ಲಕ್ಕಿ.. ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚೊಚ್ಚಲ ಸಿನಿಮಾ. ರಾಕಿಂಗ್ ಸ್ಟಾರ್ ಯಶ್- ಮೋಹಕತಾರೆ ರಮ್ಯಾ ಜೋಡಿಯ ಈ ಚಿತ್ರ ತೆರೆಕಂಡು 13 ವರ್ಷಗಳಾದ್ರೂ, ಇನ್ನೂ ಸೆಟಲ್ ಆಗಿಲ್ಲ ಲೆಕ್ಕಗಳು. ಸದ್ಯ ಜಮೀರ್ ಅಹಮದ್ ಲೋಕಾಯುಕ್ತ ಬಲೆಗೆ ಸಿಲುಕಿದ್ದು, ಅದೇ ವಿಚಾರಕ್ಕೆ ಸ್ವೀಟಿ ಕೂಡ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಇಷ್ಟಕ್ಕೂ ಆ ಕೇಸ್‌ಗೂ ರಾಧಿಕಾಗೂ ಏನ್ ಸಂಬಂಧ ಅಂತೀರಾ..? ಇಲ್ಲಿದೆ ಡಿಟೇಲ್ಸ್.
- ಸೆಟಲ್ ಆಗದ ಲಕ್ಕಿ ಲೆಕ್ಕ.. ಲೋಕಾಯುಕ್ತ ಬಲೆಯಲ್ಲಿ ಸ್ವೀಟಿ
- 13 ವರ್ಷಗಳ ಹಿಂದೆ ಜಮೀರ್ ಜೊತೆ 2 ಕೋಟಿ ವ್ಯವಹಾರ
- ಲೋಕಾಯುಕ್ತ ವಿಚಾರಣೆಯಲ್ಲಿ ರಾಧಿಕಾ ಕುಮಾರಸ್ವಾಮಿ..!
- ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ.. ಚಿತ್ರರಂಗದ ನಂಟು?
ಲಕ್ಕಿ.. ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ನಟನೆಯ ಸಿನಿಮಾ. ಡಾ ಸೂರಿ ನಿರ್ದೇಶನದ ಈ ಸಿನಿಮಾಗೆ ರಾಧಿಕಾ ಕುಮಾರಸ್ವಾಮಿ ಹಣ ಹೂಡಿಕೆ ಮಾಡಿದ್ರು. 2012ರ ಫೆಬ್ರವರಿ 24ರಂದು ತೆರೆಕಂಡ ಈ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆದುಕೊಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕೂಡ ಈ ಚಿತ್ರದ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿತ್ತು.
ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಒಂದೊಂದು ಹಾಡು ಕೂಡ ಸಿಕ್ಕಾಪಟ್ಟೆ ಹಿಟ್ ಆಗಿದ್ದವು. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಆ ಚಿತ್ರದ ಬಳಿಕ ರಮ್ಯಾ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಎಂ.ಪಿ. ಆಗಿ ಪಾರ್ಲಿಮೆಂಟ್‌ಗೆ ಹೆಜ್ಜೆ ಇಟ್ಟಿದ್ರು. ಸದ್ಯ ಯಶ್ ನ್ಯಾಷನಲ್ ಸ್ಟಾರ್ ಆಗಿ, ಇಂಟರ್‌ನ್ಯಾಷನಲ್ ಲೆವೆಲ್ ಸಿನಿಮಾಗಳಿಂದ ಸದ್ದು ಮಾಡ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಮತ್ತೆರಡು ಸಿನಿಮಾಗಳನ್ನ ನಿರ್ಮಾಣ ಮಾಡಿದ್ರು. ಏಳೆಂಟು ಚಿತ್ರಗಳಲ್ಲಿ ಕೂಡ ನಟಿಸಿದ್ರು ರಾಧಿಕಾ.
ಹೀಗೆ.. ಲಕ್ಕಿ ಸಿನಿಮಾ ತೆರೆಕಂಡು ಬರೋಬ್ಬರಿ 13 ವರ್ಷಗಳಾದ ಬಳಿಕ, ಇದೀಗ ಆ ಚಿತ್ರದ ನಿರ್ಮಾಪಕರ ಹಣಕಾಸಿನ ವ್ಯವಹಾರಗಳು ಮುನ್ನೆಲೆಗೆ ಬಂದಿವೆ. ಹೌದು.. ಸಚಿವ ಜಮೀರ್ ಅಹಮದ್ ಖಾನ್‌ರಿಂದ ಲಕ್ಕಿ ಚಿತ್ರದ ನಿರ್ಮಾಣಕ್ಕಾಗಿ ಎರಡು ಕೋಟಿ ಹಣ ಪಡೆದಿದ್ದ ರಾಧಿಕಾ ಕುಮಾರಸ್ವಾಮಿಯವನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ. ಕರೆಸಿ, ಹಣಕಾಸು ಲೇವಾದೇವಿ ವಿಚಾರ ರಾಧಿಕಾ ಸ್ಟೇಟ್‌ಮೆಂಟ್ ಕೂಡ ಪಡೆದಿದ್ದಾರಂತೆ. ಅಂದಹಾಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಎದುರಿಸುತ್ತಿರೋ ಜಮೀರ್ ಖಾನ್‌ಗೆ ಈಗ ಚಿತ್ರರಂಗದ ನಂಟಿರೋದು ಇದ್ರಿಂದ ಬಯಲಾಗಿದೆ.
ಕಳೆದ ತಿಂಗಳಲ್ಲೇ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ತೆರಳಿದ್ದ ರಾಧಿಕಾ ಕುಮಾರಸ್ವಾಮಿ, ಚಿತ್ರ ನಿರ್ಮಾಣದ ಸಮಯದಲ್ಲಿ ಹಣ ಪಡೆದಿರೋದನ್ನ ಒಪ್ಪಿಕೊಂಡಿದ್ದಾರಂತೆ. ಆದ್ರೆ ಅಷ್ಟು ವರ್ಷಗಳಿಂದ ಆ ಲೆಕ್ಕ ಕ್ಲಿಯರ್ ಆಗದೆ ಹಾಗೆಯೇ ಉಳಿದಿರೋದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಮತ್ತಷ್ಟು ವಿಷಯಗಳು ಮುಂದಿನ ದಿನಗಳಲ್ಲಿ ಹೊರಬರಲಿವೆ ಎನ್ನಲಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್