ಮಾಸ್ ವೆಂಚರ್ ಮಾರುತ ದುನಿಯಾದಲ್ಲೊಂದು ಭಕ್ತಿ ಪ್ರಧಾನ ಗೀತೆಯಿದೆ. ಸವದತ್ತಿ ಎಲ್ಲಮ್ಮ ಉಧೋ ಉಧೋ ಎನ್ನುತ್ತಿದೆ ಕರುನಾಡು. ಯೆಸ್.. ಶ್ರೇಯಸ್ ಮಂಜು-ದುನಿಯಾ ವಿಜಯ್‌ರ ಮಾರುತದಲ್ಲಿ ಬೃಂದಾ ಆಚಾರ್ಯ ಡಿಫರೆಂಟ್ ಹಾಡೊಂದನ್ನ ಮಾಡಿದ್ದಾರೆ. ನವರಾತ್ರಿ ದಸರಾ ಉತ್ಸವ ಹಿನ್ನೆಲೆ ರಿವೀಲ್ ಆಗಿರೋ ಆ ಗೀತೆಯ ವಿಶೇಷತೆಗಳೇನು ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಇದು ಮಾರುತ ಚಿತ್ರದ ಮತ್ತೊಂದು ಸಾಂಗ್ ಝಲಕ್. ನಮ್ಮಮ್ಮ ಸವದತ್ತಿ ಎಲ್ಲಮ್ಮ ಅನ್ನೋ ಈ ಹಾಡು ಸವದತ್ತಿ ಎಲ್ಲಮ್ಮನ ಕುರಿತಾದ ಭಕ್ತಿ ಪ್ರಧಾನ ಗೀತೆ ಆಗಿದ್ದು, ಮಾಸ್ ಸಿನಿಮಾ ಅಂದುಕೊಳ್ಳೋರಿಗೆ ಇದೊಂದು ಅಚ್ಚರಿ ಮೂಡಿಸಿದೆ. ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಕೇಂದ್ರಬಿಂದು ಆಗಿರೋ ಈ ಹಾಡು, ಉತ್ತರ ಕರ್ನಾಟಕ ಮಂದಿಯ ಡಿವೋಷನಲ್ ಆ್ಯಂಥೆಮ್‌ನಂತಿದೆ. ಅನನ್ಯ ಭಟ್ ಕಂಠದಲ್ಲಿ ಅಷ್ಟೇ ಸೊಗಸಾಗಿ ಈ ಹಾಡು ಮೂಡಿಬಂದಿದೆ.
ಸವದತ್ತಿ ಎಲ್ಲಮ್ಮನಾದ ಬೃಂದಾ.. ‘ಮಾರುತ’ ಮಹಾಗಮನ
ಭಕ್ತಿಪ್ರಧಾನ ಗೀತೆಗೆ ಉಧೋ ಉಧೋ ಅಂತಿದೆ ಕರುನಾಡು
ಕಲಾಸಾಮ್ರಾಟ್ ಎಸ್ ನಾರಾಯಣ್ 50 ಸಿನಿಮಾಗಳ ಬಳಿಕ ನಿರ್ದೇಶಿಸಿರೋ ಮತ್ತೊಂದು ಸಿನಿಮಾ ಇದು. ದುನಿಯಾ ವಿಜಯ್ ವಿಶೇಷ ಪಾತ್ರದಲ್ಲಿ ನಟಿಸಿರೋ ಹಾಗೂ ಶ್ರೇಯಸ್ ಮಂಜು ಹೀರೋ ಆಗಿ ಬಣ್ಣ ಹಚ್ಚಿರೋ ಮಾರುತ, ಅಕ್ಷರಶಃ ಚಂಡಮಾರುತ ಆಗಿ ಇದೇ ಅಕ್ಟೋಬರ್ 31ಕ್ಕೆ ತೆರೆಗಪ್ಪಳಿಸಲಿದೆ. ಕೆ ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಈ ಸಿನಿಮಾನ ನಿರ್ಮಾಣ ಮಾಡಿದ್ದಾರೆ.
ಈಗಾಗ್ಲೇ ಟೀಸರ್ ಹಾಗೂ ಸಾಂಗ್ಸ್‌ನಿಂದ ಭರವಸೆ ಮೂಡಿಸಿರೋ ಮಾರುತ ಸಿನಿಮಾ, ದಸರಾ ಹಬ್ಬದ ನವರಾತ್ರಿ ಹಿನ್ನೆಲೆ ಶಕ್ತಿದೇವತೆ ಕುರಿತ ಭಕ್ತಗೀತೆ ರಿಲೀಸ್ ಮಾಡಿದೆ. ಸಾರಸ್ವತ ಲೋಕಕ್ಕೆ ಅಪಾರ ಕೊಡಗೆ ನೀಡಿದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ನಿರ್ದೇಶಕ ಎಸ್. ನಾರಾಯಣ್, 65 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಹಾಡಿನ ಜೊತೆ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನ ಹಂಚಿಕೊಂಡರು.
ಕಲಾಸಾಮ್ರಾಟ್ ಬತ್ತಳಿಕೆಯ ಮಾರುತದಲ್ಲಿ ವಿಜಿ- ಶ್ರೇಯಸ್
ದಸರಾ ನವರಾತ್ರಿ ಹಿನ್ನೆಲೆ ಸಾಂಗ್ ಲಾಂಚ್.. ಶಕ್ತಿ ದೇವತೆ ಭಕ್ತಿ
ತಾರಾ, ರಂಗಾಯಣ ರಘು, ಸಾಧುಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರೋ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಶಿಸ್ತಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಎಸ್ ನಾರಾಯಣ್, ಈ ಸಿನಿಮಾದಲ್ಲಿ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರಂತೆ. ಈಗಾಗ್ಲೇ ಸಾಂಗ್ಸ್ ಹಾಗೂ ಟೀಸರ್ ನೋಡುಗರ ನಿರೀಕ್ಷೆ ಡಬಲ್ ಮಾಡಿದ್ದು, ಅಕ್ಟೋಬರ್ ತಿಂಗಳಾಂತ್ಯಕ್ಕೆ ಥಿಯೇಟರ್‌ನಲ್ಲಿ ಮಸ್ತ್ ಮನರಂಜನೆ ನೀಡುವ ಧಾವಂತದಲ್ಲಿದೆ.