ಕನ್ನಡ ಚಿತ್ರರಂಗದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿಯ ಮನೆಯಲ್ಲಿ ಸಂತಸ ಸಡಗರ ಮನೆ ಮಾಡಿದೆ. ಈ ಜನಪ್ರಿಯ ಜೋಡಿ ತಮ್ಮ ಚೊಚ್ಚಲ ಮಗುವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ಈಗ ತಮ್ಮ ಮುದ್ದಾದ ಮಗಳಿಗೆ ‘ತ್ರಿದೇವಿ ಪೊನ್ನಕ್ಕ’ ಎಂಬ ಸುಂದರ ಹೆಸರನ್ನು ಇಟ್ಟು, ಎಲ್ಲರ ಗಮನ ಸೆಳೆದಿದ್ದಾರೆ. ಕೊಡವ ಸಂಪ್ರದಾಯದಂತೆ ವಿರಾಜಪೇಟೆಯಲ್ಲಿ ಈ ನಾಮಕರಣ ಸಮಾರಂಭ ನಡೆದಿದೆ.
ನಟಿ ಹರ್ಷಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಹಂಚಿಕೊಂಡ ಫೋಟೋದಲ್ಲಿ ದಂಪತಿಯೊಂದಿಗೆ ಕಂದಮ್ಮ ಕೊಡವ ಸಂಪ್ರದಾಯದ ಸೀರೆಯಲ್ಲಿ ಮಿಂಚಿದ್ದಾಳೆ. ಈ ಫೋಟೋದೊಂದಿಗೆ ಬರಹವನ್ನು ಹಂಚಿಕೊಂಡಿರುವ ಹರ್ಷಿಕಾ, “ಇಂದು ನಮ್ಮ ಮಗಳ ವಿಶೇಷ ದಿನ, ಆಕೆಗೆ ನಿಮ್ಮೆಲ್ಲರ ಶುಭಾಶಯ ಮತ್ತು ಆಶೀರ್ವಾದ ಬೇಕು. ಆಕೆ ಮಾನವೀಯತೆಯೊಂದಿಗೆ ಜಗತ್ತಿಗೆ ಸೇವೆ ಸಲ್ಲಿಸುವ ಶ್ರೇಷ್ಠ ವ್ಯಕ್ತಿಯಾಗಲಿ,” ಎಂದು ಬರೆದಿದ್ದಾರೆ.
‘ತ್ರಿದೇವಿ’ ಹೆಸರಿನ ಹಿಂದಿನ ವಿಶೇಷತೆಯನ್ನು ವಿವರಿಸಿರುವ ದಂಪತಿ, ಹಿಂದೂ ಧರ್ಮದಲ್ಲಿ ಈ ಹೆಸರು ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯಂತಹ ಮೂರು ಪ್ರಮುಖ ದೇವತೆಗಳನ್ನು ಸೂಚಿಸುತ್ತದೆ ಎಂದಿದ್ದಾರೆ. ಈ ದೇವತೆಗಳು ಕ್ರಮವಾಗಿ ಜ್ಞಾನ, ಸಂಪತ್ತು ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತವೆ. “ತ್ರಿದೇವಿ ಎಂಬ ಹೆಸರನ್ನು ಆಯ್ಕೆ ಮಾಡಲು ಕಾರಣ, ಆಕೆಯ ಜನ್ಮದಿನಾಂಕ ಮತ್ತು ಸಮಯದ ಪ್ರಕಾರ ಸಂಖ್ಯೆ 3 ಬಲವಾದ ಸಂಕೇತವಾಗಿದೆ. ಜೊತೆಗೆ, ಆಕೆ ನವರಾತ್ರಿಯ ಮೊದಲ ದಿನದಂದು ಜನಿಸಿದ್ದು, ಮೂಕಾಂಬಿಕಾ ದೇವಿಯ ಉಡುಗೊರೆಯಾಗಿ ಬಂದಿದ್ದಾಳೆ,” ಎಂದು ದಂಪತಿ ತಿಳಿಸಿದ್ದಾರೆ.
2023ರ ಆಗಸ್ಟ್ 24ರಂದು ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ವಿವಾಹವಾದರು. ಬಹುವರ್ಷಗಳ ಸ್ನೇಹಿತರಾಗಿದ್ದ ಈ ಜೋಡಿ, ತಮ್ಮ ಸ್ನೇಹವನ್ನು ಪ್ರೀತಿಯಾಗಿ ಪರಿವರ್ತಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹಕ್ಕೆ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಸಾಕ್ಷಿಯಾದರು. ವಿವಾಹದ ನಂತರ, ಈ ದಂಪತಿ ತಮ್ಮ ವೃತ್ತಿಜೀವನದಲ್ಲೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಭುವನ್ ಪೊನ್ನಣ್ಣ ಅವರ ಹೊಸ ಚಿತ್ರಕ್ಕೆ ಹರ್ಷಿಕಾ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಜೋಡಿ, ಈಗ ತಮ್ಮ ಮಗಳ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.





