ಬರೀ ಕನ್ನಡ ಸಿನಿಮಾಗಳಷ್ಟೇ ನ್ಯಾಷನಲ್ ಲೆವೆಲ್‌ನಲ್ಲಿ ಸ್ಟ್ಯಾಂಡರ್ಡ್ಸ್ ಸೆಟ್ ಮಾಡ್ತಿಲ್ಲ. ಕನ್ನಡದ ನಿರ್ಮಾಣ ಸಂಸ್ಥೆಗಳು ಕೂಡ ಬಾಲಿವುಡ್ ರೇಂಜ್ ಸಿನಿಮಾಗಳನ್ನ ಕೊಡೋದ್ರ ಮೂಲಕ ಟಫ್ ಕಾಂಪಿಟೇಷನ್ ಕೊಡ್ತಿವೆ. ಆ ನಿಟ್ಟಿನಲ್ಲಿ ಹೊಂಬಾಳೆ ಫಿಲಂಸ್ ಬಳಿಕ ಕೆವಿಎನ್ ಪ್ರೊಡಕ್ಷನ್ಸ್ ಮಹತ್ವದ ಹೆಜ್ಜೆ ಇಟ್ಟಿದೆ. ಪಂಚಭಾಷೆಗಳಲ್ಲಿ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ ವೆಂಕಟ್ ನಾರಾಯಣ್.
ಕೆಜಿಎಪ್, ಕಾಂತಾರ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ದಿಕ್ಕು, ದೆಸೆ ಬದಲಿಸಿದ ಗರಿಮೆ ಹೊಂಬಾಳೆ ಫಿಲಂಸ್ ಅನ್ನೋ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಿದೆ. ಕನ್ನಡ ಚಿತ್ರಗಳು ಕೂಡ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಬಲ್ಲವು ಅನ್ನೋದನ್ನ ತೋರಿಸಿಕೊಟ್ಟರು ವಿಜಯ್ ಕಿರಗಂದೂರು. ಇದೀಗ ಅದೇ ಹಾದಿಯಲ್ಲಿ ಮತ್ತೊಂದು ಗಟ್ಟಿಯಾದ ನಿರ್ಮಾಣ ಸಂಸ್ಥೆ ತಲೆ ಎತ್ತಿದೆ. ಅದೇ ಕೆವಿಎನ್ ಪ್ರೊಡಕ್ಷನ್ಸ್.
ಕೆ ವೆಂಕಟ್ ನಾರಾಯಣ್ ಮಾಲೀಕತ್ವದ ಕೆವಿಎನ್ ಪ್ರೊಡಕ್ಷನ್ಸ್, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಖತ್ ಹಾಗೂ ಧನ್ವೀರ್ ಗೌಡ- ಶ್ರೀಲೀಲಾ ಜೋಡಿಯ ಬೈಟು ಲವ್ ಸಿನಿಮಾಗಳ ಮೂಲಕ ಗುರ್ತಿಸಿಕೊಳ್ತು. ಚಿತ್ರರಂಗದ ಆಳ, ಅಗಲ ಅರಿತುಕೊಳ್ಳಲು ವೆಂಕಟ್ ನಾರಾಯಣ್ ಅವರು ಮೊದಲು ಎರಡು ಸಣ್ಣ ಬಜೆಟ್ ಚಿತ್ರಗಳನ್ನ ಮಾಡಿದ್ರು. ಡಿಸ್ಟ್ರಿಬ್ಯೂಷನ್ ಮೂಲಕ ಪರಭಾಷಾ ಪ್ರೊಡಕ್ಷನ್ ಹೌಸ್‌ಗಳು ಹಾಗೂ ಸೂಪರ್ ಸ್ಟಾರ್‌ಗಳ ಬಾಂಧವ್ಯ ಬೆಳೆಸಿಕೊಂಡ್ರು. ನಂತ್ರ ಆಗ್ತಿರೋದು ನಿಜಕ್ಕೂ ಕ್ರಾಂತಿ.
ಸದ್ಯ ಕೆವಿಎನ್ ಸಂಸ್ಥೆಯಿಂದ ಒಂದಲ್ಲ ಎರಡಲ್ಲ ಬರೋಬ್ಬರಿ ಅರ್ಧ ಡಜನ್ ಪ್ಯಾನ್ ಇಂಡಿಯಾ ಸಿನಿಮಾಗಳು ತಯಾರಾಗ್ತಿವೆ. ಅದೂ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳ ಜೊತೆ ಅನ್ನೋದು ಹೆಮ್ಮೆಯ ವಿಷಯ. ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ಧ್ರುವ-ಪ್ರೇಮ್ ಕಾಂಬೋನ ಕೆಡಿ ಸಿನಿಮಾಗಳು ಕನ್ನಡದಿಂದ ತಯಾರಾಗ್ತಿದ್ರೆ, ತಮಿಳಿನಿಂದ ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನನಾಯಗನ್ ನಿರ್ಮಾಣವಾಗ್ತಿದೆ.
ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ ಡೈರೆಕ್ಟರ್ ಜೊತೆ ಬಾಲನ್ ಅನ್ನೋ ಮಲಯಾಳಂ ಸಿನಿಮಾ ಶುಭಾರಂಭ ಮಾಡಿರೋ ಕೆವಿಎನ್, ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಬರ್ತ್ ಡೇ ವಿಶೇಷ ಅವ್ರ 158ನೇ ಸಿನಿಮಾನ ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ರು. ವಾಲ್ಟೈರ್ ವೀರಯ್ಯ ಡೈರೆಕ್ಟರ್ ಬಾಬಿ-ಚಿರು ಸೆಕೆಂಡ್ ಕಾಂಬೋಗೆ ಕೆವಿಎನ್ ಬಂಡವಾಳ ಹೂಡುತ್ತಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.
ಈ ಮಧ್ಯೆ ನಿನ್ನೆ ಬಾಲಿವುಡ್‌ಗೂ ಕಾಲಿಟ್ಟಿರೋ ಕೆವಿಎನ್ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅಂತಹ ದೊಡ್ಡ ಸ್ಟಾರ್‌ಗೆ ಸಿನಿಮಾವೊಂದನ್ನು ಕಿಕ್‌ಸ್ಟಾರ್ಟ್ ಮಾಡಿದೆ. ಸಿನಿಮಾಗೆ ಹೈವಾನ್ ಅಂತ ಟೈಟಲ್ ಕೂಡ ಫೈನಲ್ ಆಗಿದ್ದು, ಅಧಿಕೃತವಾಗಿ ಸಿನಿಮಾ ಸೆಟ್ಟೇರಿದೆ. ಸೈಫ್ ಅಲಿ ಖಾನ್ ಕೂಡ ಚಿತ್ರದ ತಾರಾಗಣದಲ್ಲಿರಲಿದ್ದು, ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದಲ್ಲವೇ ಕನ್ನಡಿಗರ ಗತ್ತು, ಗೈರತ್ತು. ಅಂದಹಾಗೆ ಇಂದು ಕೆ ವೆಂಕಟ್ ನಾರಾಯಣ್ ಅವ್ರ ಬರ್ತ್ ಡೇ. ಅವ್ರಿಗೆ ಬರ್ತ್ ಡೇ ಶುಭಾಶಯ ಕೋರುವುದರ ಜೊತೆ ಮತ್ತಷ್ಟು, ಮಗದಷ್ಟು ಸಿನಿಮಾಗಳನ್ನ ಮಾಡುವ ಶಕ್ತಿ ದೇವರು ಕೊಡಲಿ ಅಂತ ಹಾರೈಸೋಣ.