ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿನಿಮಾ ತನ್ನ ಕಂಟೆಂಟ್ ಮೂಲಕ ಸದ್ದು ಮಾಡುತ್ತಿದೆ. ಈಗಾಗಲೇ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಈ ಚಿತ್ರದಿಂದ ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ.
ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಏಳುಮಲೆ ಚಿತ್ರದ ಕಾಪಾಡೋ ದ್ಯಾವ್ರೇ ಎಂಬ ಗೀತೆ ಅನಾವರಣ ಮಾಡಲಾಯಿತು. ಚಿತ್ರರಂಗದ ಹಿರಿಯ ನಟಿಯರಾದ ಶೃತಿ, ಸುಧಾರಾಣಿ, ಹಾಗೂ ತಾರಾ ಅನುರಾಧ ಹಾಡನ್ನು ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ತರುಣ್ ಸುಧೀರ್, ನಿರ್ದೇಶಕ ಪುನೀತ್ ರಂಗಸ್ವಾಮಿ, ನಾಯಕ ರಾಣಾ, ನಾಯಕಿ ಪ್ರಿಯಾಂಕಾ, ಸಂಗೀತ ನಿರ್ದೇಶಕ ಡಿ ಇಮ್ಮಾನ್, ಗಾಯಕಿ ಮಂಗ್ಲಿ, ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವ ರಾಜುಗೌಡ್ರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾರಮ್ಮ ಮಾತನಾಡಿ, ಹಾಡು ನೋಡಿ ತುಂಬಾ ಖುಷಿಯಾಯ್ತು. ಸಣ್ಣದಾಗಿ ದುಃಖ ಆಯ್ತು. ಎಲ್ಲಿ ಪ್ರೇಮಿಗಳನ್ನು ಬಹಳ ಕಷ್ಟಪಡುವುದು ತೋರಿಸುತ್ತಾರೆ ಎಂದು. ಇದು ಸತ್ಯಕಥೆ ಅಂದಾಗ ಅದು ಹಾಗೇಯೇ ತೋರಿಸಬೇಕು. ರಾಣಾ, ಪ್ರಿಯಾಂಕಾ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ಡೈರೆಕ್ಟರ್ ತಮ್ಮ ಕೆಲಸ ಮಾಡಿದ್ದಾರೆ. ತರುಣ್ ಸುಧೀರ್ ಏನ್ ಮಾಡಿದ್ರೂ ಫಸ್ಟ್ ಕ್ಲಾಸ್ ಆಗಿದೆ ಅನ್ನೋದು ಫ್ರೋವ್ ಆಗಿದೆ. ಸಾಂಗ್ ಚೆನ್ನಾಗಿದೆ. ಸಿನಿಮಾ ಹಿಟ್ ಆಗಲಿ ಎಂದು ಹಾರೈಸಿದರು.
ಶೃತಿ ಮಾತನಾಡಿ, ಏಳುಮಲೆ ಸಿನಿಮಾ ನೋಡಿ ಪ್ರೇಕ್ಷಕರು ಹೊರಗೆ ಬಂದಾಗ ರಾಣಾ ಸಖತ್ ಆಗಿ ಆಕ್ಟ್ ಮಾಡಿದ್ದಾರೆ ಎಂದು ಹೇಳ್ತಾರೆ. ಒಬ್ಬ ಕಲಾವಿದನಾಗಿ ಹೆಸರು ಮಾಡುವ ಅವಕಾಶ ಈ ಚಿತ್ರದಲ್ಲಿ ರಾಣಾಗೆ ಸಿಕ್ಕಿದೆ. ಪ್ರಿಯಾಂಕಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇದು ನನ್ನ ಕುಟುಂಬದ ಸಿನಿಮಾ. ನಾವು ಬೆಂಗಳೂರಿಗೆ ಬರಲು ಕಾರಣ ಸುಧೀರ್ ಸರ್. ಹೊಸಬರಿಗೆ ಯಾರು ಅವಕಾಶ ಕೊಡ್ತಾರೆ ಎಂಬ ಭಯ ಹೋಗಲಾಡಿಸಲು ಚಿತ್ರರಂಗದಲ್ಲಿ ತರುಣ್ ತರಹದ ಡೈರೆಕ್ಟರ್ ಇದ್ದಾರೆ. ಹೊಸಬರಿಗೆ ಅವಕಾಶ ಕೊಡುವುದು ಚಿಕ್ಕ ವಿಷಯವಲ್ಲ. ಅದನ್ನು ತರುಣ್ ಮಾಡುತ್ತಿದ್ದಾನೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.
ನಟಿ ಸುಧಾರಾಣಿ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಮತ್ತೆ ಅದೇ ಹೊಳಪು, ಮೆರಗು ಏಳುಮಲೆ ಸಿನಿಮಾದ ಟೀಸರ್ ಹಾಡು ನೋಡಿದಾಗ ಸಿಗುತ್ತಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ. ಇಡೀ ತಂಡದ ಡೆಡಿಕೇಷನ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಕಲಾ ಸರಸ್ವತಿ ಎಲ್ಲರನ್ನೂ ಕೈಬೀಸಿ ಕರೆಯಲ್ಲ. ಕರೆದಾಗ ಅದನ್ನು ಭಕ್ತಿ, ನಿಷ್ಠೆಯಿಂದ ಮುಂದುವರೆಸಬೇಕು. ಆ ಅವಕಾಶ ರಾಣಾ, ಪ್ರಿಯಾಂಕಾಗೆ ಸಿಕ್ಕಿದೆ. ಇದನ್ನು ನೀವು ಸದುಪಯೋಗಪಡಿಸಿಕೊಂಡಿದ್ದಾರೆ. ತರುಣ್ ಅವರು ತಂದೆ ಹೆಸರನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಟನೆ, ನಿರ್ದೇಶನ ಎರಡರಲ್ಲಿಯೂ ಹೆಸರು ಮಾಡಿದ್ದಾರೆ. ಈಗ ನಿರ್ಮಾಪಕರಾಗಿ ಒಳ್ಳೊಳ್ಳೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಿ ಇಮ್ಮಾನ್ ಮಾತನಾಡಿ, ಈ ಮೊದಲು ಸುದೀಪ್ ಸರ್ ಹಾಗೂ ಪುನೀತ್ ಸರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ತರುಣ್ ಸುಧೀರ್ ಅವರ ಸಿನಿಮಾದ ಭಾಗವಾಗಿದ್ದೇನೆ. ತರುಣ್ ಅದ್ಭುತ ವ್ಯಕ್ತಿ. ನಾನು ಅವರ ಮೂಲಕ ನಿರ್ದೇಶಕ ಪುನೀತ್ ಸರ್ ಭೇಟಿಯಾದೆ. ಏಳುಮಲೆ ಒಂದು ಸುಂದರ ಪ್ರೇಮಕಥೆ. ಈ ಚಿತ್ರದಲ್ಲಿ ರಾಣಾ, ಪ್ರಿಯಾಂಕಾ ಚೆನ್ನಾಗಿ ನಟಿಸಿದ್ದಾರೆ. ನಾನು ಚಿತ್ರಕ್ಕಾಗಿ ಸಂಗೀತ ನಿರ್ದೇಶನ ಮಾಡಿದ್ದೇನೆ. ಈ ಜರ್ನಿಯನ್ನು ತುಂಬಾ ಎಂಜಾಯ್ ಮಾಡಿದೆ. ನಾನು ಸಿನಿಮಾ ನೋಡಿದ ಬಳಿಕ ಯಾರು ಕ್ಯಾಮೆರಾಮೆನ್ ಎಂದು ಕೇಳಿದೆ. ಅದ್ವೈತ್ ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು.
ಕಾಪಾಡೋ ದ್ಯಾವ್ರೇ ಹಾಡು ಮೂರು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಮೆಲೋಡಿ ಗೀತೆಗೆ ಮಂಗ್ಲಿ ಧ್ವನಿಯಾಗಿದ್ದು, ಡಿ ಇಮ್ಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರೀತಿಗಾಗಿ ಪರಿತಪ್ಪಿಸುವ ಪ್ರೇಮಿಗಳ ನಡುವಿನ ಮಧುರ ಗೀತೆ ಇದಾಗಿದ್ದು, ರಾಣಾ ಹಾಗೂ ಪ್ರಿಯಾಂಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ `ಏಳುಮಲೆ’ ಸಿನಿಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡ್ಗ ಹರೀಶ್ ಆಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಇದ್ದಾರೆ.
ಸಹ ನಿರ್ದೇಶಕರಾಗಿ, ಗೀತ ಸಾಹಿತಿಯಾಗಿ `ಕಾಟೇರ’, `ಗುರುಶಿಷ್ಯರು’ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿರುವ ಪುನೀತ್ ರಂಗಸ್ವಾಮಿ ಈಗ `ಏಳುಮಲೆ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ.
ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ವಿತ್ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮನ್ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡದಲ್ಲಿ ರಿಲೀಸ್ ಆಗುತ್ತಿದೆ.