ಕನ್ನಡದ ಖ್ಯಾತ ಕಿರುತೆರೆ ನಟಿ ನಂದಿನಿ ಅವರು ಬೆಂಗಳೂರಿನ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಟ್ಟೂರು ಮೂಲದ ನಂದಿನಿ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಕನ್ನಡ ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದರು. ‘ಜೀವ ಹೂವಾಗಿದೆ’, ‘ಸಂಘರ್ಷ’, ‘ಮಧುಮಗಳು’, ‘ನೀನಾದೆ ನಾ’ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಕೇವಲ ಕನ್ನಡದಲ್ಲಷ್ಟೇ ಅಲ್ಲದೆ, ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿಯೂ ನಂದಿನಿ ಅಭಿನಯಿಸಿದ್ದರು.
ಇತ್ತೀಚಿನ ದಿನಗಳಲ್ಲಿ ನಂದಿನಿ, ‘ಗೌರಿ’ ಎಂಬ ತಮಿಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ದುರ್ಗಾ ಹಾಗೂ ಕನಕ ಎಂಬ ಎರಡು ವಿಭಿನ್ನ ಪಾತ್ರಗಳನ್ನು ಅವರು ನಿರ್ವಹಿಸುತ್ತಿದ್ದು, ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ‘ಗೌರಿ’ ಧಾರಾವಾಹಿಯ ಚಿತ್ರೀಕರಣ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಶೂಟಿಂಗ್ ಅನ್ನು ಚೆನ್ನೈಗೆ ಸ್ಥಳಾಂತರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ನಂದಿನಿ ಅವರು ಚೆನ್ನೈನಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ಇತ್ತೀಚೆಗೆ ಶೂಟಿಂಗ್ ಮುಗಿಸಿಕೊಂಡು ವಿಶ್ರಾಂತಿಗಾಗಿ ಬೆಂಗಳೂರಿಗೆ ಮರಳಿದ್ದರು ಎನ್ನಲಾಗಿದೆ. ಆದರೆ, ಅವರು ನಿನ್ನೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.





