ಇತ್ತೀಚೆಗೆ ಬಹುನಿರೀಕ್ಷಿತ ರಾಮರಸ ಚಿತ್ರದ ಟೀಸರ್ ಲಾಂಚ್ ಫಂಕ್ಷನ್ ನಡೆಯಿತು. ಅಲ್ಲಿ ಟೀಸರ್ ಕಂಟೆಂಟ್, ಕಲಾವಿದರು ಹಾಗೂ ತಂತ್ರಜ್ಞರ ಮಾತುಗಳಿಗಿಂತ ಜಾಸ್ತಿ ಹೈಲೈಟ್ ಆಗಿದ್ದು, ಉದ್ದಟತನದಿಂದ ಮಾತನಾಡಿದ ಪ್ರೊಡ್ಯೂಸರ್ ಗುರುದೇಶ್ ಪಾಂಡೆ ಮಾತುಗಳು.
ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?
ನಾಲಿಗೆ ಬಿಗಿ ಹಿಡಿದು ಮಾತಾಡಿ ಮಿಸ್ಟರ್.. ಉದ್ಧಟತನ ಒಳಿತಲ್ಲ..!
ನಿಮಗೆ ಐಡೆಂಟಿಟಿ ಕೊಟ್ಟಿದ್ದೇ ಮಾಧ್ಯಮ.. ಹತ್ತಿದ ಏಣಿ ಒದ್ದಿದ್ದೀರಿ
ಕೃತಜ್ಞತೆ ಇಲ್ಲವಾದ್ರೆ ಭವಿಷ್ಯ ಕಷ್ಟ.. ತಿದ್ದು ನಡೆಯೋ ಮಂಕುತಿಮ್ಮ
ರಾಜಾಹುಲಿ, ರುದ್ರತಾಂಡವ ಸಿನಿಮಾಗಳಿಂದ ಲೈಮ್ಲೈಟ್ಗೆ ಬಂದ ಗುರುದೇಶ್ ಪಾಂಡೆ ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕರಾಗಿ ನೆಲೆಯೂರುತ್ತಾರೆ. ಅವು ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ಮಾಡಿದ ಸಿನಿಮಾಗಳು ಆಗದಿದ್ರೂ.. ರಿಮೇಕ್ ಆದ್ರೂ ಸಹ ಕನ್ನಡಿಗರಿಗೆ ರುಚಿಸುತ್ತವೆ. ಅದ್ರಲ್ಲೂ ಅಂದಿನ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದ ಫಿಲ್ಮ್ ಜರ್ನಲಿಸ್ಟ್ಗಳು ಕೈ ಹಿಡಿದು, ಪಾಂಡೆಯನ್ನ ಸ್ಟಾರ್ ಡೈರೆಕ್ಟರ್ ಆಗಿಸಿದ್ರು. ಆ ನಂತ್ರ ಬಂದಂತಹ ಯಾವುದೇ ಸಿನಿಮಾ ಭರವಸೆ ಮೂಡಿಸಲಿಲ್ಲ.
ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ಮನ್ ಸಿನಿಮಾ ಎಲ್ಲರಿಂದ ಭೇಷ್ ಅನಿಸಿಕೊಂಡಿತ್ತಾದ್ರೂ ಅದರ ನಿರ್ದೇಶಕ ಅವರಲ್ಲ. ಬಂಡವಾಳ ಹಾಕಿ.. ಲಾಭ ಕೂಡ ಮಾಡಿಕೊಂಡ್ರು. ಮೂರು ವರ್ಷಗಳ ಹಿಂದೆ ಪೆಂಟಗನ್ ಸಿನಿಮಾಗೆ ಕೈ ಹಾಕಿ, ಕೈ ಸುಟ್ಟಿಕೊಂಡ ಗುರುದೇಶ್ ಪಾಂಡೆ.. ಒಂದು ದೊಡ್ಡ ಗ್ಯಾಪ್ನ ಬಳಿಕ ರಾಮರಸ ಸಿನಿಮಾದ ಮೂಲಕ ಮತ್ತೆ ಟ್ರ್ಯಾಕ್ಗೆ ಬಂದಿದ್ದಾರೆ. ಈ ಬಾರಿಯೂ ಸಹ ನಿರ್ಮಾಪಕರಾಗಿ ಅಷ್ಟೇ. ಡೈರೆಕ್ಷನ್ನ ಜಟ್ಟ ಗಿರಿರಾಜ್ ಅವರೇ ಮಾಡಿದ್ದಾರೆ.
ಅಂದಹಾಗೆ ರಾಮರಸ ಬಹುತಾರಾಗಣದ ಮಿಥಿಕಲ್ ಫ್ಯಾಂಟಸಿ ಎಂಟರ್ಟೈನರ್. ಬಿಗ್ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ಕೋಮಲ್, ಶರಣ್, ಡೆಡ್ಲಿ ಆದಿತ್ಯ, ಅದಾ ಶರ್ಮಾ, ಅನುಷಾ ರೈ, ಹೆಬಾ ಪಟೇಲ್, ಬಾಲಾಜಿ ಮನೋಹರ್.. ಹೀಗೆ ದೊಡ್ಡ ಕಲಾವಿದರ ದಂಡಿದೆ ಈ ಸಿನಿಮಾದಲ್ಲಿ. ಇತ್ತೀಚೆಗೆ ಇದರ ಟೀಸರ್ ಲಾಂಚ್ ಫಂಕ್ಷನ್ ಜಿಟಿ ಮಾಲ್ನಲ್ಲಿರೋ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ಆದ್ರೆ ಅಲ್ಲಿ ಕಲಾವಿದರು, ತಂತ್ರಜ್ಞರು ಹಾಗೂ ಟೀಸರ್ ಕಂಟೆಂಟ್ಗಿಂತ ಸೌಂಡ್ ಮಾಡಿದ್ದು ಬೇರೆಯದ್ದೇ ಕಂಟೆಂಟ್. ನಿರ್ಮಾಪಕ ಕಮ್ ಕ್ರಿಯೇಟಿವ್ ಹೆಡ್ ಗುರುದೇಶ್ ಪಾಂಡೆ ಆಡಿದ ಉದ್ಧಟತನದ ಮಾತುಗಳು.
ನಿರ್ದೇಶಕ ಬಿ ಎಂ ಗಿರಿರಾಜ್ ಅವರು ಏಕೆ ಬಂದಿಲ್ಲ..? ಕಳೆದ ಪ್ರೆಸ್ಮೀಟ್ಗೂ ಅವರು ಗೈರಾಗಿದ್ರು ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಗುರುದೇಶ್ ಪಾಂಡೆ.. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಮುಗಿಬಿದ್ದರು. ನಾನು ಇನ್ಮೇಲೆ ಸುದ್ದಿಗೋಷ್ಠಿಗಳೇ ಮಾಡಲ್ಲ. ನನಗೆ ಡಿಜಿಟಲ್ ಮೀಡಿಯಾ, ಯೂಟ್ಯೂಬ್, ಪಾಪರಾಜಿಗಳೇ ಸಾಕು ಅಂತ ನಾಲಿಗೆ ಹರಿಬಿಟ್ಟರು.
ನಟ ಪ್ರಜ್ವಲ್ ದೇವರಾಜ್, ಕಾರ್ತಿಕ್ ಮಹೇಶ್, ನಟಿ ಅನುಷಾ ರೈ, ಸ್ಫೂರ್ತಿ, ನಿರ್ದೇಶಕ ಜಡೇಶ್ ಕೆ ಹಂಪಿ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರ ಮುಂದೆಯೇ ಗುರುದೇಶ್ ಪಾಂಡೆ.. ನನಗೆ ಮಾಧ್ಯಮದ ಅಗತ್ಯವೇ ಇಲ್ಲ. ಇನ್ಮೇಲೆ ಸುದ್ದಿಗೋಷ್ಠಿಗಳಿಗೆ ಕರೆಯೋದೇ ಇಲ್ಲ ಅಂತ ಮಾತು ಜಾರಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾದಾಗ ಕ್ಷಮೆ ಕೂಡ ಕೇಳಿದ್ದಾರೆ. ಕ್ಷಮೆ ಕೇಳಿದ್ರೆ ಸಾಕಾ ಅಂದಿದ್ದಕ್ಕೆ.. ಮತ್ತೇನು ಮಾಡ್ಬೇಕು ಹೇಳಿ ಅಂತ ಡಿಬಾಸ್ ದರ್ಶನ್ ರೀತಿ ಕೊಂಕಾಗಿ ಮಾತಾಡಿದ್ದಾರೆ.
ಸಿನಿಮಾದ ಹೆಸರು ರಾಮರಸ. ಅದ್ಯಾಕೋ ಗುರುದೇಶ್ ಪಾಂಡೆ ರಾಮರಸ ಕುಡಿದೇ ಸುದ್ದಿಗೋಷ್ಠಿಗೆ ಬಂದು ವೇದಿಕೆ ಹತ್ತಿ, ಮೈಕ್ ಹಿಡಿದಂತಿತ್ತು. ನಾಲಿಗೆ ಬಿಗಿ ಹಿಡಿದು ಮಾತಾಡಿ ಮಿಸ್ಟರ್ ಗುರುದೇಶ್ ಪಾಂಡೆ. ನಿಮಗೆ ಐಡೆಂಟಿಟಿ ಕೊಟ್ಟಿರೋದು ಮಾಧ್ಯಮ. ಉದ್ಧಟತನದ ಮಾತುಗಳು ಶೋಭೆ ತರುವುದಿಲ್ಲ ನಿಮಗೆ. ಮಾಧ್ಯಮ ಮೇಲೆ ನಿಮಗೆ ಒಂದು ಸಣ್ಣ ಕೃತಜ್ಞತಾ ಭಾವ ಕೂಡ ಇಲ್ಲ. ಹತ್ತಿದ ಏಣಿಯನ್ನ ಒದೆಯುವುದು ಎಷ್ಟೊತ್ತು..? ಇಷ್ಟು ವರ್ಷ ಕಷ್ಟ ಪಟ್ಟು ಕಟ್ಟಿದ ಸಾಮ್ರಾಜ್ಯವನ್ನ ಒಂದೆರಡು ಸೆಕೆಂಡ್ಗಳಲ್ಲಿ ಮಣ್ಣು ಪಾಲು ಮಾಡಿಕೊಂಡುಬಿಟ್ರಿ. ಇನ್ನಾದರೂ ತಿದ್ದು ನಡೆಯೋ ಮಂಕುತಿಮ್ಮ ಅಂತ ಹೇಳಿಸಿಕೊಳ್ಳಬೇಡಿ. ಯಾಕಂದ್ರೆ ನೀವು ಚಿತ್ರರಂಗದಲ್ಲಿ ಹೊಸಬರಿಗೆ ಮಾದರಿ ಆಗಬೇಕು. ನೀವೇ ಹೀಗೆ ತಪ್ಪು ಮಾಡಿದ್ರೆ ಎಷ್ಟು ಸರಿ..?
ಅಲ್ಲಿದ್ದ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರರು ಆ ಸುದ್ದಿಗೋಷ್ಠಿಯನ್ನ ಬಾಯ್ಕಾಟ್ ಮಾಡದೆ ವೃತ್ತಿ ಧರ್ಮ ಮೆರೆದಿದ್ದಾರೆ. ಅದು ನಿಮ್ಮ ಮೇಲಿನ ಗೌರವಕ್ಕೆ ಅಲ್ಲ.. ಅವರಿಗೆ ಅವರ ಕೆಲಸದ ಮೇಲೆ ಇರೋ ಗೌರವ ಅನ್ನೋದು ಮರೆಯಬೇಡಿ. ದರ್ಶನ್ ರೀತಿ ಮರೆಯಬೇಡಿ. ಮೆರೆದವಱರೂ ಉದ್ಧಾರ ಆದ ನಿದರ್ಶನಗಳೇ ಇಲ್ಲ. ಮಾಧ್ಯಮ ಹಾಗೂ ಚಿತ್ರರಂಗ ಒಂದೇ ನಾಣ್ಯದ ಎರಡು ಮುಖಗಳು. ಆ ಮಾಧ್ಯಮಕ್ಕೆ ನಿಮ್ಮ 3ನೇ ಮುಖ ತೋರಿ ಬಹುದೊಡ್ಡ ತಪ್ಪು ಮಾಡಿದ್ದೀರಿ. ಈಗಲೂ ಕಾಲ ಮಿಂಚಿಲ್ಲ. ಸರಿಪಡಿಸಿಕೊಳ್ಳಿ ಅಂತಷ್ಟೇ ನಾವು ನಿಮಗೆ ಕಿವಿಮಾತು ಹೇಳಬಲ್ಲೆವು.





