ಕೌಲಾಲಂಪುರ್: ಮಲೇಷ್ಯಾದ ಸೆಪಾಂಗ್‌ನ ಮಾರಿಯಮ್ಮನ್ ದೇವಸ್ಥಾನದಲ್ಲಿ ಆಶೀರ್ವಾದದ ನೆಪದಲ್ಲಿ ಮಾಡೆಲ್‌ಗೆ ಹಿಂದೂ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಲಿಶಲ್ಲಿನಿ ಕನರನ್ (Lishalliny Kanaran) ಎಂಬ ಮಾಡೆಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿವರಿಸಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಲಿಶಲ್ಲಿನಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಹೀಗೆ ವಿವರಿಸಿದ್ದಾರೆ: “ನನ್ನ ತಾಯಿ ಭಾರತಕ್ಕೆ ತೆರಳಿದ್ದರಿಂದ, ಜೂನ್ 21ರಂದು ನಾನು ಯಾವಾಗಲೂ ಭೇಟಿಯಾಗುತ್ತಿದ್ದ ಮಾರಿಯಮ್ಮನ್ ದೇವಸ್ಥಾನಕ್ಕೆ ಹೋಗಿದ್ದೆ. ಭಕ್ತಿಯ ವಿಷಯದಲ್ಲಿ ನಾನು ಹೊಸಬಳು, ಆದರೆ ಈ ದೇವಸ್ಥಾನಕ್ಕೆ ತೆರಳುವಾಗಿನಿಂದ ಅರ್ಚಕರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ದಿನ ದೇವರಿಗೆ ಪೂಜೆ ಸಲ್ಲಿಸುವಾಗ, ಅರ್ಚಕರು ಬಂದು ‘ಪವಿತ್ರ ನೀರು ಮತ್ತು ದಾರವನ್ನು ನಿನಗೆ ಕೊಡುತ್ತೇನೆ, ಇದು ಆಶೀರ್ವಾದದ ರೀತಿಯಾಗಿದೆ’ ಎಂದು ಹೇಳಿದರು. ಆದರೆ, ಶನಿವಾರವಾದ್ದರಿಂದ ದೇವಸ್ಥಾನದಲ್ಲಿ ಜನಸಂದಣಿಯಿತ್ತು. ಹೀಗಾಗಿ, ಒಂದೂವರೆ ಗಂಟೆಗಿಂತ ಹೆಚ್ಚು ಕಾಲ ಕಾಯಬೇಕಾಯಿತು.”
“ಅರ್ಚಕರ ಸೂಚನೆಯಂತೆ ಕಾಯುತ್ತಿದ್ದೆ. ಆದರೆ, ಅವರು ನನ್ನನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ಕುಳಿತುಕೊಳ್ಳಲು ಹೇಳಿದಾಗ, ಏನೋ ಸರಿಯಿಲ್ಲ ಎಂಬ ಭಾವನೆ ಕಾಡಿತು. ಆಗ ಅವರು ನನ್ನ ಮುಖದ ಮೇಲೆ ವಿಚಿತ್ರವಾದ, ಗುಲಾಬಿ ಹೂವಿನ ಸುಗಂಧದ ನೀರನ್ನು ಚಿಮುಕಿಸಿದರು. ‘ಇದನ್ನು ಭಾರತದಿಂದ ತರಿಸಿದ್ದು, ಸಾಮಾನ್ಯ ಜನರಿಗೆ ನೀಡುವುದಿಲ್ಲ’ ಎಂದು ಹೇಳಿದರು. ನೀರು ಕಣ್ಣುಗಳಿಗೆ ತಾಗಿದ್ದರಿಂದ ತೆರೆಯಲು ಆಗಲಿಲ್ಲ. ಆಗ ಅವರು ನನ್ನ ಬಟ್ಟೆ ತೆಗೆಯಲು ಸೂಚಿಸಿದರು. ನಾನು ‘ಬಟ್ಟೆ ಬಿಗಿಯಾಗಿದೆ, ತೆಗೆಯಲು ಆಗುವುದಿಲ್ಲ’ ಎಂದು ಹೇಳಿದೆ. ಆಗ ಅವರು ಗದರಿಸಿ, ‘ಅಷ್ಟು ಬಿಗಿಯಾದ ಬಟ್ಟೆ ಧರಿಸಬಾರದು’ ಎಂದು ಹೇಳಿ, ಹಿಂದೆ ಬಂದು ನಿಂತುಕೊಂಡು, ನನ್ನ ಬ್ಲೌಸ್ ಒಳಗೆ ಕೈಹಾಕಿ ಅನುಚಿತವಾಗಿ ಮುಟ್ಟಿದರು.”
ಲಿಶಲ್ಲಿನಿ ಮುಂದುವರೆದು, “ನಾನು ಆಘಾತದಿಂದ ತಟಸ್ಥಳಾಗಿ ನಿಂತೆ. ಮಾತನಾಡಲು ಆಗಲಿಲ್ಲ, ಎದ್ದು ಹೋಗಲೂ ಆಗಲಿಲ್ಲ. ಆಗ ಅವರು, ‘ನಾನು ದೇವರ ಸೇವೆ ಮಾಡುತ್ತೇನೆ, ಈ ರೀತಿ ಮಾಡಿದರೆ ನಿನಗೆ ಆಶೀರ್ವಾದ ಸಿಗುತ್ತದೆ, ಈ ವಾರ ನಿನಗೆ ಅದೃಷ್ಟಕರವಾಗಿರುತ್ತದೆ’ ಎಂದು ಹೇಳಿದರು. ಈ ಘಟನೆಯಿಂದ ಕೆಲ ದಿನಗಳ ಕಾಲ ಆಘಾತದಲ್ಲಿದ್ದೆ. ಅರ್ಚಕನೊಬ್ಬ ಇಂತಹ ಕೃತ್ಯ ಎಸಗಿದ ಎಂಬುದನ್ನು ನಂಬಲಾಗಲಿಲ್ಲ. ಜುಲೈ 4ರಂದು ನಾನು ತಾಯಿಗೆ ವಿಷಯ ತಿಳಿಸಿದೆ. ಅದೇ ದಿನ ಪೊಲೀಸರ ಬಳಿ ದೂರು ದಾಖಲಿಸಿದೆ.”
ಪೊಲೀಸರು ದೇವಸ್ಥಾನಕ್ಕೆ ತೆರಳಿದಾಗ, ಆರೋಪಿಯಾದ ಅರ್ಚಕನು ಅದಾಗಲೇ ಪರಾರಿಯಾಗಿದ್ದ. ಸದ್ಯ, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ದೇವಸ್ಥಾನದ ಮಂಡಳಿಯವರು ತಮ್ಮ ಸಂಸ್ಥೆಯ ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಲಿಶಲ್ಲಿನಿ ಆರೋಪಿಸಿದ್ದಾರೆ. “ಪೊಲೀಸರು ನನಗೆ ಈ ವಿಷಯವನ್ನು ಎಲ್ಲಿಯೂ ಪ್ರಚಾರ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೆ ಮಾಡಿದರೆ ಅದು ನನ್ನ ತಪ್ಪಾಗುತ್ತದೆ ಎಂದು ಹೇಳಿದ್ದಾರೆ,” ಎಂದು ಲಿಶಲ್ಲಿನಿ ತಿಳಿಸಿದ್ದಾರೆ.