಯ ಮೂಲಕ ಜನಮನಸೂರೆಗೊಂಡಿರುವ ದುನಿಯಾ ವಿಜಯ್ ಹಾಗೂ ಉತ್ಸಾಹಿ ಯುವನಟ ಶ್ರೇಯಸ್ ಮಂಜು ಅವರ ಸಮಾಗಮದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ʼಮಾರುತʼ ಚಿತ್ರ ಅಕ್ಟೋಬರ್ 31ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಒಟ್ಟಿನಲ್ಲಿ ಹಲವು ವಿಶೇಷತೆಗಳಿಂದ ಕುತೂಹಲ ಹುಟ್ಟಿಸಿರೋ ಮಾರುತ ಸಿನಿಮಾ ದಸರಾಗೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಲಿದೆ.
 
			
 
					




 
                             
                             
                             
                            