ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ 19ನೇ ಸೀಸನ್‌ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿ ಶೋನ ಅವಧಿಯನ್ನು 3 ತಿಂಗಳಿಂದ 5 ತಿಂಗಳಿಗೆ ವಿಸ್ತರಿಸಲಾಗಿದ್ದು, ಒಬ್ಬರ ಬದಲಿಗೆ ಮೂವರು ಸೆಲೆಬ್ರಿಟಿಗಳಿಂದ ನಿರೂಪಣೆಯಾಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಎಂದಿನಂತೆ ಶೋ ನಡೆಸಿಕೊಡಲಿದ್ದಾರೆ, ಆದರೆ ಇವರ ಜೊತೆ ಇನ್ನಿಬ್ಬರು ಸೆಲೆಬ್ರಿಟಿಗಳು ನಿರೂಪಣೆಯ ಜವಾಬ್ದಾರಿ ಹೊರಲಿದ್ದಾರೆ. ಆದರೆ, ಈ ಬಗ್ಗೆ ಆಯೋಜಕರು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಬಿಗ್ ಬಾಸ್ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಪ್ರತಿ ಸೀಸನ್‌ನಲ್ಲಿ ವಿಭಿನ್ನ ಥೀಮ್‌ಗಳು, ಹೊಸ ಪ್ರಯೋಗಗಳು, ಮತ್ತು ಆಕರ್ಷಕ ಬದಲಾವಣೆಗಳನ್ನು ಪರಿಚಯಿಸಲಾಗುತ್ತದೆ. ಎಲ್ಲಾ ಭಾಷೆಗಳಲ್ಲಿ ಜನಪ್ರಿಯವಾಗಿರುವ ಈ ಶೋ, ಈ ಬಾರಿ 5 ತಿಂಗಳ ದೀರ್ಘಾವಧಿಯ ಕಾರ್ಯಕ್ರಮವಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಸಲ್ಮಾನ್ ಖಾನ್ 3 ತಿಂಗಳ ಒಪ್ಪಂದದಂತೆ ಶೋ ನಿರೂಪಿಸಲಿದ್ದು, ಉಳಿದ 2 ತಿಂಗಳಿಗೆ ಕರಣ್ ಜೋಹರ್ ಮತ್ತು ಅನಿಲ್ ಕಪೂರ್‌ಗೆ ನಿರೂಪಣೆಯ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಈ ಬಾರಿ ಬಿಗ್ ಬಾಸ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಹೆಚ್ಚಿನ ಒತ್ತು ನೀಡಲಿದೆ. ಟಿವಿಯಲ್ಲಿ ಪ್ರಸಾರವಾಗುವ ಮುನ್ನ ಒಂದೆರಡು ಗಂಟೆಗಳ ಹಿಂದೆಯೇ ಒಟಿಟಿಯಲ್ಲಿ ಶೋ ಲಭ್ಯವಾಗಲಿದೆ. ಸ್ಪರ್ಧಿಗಳ ಆಯ್ಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಯಾರೆಲ್ಲಾ ಈ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಆಯೋಜಕರು ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆಯಿದೆ.
ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅನ್ನು ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಕಳೆದ ವರ್ಷ ತಾವು ಇನ್ಮುಂದೆ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಿಸಿದ್ದರು. ಆದರೆ, ನಂತರ ಮನಸ್ಸು ಬದಲಾಯಿಸಿ, ಈ ಸೀಸನ್‌ಗೆ ಮರಳಿದ್ದಾರೆ. ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸುದೀಪ್, ತಮ್ಮ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ.





