ಮುಂಬೈ: ಬಾಲಿವುಡ್‌ನ ಜನಪ್ರಿಯ ಸೂಪರ್ ಹೀರೊ ಫ್ರಾಂಚೈಸಿ ‘ಕ್ರಿಶ್’ ಸರಣಿಯ ನಾಲ್ಕನೇ ಭಾಗಕ್ಕೆ (Krrish 4) ವೇದಿಕೆ ಸಿದ್ಧವಾಗಿದೆ. ಸುಮಾರು 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಭಿಮಾನಿಗಳಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಈ ಬಾರಿ ಹೃತಿಕ್ ರೋಷನ್ ಕೇವಲ ನಾಯಕನಾಗಿ ಮಾತ್ರವಲ್ಲದೆ, ನಿರ್ದೇಶಕನ ಕ್ಯಾಪ್ ತೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
22 ವರ್ಷಗಳ ಸೂಪರ್ ಹೀರೋ ಪಯಣ
2003ರಲ್ಲಿ ತೆರೆಕಂಡಿದ್ದ ‘ಕೋಯಿ ಮಿಲ್ ಗಯಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲಿಂದಲೇ ಈ ಸೂಪರ್ ಹೀರೋ ಪಯಣ ಆರಂಭವಾಯಿತು. 2006ರಲ್ಲಿ ‘ಕ್ರಿಶ್’ ಹಾಗೂ 2013ರಲ್ಲಿ ‘ಕ್ರಿಶ್ 3’ ತೆರೆಕಂಡು ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದವು. ಇಲ್ಲಿಯವರೆಗೆ ಈ ಸರಣಿಯ ಎಲ್ಲಾ ಚಿತ್ರಗಳನ್ನು ಹೃತಿಕ್ ತಂದೆ ರಾಕೇಶ್ ರೋಷನ್ ಅವರೇ ನಿರ್ದೇಶಿಸಿದ್ದರು. ಆದರೆ, ಈಗ ಹೃತಿಕ್ ಸ್ವತಃ ಮೆಗಾ ಫೋನ್ ಹಿಡಿಯಲು ಸಿದ್ಧರಾಗಿದ್ದಾರೆ. ನಟನಾಗುವ ಮೊದಲು ತಮ್ಮ ತಂದೆಯ ಬಳಿ 4 ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹೃತಿಕ್, ಈಗ ಆ ಅನುಭವವನ್ನೇ ಇಲ್ಲಿ ಬಳಸಿಕೊಳ್ಳಲಿದ್ದಾರೆ.
ದೇಶಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮರುಪ್ರವೇಶ
‘ಕ್ರಿಶ್ 4’ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಪ್ರಿಯಾಂಕಾ ಚೋಪ್ರಾ ಅವರ ಎಂಟ್ರಿ. 2006 ಮತ್ತು 2013ರ ಚಿತ್ರಗಳಲ್ಲಿ ಪ್ರಿಯಾಂಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಅವರು, ‘ಕ್ರಿಶ್ 4’ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ. ಪ್ರಿಯಾಂಕಾ ಅವರ ವರ್ಲ್ಡ್ ವೈಡ್ ಫೇಮ್‌ಗೆ ತಕ್ಕಂತೆ ಈ ಚಿತ್ರಕ್ಕೆ ಅವರಿಗೆ ಭಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಪ್ರಿಯಾಂಕಾ ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ‘ವಾರಣಾಸಿ’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
2006ರಲ್ಲಿ ಬಂದಿದ್ದ ‘ಕ್ರಿಶ್’ ಕೇವಲ 40 ಕೋಟಿ ಬಜೆಟ್‌ನಲ್ಲಿ ತಯಾರಾಗಿ 120 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ‘ಕ್ರಿಶ್ 4’ ಅತ್ಯಾಧುನಿಕ ವಿಎಫ್‌ಎಕ್ಸ್ (VFX) ತಂತ್ರಜ್ಞಾನದೊಂದಿಗೆ ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಹೃತಿಕ್ ರೋಷನ್ ಸದ್ಯ ‘ವಾರ್ 2’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಅದರ ಬೆನ್ನಲ್ಲೇ ‘ಕ್ರಿಶ್ 4’ ಅಧಿಕೃತವಾಗಿ ಸೆಟ್ಟೇರಲಿದೆ. ತಂದೆಯ ಬ್ಯಾನರ್‌ನಲ್ಲಿ ಹೃತಿಕ್ ನಿರ್ದೇಶಕನಾಗಿ ಹೇಗೆ ಮ್ಯಾಜಿಕ್ ಮಾಡಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.





