ದುನಿಯಾ ವಿಜಯ್ ಸಿನಿದುನಿಯಾಗೊಂದು ಮಹತ್ವದ ತಿರುವು ಸಿಕ್ಕಿದೆ. ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಕರಿಯರ್ ಮುಗಿದೇ ಹೋಯ್ತು ಅಂದವ್ರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ರಾಜ್ ಬಿ ಶೆಟ್ಟಿಯಲ್ಲಿರೋ ಅಸಲಿ ಕಲಾವಿದ ಹೊರಬಂದಿದ್ದಾನೆ. ಒಂದೇ ಬಗೆಯ ಸಿನಿಮಾಗಳನ್ನ ಮಾಡ್ತಿದ್ದ ಸ್ಯಾಂಡಲ್‌ವುಡ್‌ನಲ್ಲೊಂದು ಭಿನ್ನ ಅಲೆಯ ಸಿನಿಮಾ ತೆರೆಗಪ್ಪಳಿಸಿದೆ. ಇವೆಲ್ಲಕ್ಕೂ ಉತ್ತರ ಲ್ಯಾಂಡ್‌ಲಾರ್ಡ್. ಯೆಸ್.. ಇಂದು ರಿಲೀಸ್ ಆಗಿರೋ ಲ್ಯಾಂಡ್‌ಲಾರ್ಡ್ ಹೇಗಿದೆ..? ಕಥೆ ಏನು..? ಮೇಕಿಂಗ್ ಹೇಗಿದೆ..? ಏನು ಪ್ಲಸ್ ಏನು ಮೈನಸ್ ಅನ್ನೋ ಕಂಪ್ಲೀಟ್ ರಿವ್ಯೂ ರಿಪೋರ್ಟ್ ಇಲ್ಲಿದೆ.
- ಕಾಟೇರ ಮೀರಿಸೋ ಲ್ಯಾಂಡ್‌ಲಾರ್ಡ್‌ಗೆ ಪ್ರೇಕ್ಷಕ ಫಿದಾ
- ಕ್ರಾಂತಿಯ ಕಿಡಿ ಮಾತ್ರವಲ್ಲ.. ಚಿತ್ರರಂಗಕ್ಕೆ ಹೊಸ ತಿರುವು
- 80ರ ದಶಕದ ಅಸಮಾನತೆ & ಸಂವಿಧಾನದ ಕೈಗನ್ನಡಿ..!
- ಕೂಲಿಕಾರ & ಜಮೀನ್ದಾರನ ನಡುವಿನ ಮಹಾ ಸಂಘರ್ಷ
ದರ್ಶನ್ ನಟನೆಯ ಕಾಟೇರ ಸಿನಿಮಾದ ಕಥೆ, ಮೇಕಿಂಗ್, ಪಾತ್ರಗಳು ಹಾಗೂ ಪರ್ಫಾಮೆನ್ಸ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಲ್ಯಾಂಡ್‌ಲಾರ್ಡ್ ಸಿನಿಮಾ ಕಾಟೇರನ ಮೀರಿಸೋ ಕಥೆಯಾಗಿ ಹೊರಹೊಮ್ಮಿರೋದು ಇಂಟರೆಸ್ಟಿಂಗ್ ವಿಷಯ. ಅಂದಹಾಗೆ ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಅದೇ ಜಡೇಶ್ ಕೆ ಹಂಪಿ ಈ ಲ್ಯಾಂಡ್‌ಲಾರ್ಡ್‌ಗೂ ಕಥೆ ಬರೆದು, ಆ್ಯಕ್ಷನ್ ಕಟ್ ಹೇಳಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದು 80ರ ದಶಕದಲ್ಲಿ ಕೋಲಾರ, ಮುಳಬಾಗಿಲು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯೋ ಕಥಾನಕ. ರಾಮದುರ್ಗ ಹಾಗೂ ಹುಲಿದುರ್ಗ ಅನ್ನೋ ಊರುಗಳಲ್ಲಿರೋ ಶ್ರೀಸಾಮಾನ್ಯ ಜನ, ಅವ್ರನ್ನ ಶೋಷಣೆ ಮಾಡ್ತಾ ಬದುಕೋ ಜಮೀನ್ದಾರ. ಹಕ್ಕುಗಳಿಗಾಗಿ ಹೋರಾಡುವ ಅವ್ರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು, ಕಾನೂನು, ಪೊಲೀಸ್ ಠಾಣೆ ಎಲ್ಲವನ್ನು ಮೀರಿ ತಾವೇ ಸರ್ಕಾರದಂತೆ ವರ್ತಿಸೋ ಜಮೀನ್ದಾರ. ಅಲ್ಲಿನ ಆಚಾರಗಳು, ಪದ್ದತಿಗಳು, ದರ್ಪ, ದಬ್ಬಾಳಿಕೆಗಳ ಒಟ್ಟಾರೆ ಚಿತ್ರಣ ಲ್ಯಾಂಡ್‌ಲಾರ್ಡ್.
ಬರೋಬ್ಬರಿ 30 ವರ್ಷಗಳ ಕಾಲ ಜಮೀನ್ದಾರನ ಮನೆಯಲ್ಲಿ ಜೀತದಾಳುವಿನಂತೆ ದುಡಿದ ರೈತನೊಬ್ಬ, ಹೆಂಡ್ತಿ ಹಾಗೂ ಮಗನ ಜೊತೆ ಒಡೆಯನ ಮನೆಗೆ ತೆರಳಿ, ತನಗೆ ಅಂತಲೇ ಎರಡು ಎಕರೆ ಜಮೀನು ಕೇಳ್ತಾನೆ. ಆದ್ರೆ ಆ ರೈತ ಎಲ್ಲಿ ಜಮೀನ್ದಾರ ಆಗ್ತಾನೋ ಅನ್ನೋ ಭಯದಲ್ಲಿ ಜಮೀನ್ದಾರ, ಭೂಮಿ ಕೊಡದೆ ಅವಮಾನ ಮಾಡ್ತಾನೆ. ಆಗ ಆತನ ಪತ್ನಿ ಕೋಪದಲ್ಲಿ ಮಗನಿಗೊಂದು ಷರತ್ತು ಹಾಕ್ತಾಳೆ. ನಿನಗೆ ಅಂತ ಒಂದಷ್ಟು ಭೂಮಿ ಸಂಪಾದಿಸಿ, ಅದರಲ್ಲಿ ಬೆಳೆ ಬೆಳೆದು ತೋರಿಸು. ಅಲ್ಲಿಯವರೆಗೂ ನನ್ನ ಕೈ ತುತ್ತು ಇಲ್ಲ, ಮಾತು ಕೂಡ ಆಡಲ್ಲ ಅಂತಾರೆ. ಅಲ್ಲಿಂದಲೇ ಭೂಮಿಗಾಗಿ, ದುಡಿಮೆಗಾಗಿ ಆ ಹುಡುಗನಲ್ಲಿ ಒಂದು ಕಿಚ್ಚು ಹೊತ್ತಿಕೊಳ್ಳಲಿದೆ. ಆತನೇ ಚಿತ್ರದ ಕಥಾನಾಯಕ ರಾಚಯ್ಯ.
ರಾಚಯ್ಯನಿಗೆ ನಿಂಗವ್ವ ಅನ್ನೋ ಪತ್ನಿ. ಭಾಗ್ಯ ಅನ್ನೋ ಮಗಳು. ತನ್ನಂತೆ ತನ್ನ ಮಕ್ಕಳಾಗಬಾರದು ಅನ್ನೋ ಕಾರಣಕ್ಕೆ ಭಾಗ್ಯಳನ್ನ ಚೆನ್ನಾಗಿ ಓದಿಸಿ, ಪೊಲೀಸ್ ಕಾನ್ಸ್‌ಟೇಬಲ್ ಮಾಡ್ತಾರೆ ರಾಚಯ್ಯ. ಭಯದ ಕಾಡಲ್ಲಿ ಬದುಕ್ತಿರೋ ಅಂತಹ ಹುಲಿದುರ್ಗದ ಜನತೆಗೆ ರಾಚಯ್ಯ ಹಾಗೂ ಆತನ ಕುಟುಂಬ ಒಂಥರಾ ಧೈರ್ಯದ ಗಾಳಿಯಾಗಿ ಬೀಸುತ್ತೆ. ಜಮೀನ್ದಾರನ ವಿರುದ್ಧ ಸಿಡಿದೇಳುವ ಕಾರ್ಯ ಮಾಡ್ತಾರೆ. ಹಕ್ಕುಗಳಿಗಾಗಿ ಹೋರಾಟ ಮಾಡ್ತಾರೆ. ಆ ಸಂಘರ್ಷದಲ್ಲಿ ಸಾಕಷ್ಟು ಸಾವು ನೋವುಗಳು ಆಗುತ್ತೆ. ಮಾತಿಗೆ ಉದುರದ ಮಾವಿನ ಕಾಯಿಗಳು ಕಲ್ಲೇಟಿಗೆ ಉದುರುವ ರೀತಿ, ಕೊಡ್ಲಿ ರಾಚಯ್ಯನ ಕೊಡಲಿ ಏಟಿಗೆ ಜಮೀನ್ದಾರನೇ ನಡುಗುವಂತಾಗ್ತಾನೆ.
80ರ ದಶಕದ ಶೋಷಣೆ, ಅಸಮಾನತೆ ಹಾಗೂ ಸಂವಿಧಾನದ ಕೈಗನ್ನಡಿಯಂತಿರೋ ಲ್ಯಾಂಡ್‌ಲಾರ್ಡ್ ಮೂವಿ, ಕೂಲಿಕಾರ ಹಾಗೂ ಜಮೀನ್ದಾರನ ನಡುವಿನ ಮಹಾ ಸಂಘರ್ಷದ ಕಥೆಯಾಗಿ ಹೊರಹೊಮ್ಮಿದೆ.
- ಕೊಡ್ಲಿ ರಾಚಯ್ಯನಾಗಿ ವಿಜಯ್ ಬೆಂಕಿ ಚೆಂಡಿನ ಪ್ರತಿರೂಪ
- ನಿಂಗವ್ವನಾಗಿ ಲೇಡಿ ಸೂಪರ್ ಸ್ಟಾರ್ ರಚಿತಾ ಹೊಸ ಪರ್ವ
- ರಾಜ್ ಶೆಟ್ಟಿ ವಿಲನ್ ಖದರ್.. ಶಿಳ್ಳೆ, ಚಪ್ಪಾಳೆಗಳ ಸುರಿಮಳೆ
- ರಿತನ್ಯ ಖಾಕಿ ಪವರ್.. ಬೆಳ್ಳಿತೆರೆಗೆ ಒಂದು ಹೊಸ ಮುತ್ತು..!!
ಎರಡು ಶೇಡ್‌ಗಳಲ್ಲಿ ದುನಿಯಾ ವಿಜಯ್ ನೋಡುಗರನ್ನ ರಂಜಿಸ್ತಾರೆ. ರಾಚಯ್ಯ ಅನ್ನೋ ಮುಗ್ಧ, ಜಾಣ ಪೆದ್ದು ಒಂದ್ಕಡೆ, ಕೊಡ್ಲಿ ರಾಚಯ್ಯನಾಗಿ ಕೊಡ್ಲಿ ಹಿಡಿದು ಶತ್ರುಗಳನ್ನ ಚೆಂಡಾಡೋ ಅಡವಿರಾಯನ ಅವತಾರ. ಹೀಗೆ ಎರಡೂ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬೆಂಕಿ ಚೆಂಡಿನ ಪ್ರತಿರೂಪವಾಗಿ ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ಮಿಂಚು ಹರಿಸಿದ್ದಾರೆ. ತುಂಬಾ ಸಹಜ ಹಾಗೂ ಸ್ವಾಭಾವಿಕ ನಟನೆಯಿಂದ ವಿಜಯ್ ಈ ಬಾರಿ ಕರುನಾಡಿನ ಮಂದಿಯ ಅಚ್ಚುಮೆಚ್ಚಿನ ಸ್ಟಾರ್ ಆಗಿ ಫಸ್ಟ್ ಲೇಯರ್ ಹೀರೋಗಳ ಲಿಸ್ಟ್ ಸೇರಿದ್ದಾರೆ. ಹಳ್ಳಿಯಿಂದಲೇ ಬಂದು ತನ್ನದೇ ಆದ ದುನಿಯಾ ಕಟ್ಟಿಕೊಂಡಿರೋ ವಿಜಯ್, ರಾಚಯ್ಯನ ಪಾತ್ರದಲ್ಲಿ ಜೀವಿಸಿದ್ದಾರೆ.
ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ನಿಂಗವ್ವನ ಪಾತ್ರದಲ್ಲಿ ಹಿಂದೆಂದೂ ಮಾಡಿರದಂತಹ ರೋಲ್ ಮಾಡಿ ಸೈ ಅನಿಸಿಕೊಂಡಿದ್ದಾರೆ. ಮದ್ವೆ ಮಾಡುವ ಹೆಣ್ಣು ಮಗಳಿರೋ ತಾಯಿಯಾಗಿ, ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ರಚ್ಚು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪತ್ನಿಯಾಗಿ, ತಾಯಿಯಾಗಿ, ಆಗಾಗ ಊರ ಮಂದಿಯ ರಕ್ಷಣೆಗೆ ಕೊಡಲಿ ಹಿಡಿದು ಘರ್ಜಿಸೋ ರೆಬೆಲ್ ಮಹಿಳೆಯಾಗಿ ಒಳ್ಳೆಯ ಸ್ಕೋರ್ ಮಾಡಿದ್ದಾರೆ ಡಿಂಪಲ್ ಕ್ವೀನ್.
ರಾಜ್ ಬಿ ಶೆಟ್ಟಿ.. ಓ ಮೈ ಗಾಡ್.. ಇವರ ನಟನೆ ಈ ಚಿತ್ರದಲ್ಲಿ ನೆಕ್ಸ್ಟ್ ಲೆವೆಲ್. ಹೀರೋ ಹೀರೋಯಿಸಂಗೆ ಎದುರಿಗೆ ಇರೋ ಖಳನಾಯಕ ಆತನಿಗಿಂತ ಖಡಕ್ ಆಗಿರಬೇಕಂತೆ. ಅದ್ರಂತೆ ಜಮೀನ್ದಾರನ ಪಾತ್ರದಲ್ಲಿ ರಾಜ್ ಶೆಟ್ಟಿ ಇದೇ ಮೊದಲ ಬಾರಿಗೆ ರಾ & ರಗಡ್ ಪಾತ್ರ ಮಾಡಿದ್ದಾರೆ. ಇಲ್ಲಿಯವರೆಗೆ ನಾವ್ಯಾರೂ ನೋಡದೇ ಇರೋ ಅಂತಹ ರಾಜ್‌ರನ್ನ ಇಲ್ಲಿ ಕಾಣಬಹುದು. ಯಾವುದಕ್ಕೂ ನೋ ಅನ್ನದೆ, ಆ ಜಮೀನ್ದಾರನ ಗತ್ತಿನ ಪಾತ್ರಕ್ಕೆ ಬೇಕಾದ ಸೀನ್‌ಗಳಲ್ಲಿ ಮುಜುಗರ, ಮುಲಾಜು ಇಲ್ಲದೆ ನಟಿಸಿದ್ದಾರೆ. ರಾಜ್‌ರಲ್ಲಿರೋ ಅತ್ಯದ್ಭುತ ಕಲಾವಿದ ಹೊರಬರೋಕೆ ಲ್ಯಾಂಡ್‌ಲಾರ್ಡ್ ಒಳ್ಳೆಯ ವೇದಿಕೆ ಆಗಿದೆ.
ಅವರಷ್ಟೇ ಅಲ್ಲದೆ ಶಿಶಿರ್ ಬೈಕಾಡಿ, ಗಾಳಿಪಟ ಭಾವನಾ, ಮಿತ್ರ, ಬಿ ಸುರೇಶ್, ರಾಕೇಶ್ ಅಡಿಗ, ಅಚ್ಯುತ್, ಅಭಿ ದಾಸ್, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್.. ಹೀಗೆ ಸಾಕಷ್ಟು ಮಂದಿ ಕಲಾವಿದರು ಅವರವರ ಪಾತ್ರಗಳನ್ನ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಹಿರಿಯನಟಿ ಉಮಾಶ್ರೀ ರಾಚಯ್ಯನ ತಾಯಿ ಪಾತ್ರದಲ್ಲಿ ಕ್ರಾಂತಿಯ ಕಿಡಿಗೆ ಮುನ್ನುಡಿ ಬರೆಯುವ ಪಾತ್ರದಲ್ಲಿ ಎನರ್ಜಿಟಿಕ್ ಆಗಿ ಅಭಿನಯಿಸಿದ್ದಾರೆ. ಒಂದು ಕಡೆ ಕಣ್ಣು ಒದ್ದೆಯಾಗುವಂತೆಯೂ ಮಾಡ್ತಾರೆ. ಅಲ್ಲದೆ, ನಿರ್ಮಾಪಕ ಸತ್ಯ ಪ್ರಕಾಶ್ ಕೂಡ ಶಿವಾರೆಡ್ಡಿ ಪಾತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ನೀಡಿದ್ದಾರೆ.
- ಮಾಸ್ತಿ ಡೈಲಾಗ್ಸ್.. ಕೋಲಾರ ಭಾಷೆಯೇ ಚಿತ್ರದ ಜೀವಾಳ
- ಸ್ವಾಮಿ ಕ್ಯಾಮೆರಾ, ಅಜನೀಶ್ ಸಂಗೀತ ಸಿನಿಮಾಗೆ ಪ್ಲಸ್..!
80 ದಶಕದ ನೈಜ ಘಟನೆಗಳನ್ನ ಆಧರಿಸಿದ ಕಥೆ ಇದಾಗಿರೋದ್ರಿಂದ ಆ ನೇಟಿವಿಟಿಗೆ ಸಿನಿಮಾನ ಮಾಡೋಕೆ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಿಸಿದೆ. ಕೋಲಾರ, ಮುಳಬಾಗಿಲು ಭಾಷೆಯನ್ನ ಬಹಳ ಸೊಗಸಾಗಿ ಬ್ಲೆಂಡ್ ಮಾಡಿದ್ದಾರೆ ಡೈರೆಕ್ಟರ್ ಜಡೇಶ್. ಅದಕ್ಕೆ ಕಾರಣ ಆಗಿರೋದು ಸಕ್ಸಸ್‌ಫುಲ್ ಚಿತ್ರಗಳ ಡೈಲಾಗ್ ರೈಟರ್ ಮಾಸ್ತಿ. ಮಾಸ್ತಿ ಅವರದ್ದು ಮಾಲೂರು ಆಗಿರೋದ್ರಿಂದ ಈ ಚಿತ್ರ ಕೋಲಾರ ಕನ್ನಡಕ್ಕೆ ಒಗ್ಗಿಕೊಳ್ಳಲು ಅವ್ರ ಪೆನ್ನು ಸಿಕ್ಕಾಪಟ್ಟೆ ಕೆಲಸ ಮಾಡಿರೋದು ಪ್ರತಿ ಮಾತಲ್ಲೂ ಎದ್ದು ಕಾಣುತ್ತೆ.
ಭಯದ ಕಾಡಲ್ಲಿ ಧೈರ್ಯದ ಗಾಳಿ ಬೀಸೈತೆ. ಕಾಪಾಡೋ ದೇವರೇ ಆಯುಧ ಹಿಂಡ್ಕೊಂಡು ನಿಂತಿರುವಾಗ, ಕಾದಾಡುವ ನಾವು ಹಿಡಿಯದಿದ್ರೆ ಹೇಗೆ. ಮಾಡಬೇಕಿರೋದು ಸಂಧಾನ ಅಲ್ಲ, ಸಂವಿಧಾನ. ಇದು ರಾಜಪ್ರಭುತ್ವ ಅಲ್ಲ ಪ್ರಜಾಪ್ರಭುತ್ವ.. ಹೀಗೆ ಸಾಕಷ್ಟು ಡೈಲಾಗ್‌ಗಳು ಮನಸಲ್ಲಿ ಉಳಿಯಲಿವೆ. ಲ್ಯಾಂಡ್‌ಲಾರ್ಡ್ ಕಥೆಗೆ ಮಾಸ್ತಿ ಅವ್ರ ಇಂತಹ ಡೈಲಾಗ್‌ಗಳು ಹಾಗೂ ಕೋಲಾರ ಸ್ಲ್ಯಾಂಗ್ ಜೀವಾಳ ಆಗಿದೆ. ಇನ್ನು ಸ್ವಾಮಿ ಜೆ ಗೌಡ ಕ್ಯಾಮೆರಾ ವರ್ಕ್, ಅಜನೀಶ್ ಲೋಕನಾಥ್ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ಕೆ ಎಂ ಪ್ರಕಾಶ್ ಸಂಕಲನ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ.
ಸಾರಥಿ ಸಿನಿಮಾದ ಬಳಿಕ ರಾಮನ ವನವಾಸದಂತೆ ಬಹುದೊಡ್ಡ ಗ್ಯಾಪ್ ಪಡೆದು, ಒಂದೊಳ್ಳೆ ಸದಭಿರುಚಿಯ ಸಿನಿಮಾ ಮಾಡಿದ್ದಾರೆ ಸಾರಥಿ ಫಿಲಂಸ್ ಬ್ಯಾನರ್‌ನ ನಿರ್ಮಾಪಕ ಸತ್ಯ ಪ್ರಕಾಶ್ ಹಾಗೂ ಹೇಮಂತ್. ಅವರಲ್ಲಿರೋ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದಕ್ಕೆ ಈ ಕಥೆಯ ಆಯ್ಕೆ ಮಾಡಿ, ಕೋಟ್ಯಂತರ ರೂಪಾಯಿ ಹಣ ಸುರಿದು, ಅದಕ್ಕೆ ಸಿನಿಮಾ ರೂಪ ಕೊಡಿಸಿರೋದೇ ಪ್ರತ್ಯಕ್ಷ ಸಾಕ್ಷಿ.
ಅಂದಹಾಗೆ ಲ್ಯಾಂಡ್‌ಲಾರ್ಡ್ ಹಾಗಾದ್ರೆ ಅಷ್ಟು ಚೆನ್ನಾಗಿದೆಯಾ..? ನೆಗೆಟೀವ್ಸ್ ಏನೂ ಇಲ್ವೇ ಇಲ್ವಾ..? ಔಟ್ ಸ್ಟ್ಯಾಂಡಿಂಗ್.. ಮೈಂಡ್ ಬ್ಲೋಯಿಂಗ್ ಮೂವಿನಾ ಅನ್ನೋ ಪ್ರಶ್ನೆ ಕೇಳಬೇಡಿ. ಯಾಕಂದ್ರೆ ನಿರ್ದೇಶಕರು ಮೊದಲಾರ್ಧದಂತೆ ದ್ವಿತಿಯಾರ್ಧವನ್ನು ಅಚ್ಚು ಕಟ್ಟಾಗಿ ನಿಭಾಯಿಸುವಲ್ಲಿ ಎಡವಿದ್ದಾರೆ. ಸೆಕೆಂಡ್ ಹಾಫ್ ಮೂವಿ ಕೊಂಚ ಎಳೆಯೋ ಮೂಲಕ ಲ್ಯಾಗ್ ಅನಿಸುತ್ತೆ. ಸೀನ್‌ಗಳನ್ನ ಕಟ್ಟುವಾಗ ಕೆಲವೆಡೆ ಇನ್ನೂ ಕೊಂಚ ಚೆನ್ನಾಗಿ ಮಾಡಬಹುದಿತ್ತು ಅನಿಸಲಿದೆ. ಜಮೀನ್ದಾರ ಮಾಡುವ ಕೊಲೆಗೆ, ತನ್ನದಲ್ಲದ ತಪ್ಪಿಗೆ ಜೈಲು ಕಂಬಿ ಎಣಿಸೋ ರಾಚಯ್ಯ, ತಾನೇ ಮಾಡಿದ ಹತ್ತಾರು ಕೊಲೆಗಳಿಗೆ ಕಾನೂನು ಇರಲಿಲ್ವಾ ಅನ್ನೋ ಪ್ರಶ್ನೆ ಕೂಡ ಮೂಡುವಂತೆ ಮಾಡಿದ್ದಾರೆ ಡೈರೆಕ್ಟರ್. ಇಂತಹ ಸಣ್ಣಪುಟ್ಟ ತಪ್ಪುಗಳನ್ನ ಹೊರತು ಪಡಿಸಿದ್ರೆ, ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗುವ ಚಿತ್ರವಾಗಲಿದೆ ಲ್ಯಾಂಡ್‌ಲಾರ್ಡ್.
ಬದಲಾವಣೆಗೆ ಬೇಕಿರೋದು ಆಯುಧ ಅಲ್ಲ. ಪಳಪ ಅನ್ನೋದನ್ನ ಈ ಚಿತ್ರ ಸಾರಿದೆ. ಸಮಾನತೆ ಅನ್ನೋ ಸಂವಿಧಾನ ಹಳ್ಳಿ ಹಳ್ಳಿಗೂ ಬರಬೇಕು. ರಾಜಪ್ರಭುತ್ವ ನಿಂತು, ಪ್ರಜಾಪ್ರಭುತ್ವ ನೆಲೆಗೊಳ್ಳುವ ವಿಚಾರಧಾರೆಗಳನ್ನ ಎಳೆ ಎಳೆಯಾಗಿ ತೋರಿಸಲಾಗಿದೆ. ಗ್ಯಾರಂಟಿ ನ್ಯೂಸ್ ಈ ಚಿತ್ರಕ್ಕೆ ಐದಕ್ಕೆ ಮೂರೂವರೆ ಸ್ಟಾರ್ ರೇಟಿಂಗ್ ನೀಡಿದೆ. ಸದಾ ಒಂದೇ ಬಗೆಯ ಚಿತ್ರಗಳನ್ನ ಮಾಡೋ ಮೇಕರ್‌ಗಳಿಗೆ ಭಿನ್ನ ಅಲೆಯ ಸಿನಿಮಾದ ಮೂಲಕ ಹೊಸ ಆಲೋಚನೆಯ ಬೀಜ ಬಿತ್ತಿದೆ ಲ್ಯಾಂಡ್‌ಲಾರ್ಡ್. ಮಿಗಿಲಾಗಿ ಇದು ನಿಮ್ಮ ತಂದೆ-ತಾಯಿ, ಅಜ್ಜ-ಅಜ್ಜಂದಿರ ಕಥೆಯೂ ಆಗಿರಬಹುದು. ಸೋ ಕುಟುಂಬ ಸಮೇತ ಹೋಗಿ ಕಣ್ತುಂಬಿಕೊಂಡ್ರೆ ಅವರ ಪ್ರಾಮಾಣಿಕ ಪ್ರಯತ್ನ ಸಾಫಲ್ಯವಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





