ಮಂಗಳೂರು: ಕಾಂತಾರ ಚಾಪ್ಟರ್ 1 ಚಿತ್ರದ ಸಕ್ಸಸ್ ಹಿನ್ನೆಲೆ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ಚಿತ್ರತಂಡ ಮಂಗಳೂರಿನ ಪ್ರಸಿದ್ಧ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವದಲ್ಲಿ ಭಾಗವಹಿಸಿ ದೈವದ ಅಶಿರ್ವಾದ ಪಡೆದರು. ಚಿತ್ರದ ಭರ್ಜರಿ ಯಶಸ್ಸಿನ ನಂತರ ದೈವಸ್ಥಾನದಲ್ಲಿ ತಂಡ ಭೇಟಿ ನೀಡಿದ್ದಾರೆ
ಹರಕೆ ತೀರಿಸಲು ಹಮ್ಮಿಕೊಳ್ಳಲಾದ ಈ ನೇಮೋತ್ಸವಕ್ಕೆ ರಿಷಬ್ ಶೆಟ್ಟಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಆಗಮಿಸಿದ್ದಾರೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಂಗದೂರು, ಚಿತ್ರತಂಡದ ಅನೇಕ ಕಲಾವಿದರು ಹಾಗೂ ತಾಂತ್ರಿಕ ಸದಸ್ಯರೂ ಕೂಡ ದೈವಪೂಜೆಯಲ್ಲಿ ಪಾಲ್ಗೊಂಡರು.
ನೇಮೋತ್ಸವದ ಭಾಗವಾಗಿ ಗಗ್ಗರ ಸೇವೆ, ಅನ್ನಸಂತರ್ಪಣೆ, ವಿವಿಧ ಸೇವಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಚಿತ್ರತಂಡದ ಪ್ರತಿಯೊಬ್ಬರೂ ತಮ್ಮ ತಮ್ಮ ಹರಕೆಗಳನ್ನು ತೀರಿಸಿ ಚಿತ್ರ ಯಶಸ್ಸಿನ ಕೃತಜ್ಞತೆಯನ್ನು ದೈವಕ್ಕೆ ಅರ್ಪಿಸಿದರು.
ಕಾಂತಾರ ಚಾಪ್ಟರ್ 1 ನಂತರ ಮುಂದಿನ ಭಾಗಗಳ ಬಗ್ಗೆ ಭಾರೀ ನಿರೀಕ್ಷೆ ಬೆಳೆಯುತ್ತಿರುವ ಸಮಯದಲ್ಲಿ, ಈ ನೇಮೋತ್ಸವದಲ್ಲಿ ತಂಡದ ಆಗಮಿಸಿದ್ದು ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ. ದೈವದ ಆಶೀರ್ವಾದ ಪಡೆದು ಮುಂದಿನ ಕೆಲಸಗಳನ್ನು ಆರಂಭಿಸಲಿದೆ ಎನ್ನಲಾಗಿದೆ.
ಕಳೆದ ಏಪ್ರಿಲ್‌ನ ದೈವ ನುಡಿಗಳು
ಕಳೆದ ಏಪ್ರಿಲ್‌ನಲ್ಲಿ ಇದೇ ದೈವಸ್ಥಾನದಲ್ಲಿ ನೇಮೋತ್ಸವಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ದೈವ ರಿಷಬ್ ಶೆಟ್ಟಿಗೆ ನೀಡಿದ ಕೆಲವು ಪ್ರಮುಖ ಸೂಚನೆಗಳು ಮತ್ತೆ ಚರ್ಚೆಗೆ ಕಾರಣವಾಗಿತ್ತು. ಆ ವೇಳೆ ದೈವವು “ಸಿನಿಮಾ ಕ್ಷೇತ್ರದಲ್ಲಿ ಜಾಗರೂಕತೆಯಿಂದಿರು, ಶತ್ರುಗಳು ಇರಬಹುದು, ಮನೆಯಲ್ಲಿಯೂ ಸಮತೋಲನ ಕಾಪಾಡು, ಕಟ್ಟಿಕೊಂಡಿರುವ ಹರಕೆಗಳನ್ನು ತೀರಿಸು” ಎಂದು ಸೂಚಿಸಿತ್ತು.





