ಕೌಲಾಲಂಪುರ್: ಮಲೇಷ್ಯಾದ ಸೆಪಾಂಗ್‌ನ ಮಾರಿಯಮ್ಮನ್ ದೇವಸ್ಥಾನದಲ್ಲಿ ಆಶೀರ್ವಾದದ ನೆಪದಲ್ಲಿ ಮಾಡೆಲ್‌ಗೆ ಹಿಂದೂ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಲಿಶಲ್ಲಿನಿ ಕನರನ್ (Lishalliny Kanaran) ಎಂಬ ಮಾಡೆಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿವರಿಸಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಲಿಶಲ್ಲಿನಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಹೀಗೆ ವಿವರಿಸಿದ್ದಾರೆ: “ನನ್ನ ತಾಯಿ ಭಾರತಕ್ಕೆ ತೆರಳಿದ್ದರಿಂದ, ಜೂನ್ 21ರಂದು ನಾನು ಯಾವಾಗಲೂ ಭೇಟಿಯಾಗುತ್ತಿದ್ದ ಮಾರಿಯಮ್ಮನ್ ದೇವಸ್ಥಾನಕ್ಕೆ ಹೋಗಿದ್ದೆ. ಭಕ್ತಿಯ ವಿಷಯದಲ್ಲಿ ನಾನು ಹೊಸಬಳು, ಆದರೆ ಈ ದೇವಸ್ಥಾನಕ್ಕೆ ತೆರಳುವಾಗಿನಿಂದ ಅರ್ಚಕರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ದಿನ ದೇವರಿಗೆ ಪೂಜೆ ಸಲ್ಲಿಸುವಾಗ, ಅರ್ಚಕರು ಬಂದು ‘ಪವಿತ್ರ ನೀರು ಮತ್ತು ದಾರವನ್ನು ನಿನಗೆ ಕೊಡುತ್ತೇನೆ, ಇದು ಆಶೀರ್ವಾದದ ರೀತಿಯಾಗಿದೆ’ ಎಂದು ಹೇಳಿದರು. ಆದರೆ, ಶನಿವಾರವಾದ್ದರಿಂದ ದೇವಸ್ಥಾನದಲ್ಲಿ ಜನಸಂದಣಿಯಿತ್ತು. ಹೀಗಾಗಿ, ಒಂದೂವರೆ ಗಂಟೆಗಿಂತ ಹೆಚ್ಚು ಕಾಲ ಕಾಯಬೇಕಾಯಿತು.”
ಪೊಲೀಸರು ದೇವಸ್ಥಾನಕ್ಕೆ ತೆರಳಿದಾಗ, ಆರೋಪಿಯಾದ ಅರ್ಚಕನು ಅದಾಗಲೇ ಪರಾರಿಯಾಗಿದ್ದ. ಸದ್ಯ, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ದೇವಸ್ಥಾನದ ಮಂಡಳಿಯವರು ತಮ್ಮ ಸಂಸ್ಥೆಯ ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಲಿಶಲ್ಲಿನಿ ಆರೋಪಿಸಿದ್ದಾರೆ. “ಪೊಲೀಸರು ನನಗೆ ಈ ವಿಷಯವನ್ನು ಎಲ್ಲಿಯೂ ಪ್ರಚಾರ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೆ ಮಾಡಿದರೆ ಅದು ನನ್ನ ತಪ್ಪಾಗುತ್ತದೆ ಎಂದು ಹೇಳಿದ್ದಾರೆ,” ಎಂದು ಲಿಶಲ್ಲಿನಿ ತಿಳಿಸಿದ್ದಾರೆ.
