ಸ್ಯಾಂಡಲ್ವುಡ್ನ ನ್ಯಾಚುರಲ್ ಸ್ಟಾರ್ ಹಾಗೂ ಕಾಮಿಡಿ ಕಿಂಗ್ ಮತ್ತೊಮ್ಮೆ ಹೀರೋ ಆಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದಾರೆ. ಪಕ್ಕಾ ಮಂಡ್ಯ ಸೊಗಡಿನ ಮಣ್ಣಿನ ಕಥೆಯೊಂದಿಗೆ ಇಂದು ಗ್ರ್ಯಾಂಡ್ ಆಗಿ ತೆರೆಕಂಡಿರೋ ಲಕ್ಷ್ಮಿಪುತ್ರ ಸಿನಿಮಾ ನೋಡಿ ಫ್ಯಾಮಿಲಿ ಆಡಿಯನ್ಸ್ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಕಾಮಿಡಿ ಕಿಕ್ ಜೊತೆಗೆ ಅಮ್ಮನ ಸೆಂಟಿಮೆಂಟ್ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದು.. ಹೀರೋ ಆಗಿ ಸತತ ಎರಡನೇ ಬಾರಿ ಗೆದ್ದು ಬೀಗಿದ್ದಾರೆ ಚಿಕ್ಕು. ಅಷ್ಟಕ್ಕೂ ಹೇಗಿದೆ ಲಕ್ಷ್ಮಿಪುತ್ರ..? ಫ್ಯಾಮಿಲಿ ಆಡಿಯನ್ಸ್ ಕೊಟ್ಟ ಮಾರ್ಕ್ಸ್ ಎಷ್ಟು..? ಈ ರಿವ್ಯೂ ರಿಪೋರ್ಟ್ ಇಲ್ಲಿದೆ ನೋಡಿ.
- ಲಕ್ಷ್ಮೀಪುತ್ರಗೆ ಪ್ರೇಕ್ಷಕ ಜೈಕಾರ.. ತಾಯಿ ಜೊತೆ ನೋಡಿದ್ರೆ ಶ್ರೀಕಾರ
- ಹೀರೋ ಆಗಿ ಎರಡನೇ ಬಾರಿ ಗೆದ್ದ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ..!!
- ನಗುವಿನ ಜೊತೆ ಅಮ್ಮನ ಸೆಂಟಿಮೆಂಟ್.. ಲಕ್ಷ್ಮೀಪುತ್ರನ ಸ್ಪೆಷಾಲಿಟಿ
- ತಾರಮ್ಮನ ತಾಯ್ತನಕ್ಕೆ ಪ್ರೇಕ್ಷಕರು ಕಣ್ಣೀರು.. ಜನ್ಯ, ವಿಜಯ್ಗೆ ಜೈ
ಉಪಾಧ್ಯಕ್ಷ ಚಿತ್ರದ ಸೂಪರ್ ಸಕ್ಸಸ್ ಬಳಿಕ ಸ್ಯಾಂಡಲ್ವುಡ್ ಕಾಮಿಡಿ ಕಿಂಗ್, ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಎರಡನೇ ಸಿನಿಮಾ ಲಕ್ಷ್ಮೀ ಪುತ್ರ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ನಿರ್ಮಾಪಕ ಎ.ಪಿ. ಅರ್ಜುನ್ ನಿರ್ಮಾಣ ಹಾಗೂ ವಿಜಯ್ ಎಸ್. ಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಪಕ್ಕಾ ಮಂಡ್ಯ ಹಳ್ಳಿ ಸೊಗಡಿನ ಚಿತ್ರದಲ್ಲಿ ಚಿಕ್ಕಣ್ಣ ಸಖತ್ ನಾಟಿ ಮತ್ತು ಸ್ಟೈಲಿಷ್ ಲುಕ್ನಲ್ಲಿ ಮಿಂಚಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಸಿನಿಮಾದ ಆರಂಭವೇ ಪಕ್ಕಾ ಕಮರ್ಷಿಯಲ್ ಕಿಕ್ ನೀಡುತ್ತದೆ. ಹಳ್ಳಿಯಲ್ಲಿ ಹೇಗಾದರೂ ಮಾಡಿ ಲವ್ ಮ್ಯಾರೇಜ್ ಆಗಲೇಬೇಕು ಎಂದು ಪಣತೊಡುವ ಕೃಷ್ಣ ಅಲಿಯಾಸ್ ಚಿಕ್ಕಣ್ಣ ಮತ್ತು ಆತನ ಗೆಳೆಯರ ಗ್ಯಾಂಗ್ ಮಾಡುವ ಕಿತಾಪತಿಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಮೊದಲಾರ್ಧದಲ್ಲಿ ಭರಪೂರ ಕಾಮಿಡಿ, ಹುಡುಗಿ ಹುಡುಕಾಟ, ಮಾಸ್ ಮಾದ ಸಾಹಸ ನಿರ್ದೇಶನದ ಕಮರ್ಷಿಯಲ್ ಫೈಟ್ಗಳ ಜೊತೆಗೆ ಕಥೆ ಕುತೂಹಲಕಾರಿಯಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಕಥೆಯ ಓಟ ಊಹಿಸಬಹುದಾದರೂ ನಿರ್ದೇಶಕ ವಿಜಯ್ ಎಸ್. ಸ್ವಾಮಿ ಹೆಣೆದಿರುವ ವೇಗದ ಸ್ಕ್ರೀನ್ ಪ್ಲೇ ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತದೆ.
ಇನ್ನು ಸೆಕೆಂಡ್ ಹಾಫ್ ಸಿನಿಮಾಗೆ ಹೊಸ ತಿರುವುಗಳು ಸಿಗಲಿದ್ದು, ಕಾಮಿಡಿ ಜೊತೆಗೆ ಭಾವನಾತ್ಮಕ ಅಂಶಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ಚಿಕ್ಕಣ್ಣನಿಗೆ ಸಾಥ್ ನೀಡಿರುವ ಧರ್ಮಣ್ಣ ಕಡೂರ್, ಕುರಿ ಪ್ರತಾಪ್, ಮಿತ್ರ, ಶಿವರಾಜ್ ಕೆ.ಆರ್. ಪೇಟೆ ಹಾಗೂ ಕುಳ್ಳ ಅನಂತ್ ಅವರ ಕಾಮಿಡಿ ಟೈಮಿಂಗ್ ಥಿಯೇಟರ್ನಲ್ಲಿ ನಗುವಿನ ಅಲೆ ಎಬ್ಬಿಸಿದೆ. ಎಲ್ಲರೂ ಜಿದ್ದಿಗೆ ಬಿದ್ದವರಂತೆ ಪಂಚ್ ಡೈಲಾಗ್ಗಳ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗುವಿನ ಜೊತೆಗೆ ಕಣ್ಣಾಲಿಗಳನ್ನು ಒದ್ದೆ ಮಾಡುವುದು ಸಿನಿಮಾದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್. ತಾಯಿ ಲಕ್ಷ್ಮೀ ಪಾತ್ರದಲ್ಲಿ ನಟಿಸಿರುವ ಹಿರಿಯ ನಟಿ ತಾರಾ ಅನುರಾಧಾ ಪ್ರತಿ ದೃಶ್ಯದಲ್ಲೂ ನಮ್ಮದೇ ಅಮ್ಮನನ್ನು ನೆನಪಿಸುವಂತೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇನ್ನು ನಾಯಕಿಯಾಗಿ ಕಾಣಿಸಿಕೊಂಡಿರುವ ವಂದಿತಾ ಗೌಡ ಚಿಕ್ಕಣ್ಣನಿಗೆ ಹೇಳಿ ಮಾಡಿಸಿದ ಜೋಡಿಯಂತೆ ಮಿಂಚಿದ್ದು, ತಮ್ಮ ಮೊದಲ ಪ್ರಯತ್ನದಲ್ಲೇ ಕ್ಲೀನ್ ಮತ್ತು ಸಹಜ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಹಾಗೂ ಎ.ಪಿ. ಅರ್ಜುನ್ ಸಾಹಿತ್ಯದ ಇನ್ಮೇಲೆ ಇನ್ಮೇಲೆ, ಐ ಲವ್ ಯೂ ಪರಿಮಳ ಹಾಗೂ ಅಮ್ಮನ ಹಾಡು ಚಿತ್ರದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿವೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕೆ ಶ್ರೀಮಂತಿಕೆ ತಂದಿದ್ದು, ಕಾಮಿಡಿ, ಪ್ರೀತಿ ಹಾಗೂ ಅಮ್ಮನ ಸೆಂಟಿಮೆಂಟ್ ಇರುವ ಈ ಪಕ್ಕಾ ಕನ್ನಡದ ಸಿನಿಮಾ ಫ್ಯಾಮಿಲಿ ಸಮೇತ ಥಿಯೇಟರ್ನಲ್ಲಿ ನೋಡಿ ಎಂಜಾಯ್ ಮಾಡುವಂತಿದೆ. ಅಲ್ಲದೆ.. ತಾಯಂದಿರ ಜೊತೆ ಕೂತು ಈ ಚಿತ್ರ ನೋಡಿದ್ರೆ ಅದೇ ಶ್ರೀಕಾರ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





