70ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ತಿರೋ ಕರುನಾಡಲ್ಲಿ ಇಂದು ಚಿತ್ರರಂಗದ ತಾರೆಯರು ಕೂಡ ಕನ್ನಡದ ಬಾವುಟ ಹಾರಿಸಿ, ಕನ್ನಡಾಭಿಮಾನ ಮೆರೆದಿದ್ದಾರೆ. ಶಿವಣ್ಣ, ರಚಿತಾ ರಾಮ್, ರಮೇಶ್ ಅರವಿಂದ್ ಸೇರಿದಂತೆ ಯಾರೆಲ್ಲಾ ರಾಜ್ಯೋತ್ಸವ ಸಂಭ್ರಮಾಚರಣೆಗೆ ಸಾಕ್ಷಿ ಆದ್ರು ಅಂತೀರಾ..? ಈ ಸ್ಪೆಷಲ್ ಸ್ಟೋರಿಯನ್ನ ಒಮ್ಮೆ ನೋಡಿ.
ಕಲಿಯೋಕೆ ಕೋಟಿ ಭಾಷೆ.. ಆಡೋಕೆ ಒಂದೇ ಭಾಷೆ.. ಕನ್ನಡ ಕನ್ನಡ. ಯೆಸ್.. ಸಾವಿರಾರು ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಭಾಷೆ ದೇಶದಲ್ಲೇ ಶ್ರೇಷ್ಠವಾದ ಭಾಷೆಗಳಲ್ಲೊಂದು. ಕರ್ನಾಟಕ ಏಕೀಕರಣಗೊಂಡು 70 ವರ್ಷಗಳಾಗಿದೆ. ಇಂದು 70ನೇ ಕನ್ನಡ ರಾಜ್ಯೋತ್ಸವವನ್ನ ಇಡೀ ಕರುನಾಡು ಸಂಭ್ರಮಿಸುತ್ತಿದೆ. ಕರ್ನಾಟಕದ ಹೊರಗಿರೋ ಅನಿವಾಸಿ ಕನ್ನಡಿಗರು ಕೂಡ ಹೊಸ ರಾಜ್ಯಗಳು, ಸಪ್ತ ಸಾಗರದಾಚೆ ಹೊರದೇಶಗಳಲ್ಲಿ ಕೂಡ ರಾಜ್ಯೋತ್ಸವ ಆಚರಿಸ್ತಾರೆ.
ರಾಜ್ಯೋತ್ಸವ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್
ಶಿವಣ್ಣ, ರಚಿತಾ, ರಮೇಶ್ ಅರವಿಂದ್ ಕನ್ನಡಾಭಿಮಾನ
ಅದ್ರಲ್ಲೂ ನಮ್ಮ ಸ್ಯಾಂಡಲ್ವುಡ್ ಸ್ಟಾರ್ಸ್ ನಮ್ಮ ಕನ್ನಡ ನಾಡು, ನುಡಿ, ಜಲ, ಮಣ್ಣು ಹಾಗೂ ಸಂಸ್ಕೃತಿಯ ರಾಯಭಾರಿಗಳು. ಹಾಗಾಗಿ ಇಂದು ಕೂಡ ನಟ ಶಿವರಾಜ್ಕುಮಾರ್ ಫಿಲ್ಮ್ ಚೇಂಬರ್ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿ ಆದ್ರು. ಅಲ್ಲದೆ ಲ್ಯಾಂಡ್ಲಾರ್ಡ್ ಚಿತ್ರದ ಟೀಸರ್ ಲಾಂಚ್ ಫಂಕ್ಷನ್ನಲ್ಲಿ ನವರಂಗ್ ಥಿಯೇಟರ್ ಮುಂದೆ ರಚಿತಾ ರಾಮ್, ದುನಿಯಾ ವಿಜಯ್ ಸೇರಿದಂತೆ ಇಡೀ ಚಿತ್ರತಂಡ ಕನ್ನಡದ ಬಾವುಟ ಹಾರಿಸಿ, ಅರ್ಥಪೂರ್ಣ ರಾಜ್ಯೋತ್ಸವವನ್ನ ಆಚರಿಸಿತು.
ಗೀತಾ ಶಿವರಾಜ್ಕುಮಾರ್ ನಿರ್ಮಾಣದ ಪಬ್ಬಾರ್ ಚಿತ್ರತಂಡದ ನಾಯಕನಟ ಧೀರೆನ್ ರಾಜ್ಕುಮಾರ್, ಅಮೃತಾ ಪ್ರೇಮ್ ಹಾಗೂ ಇಡೀ ತಂಡ ರಾಜ್ಯೋತ್ಸವದ ಶುಭಾಶಯ ಕೋರಿದೆ. ಅಲ್ಲದೆ, ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್ ಅವರು ಕೂಡ ಅರ್ಥಪೂರ್ಣವಾಗಿ ಮುಂದಿನ ಪೀಳಿಗೆಗೆ ನಾವು ಏನು ಮಾಡಬೇಕು ಅಂತ ಹೇಳ್ತಾ ರಾಜ್ಯೋತ್ಸವ ಶುಭಾಶಯ ಕೋರಿರೋದು ಇಂಟರೆಸ್ಟಿಂಗ್.
ಡಾ. ರಾಜ್-ವಿಷ್ಣು-ಅಂಬಿ ಸಿನಿಮಾಗಳಲ್ಲಿ ಕನ್ನಡದ ಕಹಳೆ
ಕನ್ನಡಾಭಿಮಾನದ ಕಿಚ್ಚು ಹಚ್ಚುವ ಎವರ್‌ಗ್ರೀನ್ ಸಾಂಗ್ಸ್
ಕನ್ನಡ ನಾಡು ಎಷ್ಟು ವೈವಿಧ್ಯಮಯವಾಗಿದೆ..? ಕರುನಾಡಿನ ವಿಶೇಷತೆಗಳೇನು..? ಇಲ್ಲಿನ ದೇವಾಲಯಗಳು, ನದಿಗಳು, ಪರಂಪರೆ ಬಗ್ಗೆ ನಟಸಾರ್ವಭೌಮ ಡಾ ರಾಜ್ಕುಮಾರ್, ಸಾಹಸಸಿಂಹ ಡಾ ವಿಷ್ಣುವರ್ಧನ್ ಹಾಗೂ ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಿನಿಮಾಗಳು ಹಾಗೂ ಅವ್ರ ಎವರ್ಗ್ರೀನ್ ಹಾಡುಗಳಲ್ಲಿ ಕಾಣಬಹುದು. ಹೌದು.. ಒಂದೊಂದು ಹಾಡು ಕೂಡ ಕೇಳೋಕೆ ಹಿತವಾಗಿವೆ. ಕಣ್ಮನ ತಣಿಸುತ್ತವೆ. ಕನ್ನಡಾಭಿಮಾನವನ್ನು ಇಮ್ಮಡಿಗೊಳಿಸುತ್ತವೆ.
ಎಸ್ಬಿಪಿ ರಾಜ್ಯೋತ್ಸವ ಸಾಂಗ್ ಕೂಡ ಇದ್ರಿಂದ ಹೊರತಾಗಿಲ್ಲ. ಕವಿ, ಸಾಹಿತ್ಯ, ರಸ ಋಷಿಗಳು, ತಾಯಿ ಭುವನೇಶ್ವರಿ ಹೀಗೆ ಎಲ್ಲದರಲ್ಲಿ ಕನ್ನಡ ಕನ್ನಡ ಅನ್ನೋದು ಪ್ರಜ್ವಲಿಸುತ್ತಿದೆ. ಎಲ್ಲೆಲ್ಲೂ ಕನ್ನಡ ಮಾರ್ದನಿಸುತ್ತಿದೆ. ಕನ್ನಡಿಗರ ಉಸಿರು ಕನ್ನಡ. ಹಾಗಾಗಿ ಕನ್ನಡದ ಮೇಲಿನ ಅಭಿಮಾನ, ಗೌರವ, ಪ್ರೀತಿ ಎಲ್ಲವನ್ನೂ ಮೀರಿದ್ದು. ಜೈ ಕರ್ನಾಟಕ.. ಜೈ ಭುವನೇಶ್ವರಿ. ಮತ್ತೊಮ್ಮೆ ಮಗದೊಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.





