ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಿಚ್ಚ ಸುದೀಪ್ ಅವರ ವಿರುದ್ಧ ವಂಚನೆ ಆರೋಪಗಳು ಕೇಳಿಬಂದಿವೆ. ಚಿತ್ರೀಕರಣ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆದಿದೆ ಎಂದು ಆರೋಪಿಸಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಎಂಬುವವರು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣವು 2016ರಲ್ಲಿ ನಡೆದ ಧಾರಾವಾಹಿ ಚಿತ್ರೀಕರಣಕ್ಕೆ ಸಂಬಂಧಿಸಿದ್ದು, ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ ಎನ್ನಲಾಗಿದೆ.
ದೂರುದಾರ ದೀಪಕ್ ಮಯೂರ್ ಪಟೇಲ್ ಹೇಳುವಂತೆ, ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದ ಸರ್ವೇ ನಂಬರ್ 275ರಲ್ಲಿ ಇರುವ ತಮ್ಮ ತೋಟವನ್ನು ‘ವಾರಸ್ದಾರ’ ಎಂಬ ಧಾರಾವಾಹಿ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಧಾರಾವಾಹಿಯ ಚಿತ್ರೀಕರಣಕ್ಕಾಗಿ ಸುಮಾರು ಎರಡು ವರ್ಷಗಳ ಅವಧಿಗೆ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ತೋಟದಲ್ಲಿ ಚಿತ್ರೀಕರಣ ನಡೆದಿದ್ದು, ಇದರಿಂದ ಅಪಾರ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ಚಿತ್ರೀಕರಣದ ವೇಳೆ ಕಲಾವಿದರು ಹಾಗೂ ತಾಂತ್ರಿಕ ಸಿಬ್ಬಂದಿ ವಾಸಿಸಲು ತೋಟದಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿದು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ತೋಟದ ಸಂಪೂರ್ಣ ಹಾಳಾಗಿದ್ದು, ಕೃಷಿಗೆ ಭಾರೀ ನಷ್ಟ ಉಂಟಾಗಿದೆ ಎನ್ನಲಾಗಿದೆ. ಚಿತ್ರೀಕರಣ ಮುಗಿದ ನಂತರ ತೋಟದ ಜಾಗವನ್ನು ಹಿಂದಿನ ಸ್ಥಿತಿಗೆ ತರುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆ ಈಡೇರಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ.
2016ರಲ್ಲಿ ನೋಟು ನಿಷೇಧ (ನೋಟ್ ಬ್ಯಾನ್) ಜಾರಿಯಾದ ಸಂದರ್ಭದಲ್ಲಿ ಚಿತ್ರೀಕರಣ ತಂಡ ಬೆಂಗಳೂರಿಗೆ ವಾಪಸ್ ಆಗಿದ್ದು, ತೋಟದ ಸಮಸ್ಯೆಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಚಿತ್ರೀಕರಣದಿಂದ ಉಂಟಾದ ನಷ್ಟಕ್ಕೆ ಸಂಬಂಧಿಸಿದಂತೆ 80 ಸಾವಿರ ರೂಪಾಯಿ ಹಣವನ್ನು ನೀಡುವುದಾಗಿ ಹೇಳಿ ಅದನ್ನೂ ಪಾವತಿಸಿಲ್ಲ ಎಂದು ದೀಪಕ್ ಆರೋಪಿಸಿದ್ದಾರೆ.
ಈ ಸಂಬಂಧ 2016ರಿಂದಲೇ ದೀಪಕ್ ಮಯೂರ್ ಪಟೇಲ್ ಹಲವು ಬಾರಿ ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಕೂಡ ಅನೇಕ ಬಾರಿ ದೂರು ಸಲ್ಲಿಸಿದ್ದರೂ, ಇದುವರೆಗೆ ನ್ಯಾಯ ದೊರೆತಿಲ್ಲ ಎಂದಿದ್ದಾರೆ. ಕೊನೆಗೂ ಜನವರಿ 16ರಂದು ಮತ್ತೊಮ್ಮೆ ಅಧಿಕೃತವಾಗಿ ಬೆಂಗಳೂರು ಕಮಿಷನರ್‌ಗೆ ದೂರು ನೀಡಿದ್ದಾರೆ.
“ಚಿತ್ರೀಕರಣದ ನೆಪದಲ್ಲಿ ನನ್ನ ತೋಟವನ್ನು ಸಂಪೂರ್ಣವಾಗಿ ಹಾಳು ಮಾಡಲಾಗಿದೆ. ನಷ್ಟದ ಪರಿಹಾರ ನೀಡುವುದಂತೂ ದೂರದ ಮಾತು. ಹಲವು ವರ್ಷಗಳಿಂದ ಕಚೇರಿ ಕಚೇರಿ ಅಲೆದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ” ಎಂದು ದೂರುದಾರ ದೀಪಕ್ ಮಯೂರ್ ಪಟೇಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





