ದುನಿಯಾ ವಿಜಯ್ ಲ್ಯಾಂಡ್‌ಲಾರ್ಡ್ ಚಿತ್ರಕ್ಕೆ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿದ ಬಳಿಕ ಮತ್ಷಷ್ಟು, ಮಗದಷ್ಟು ಮಂದಿ ಥಿಯೇಟರ್‌ಗೆ ಬಂದು ಸಿನಿಮಾ ನೋಡುವಂತಾಗಿದೆ. ಅದ್ರಲ್ಲೂ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪನವರು ಬಂದು ಚಿತ್ರ ವೀಕ್ಷಿಸಿ, ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಆನೇಕಲ್ ಜನ ತನ್ನೂರಿನ ಸ್ಟಾರ್ ದುನಿಯಾ ವಿಜಯ್‌ಗಾಗಿ ಜಿಲ್ಲೆಯಾದ್ಯಂತ ಹೊಸ ಅಲೆ ಎಬ್ಬಿಸಿದೆ.
ಲ್ಯಾಂಡ್‌ಲಾರ್ಡ್..ಜನವರಿ 23ರಂದು ತೆರೆಕಂಡ ಈ ಚಿತ್ರ ಯಶಸ್ವಿ ಮೂರನೇ ವಾರದತ್ತ ಮುನ್ನುಗ್ಗುತ್ತಿದೆ. 25 ದಿನಗಳತ್ತ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋ ಈ ಚಿತ್ರದ ಸಾಮಾಜಿಕ ಕಳಕಳಿಯ ಕಂಟೆಂಟ್ ನೋಡಿ, ರಾಜ್ಯ ಸರ್ಕಾರದಿಂದ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಟ್ಯಾಕ್ಸ್ ಫ್ರೀ ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಸಮಜಾ ಕಲ್ಯಾಣ ಸಚಿವರಾದ ಹೆಚ್. ಸಿ. ಮಹದೇವಪ್ಪನವರೇ ಬಂದು ಚಿತ್ರ ವೀಕ್ಷಿಸಿ, ಇಡೀ ಟೀಂಗೆ ಶಹಬ್ಬಾಸ್ ಅಂತ ಬೆನ್ನು ತಟ್ಟಿ, ಪ್ರಶಂಸಿಸಿದ್ದಾರೆ.

ಲ್ಯಾಂಡ್‌ಲಾರ್ಡ್‌ಗೆ ಸಮಾಜ ಕಲ್ಯಾಣ ಸಚಿವರಿಂದ ಶಹಬ್ಬಾಸ್
ಸಾಮಾಜಿಕ ಸಂದೇಶ.. ಗುಣಾತ್ಮಕ ಚಿತ್ರ.. ಹಣದ ಉದ್ದೇಶವಿಲ್ಲ..!

ಹಣ ಮಾಡುವ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ ಅನ್ನೋದನ್ನ ನೋಡಿದ ಮೇಲೆ ಗೊತ್ತಾಗ್ತಿದೆ ಎಂದ ಸಚಿವರು, ದುನಿಯಾ ವಿಜಯ್, ರಚಿತಾ, ರಿತನ್ಯಾ, ರಾಜ್ ಶೆಟ್ಟಿ ಅವರ ನಟನೆ ತುಂಬಾ ಚೆನ್ನಾಗಿದೆ. ಪಾತ್ರಗಳಿಗೆ ಜೀವ ತುಂದಿದ್ದಾರೆ ಎಂದರು. ಸಾಮಾಜಿಕ ಸಂದೇಶ ಇರುವ ಗುಣಾತ್ಮಕ ಚಿತ್ರ ಇದಾಗಿದ್ದು, ಸಂವಿಧಾನ ನಮ್ಮನ್ನ ರಕ್ಷಣೆ ಮಾಡುತ್ತೆ. ಸಂವಿಧಾನವನ್ನ ರಕ್ಷಿಸೋ ಜವಾಬ್ದಾರಿ ನಮ್ಮದು ಅನ್ನೋ ಸಂದೇಶವಿದೆ ಎಂದರು.

ಸಂವಿಧಾನ ನಮ್ಮನ್ನ ರಕ್ಷಿಸುತ್ತೆ..ನಾವು ಸಂವಿಧಾನ ರಕ್ಷಿಸೋಣ
ಸಚಿವರಿಂದ ಶ್ಲಾಘನೆ..ಡೈರೆಕ್ಟರ್, ವಿಜಯ್ & ಟೀಂ ಖುಷ್..!
ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಹಾಗೂ ಇಲಾಖೆಗೆ ದುನಿಯಾ ವಿಜಯ್ ಹಾಗೂ ಡೈರೆಕ್ಟರ್ ಧನ್ಯವಾದ ತಿಳಿಸಿದರು.
ದುನಿಯಾ ವಿಜಯ್ ಅವರು ಬಹಳ ತಳಮಟ್ಟದಿಂದ ಬಂದು ತನ್ನದೇ ಆದ ದುನಿಯಾ ಅನ್ನೋ ಕೋಟೆ ಕಟ್ಟಿಕೊಂಡಿರೋ ಸೂಪರ್ ಸ್ಟಾರ್. ಆನೇಕಲ್‌ನ ಕುಂಬಾರನಹಳ್ಳಿಯ ಕಪ್ಪು ವಜ್ರ ವಿಜಯ್‌ಗೆ ಅಲ್ಲಿರೋ ಜನ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದ್ದಾರೆ. ಟ್ರ್ಯಾಕ್ಟರ್‌ಗಳ ತುಂಬೆಲ್ಲಾ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಶಾಲಾ ಕಾಲೇಜು ಮಕ್ಕಳು ಬೆಂಬಲಕ್ಕೆ ನಿಂತಿದ್ದಾರೆ. ಬೈಕ್ ಱಲಿ, ರೋಡ್ ಜಾಥಾಗಳೆಲ್ಲಾ ಮಾಡಿದ್ದಾರೆ. ಇದಲ್ಲವೇ ನಿಜವಾದ ಸಕ್ಸಸ್..?

ವಿಜಯ್‌ಗೆ ಆನೇಕಲ್ ಜನಬಲ.. ಇದಲ್ಲವೇ ಸಕ್ಸಸ್ ದುನಿಯಾ..?
ತನ್ನೂರಿನ ಸ್ಟಾರ್‌ಗಾಗಿ ಟ್ರ್ಯಾಕ್ಟರ್, ಬೈಕ್‌ಗಳಲ್ಲಿ ಜಾಥಾ, ಪ್ರಮೋಷನ್
ಒಬ್ಬ ಸ್ಟಾರ್‌ಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೇನು ಇರೋಕೆ ಸಾಧ್ಯ ನೀವೇ ಹೇಳಿ. ಎಲ್ಲರೂ ಹಣ ಮಾಡ್ತಾರೆ. ಆದ್ರೆ ಸಿನಿಮಾ ಮೂಲಕ ಸಂದೇಶ ನೀಡುವ ಕಾರ್ಯ ವಿಜಯ್ ಮಾಡಿದ್ದಾರೆ. ಇಂತಹ ನಿಷ್ಕಲ್ಮಶವಾದ ಪ್ರಯೋಗಗಳಿಗೆ ಜನ ಹೈಕಾರ ಹಾಕಿದಾಗ ಆ ಉದ್ದೇಶ ಸಾಫಲ್ಯವಾಗಲಿದೆ. ಸದ್ಯ ವಿಜಯ್ ಅವರಿಗೆ ಈ ಚಿತ್ರದಿಂದ ಹಣ, ಆಸ್ತಿ, ಅಂತಸ್ತು ಎಷ್ಟು ಬಂತು ಅನ್ನೋದಕ್ಕಿಂತ ಒಬ್ಬ ಕಲಾವಿದನಾಗಿ ಆತ ತೋರಿದ ಸಾಮಾಜಿಕ ಬದ್ಧತೆ ನಿಜಕ್ಕೂ ಶ್ಲಾಘನೀಯ. ಸೋ.. ಇಂತಹ ಮತ್ತಷ್ಟು, ಮಗದಷ್ಟು ಪ್ರಯತ್ನಗಳು ಹಾಗೂ ಪ್ರಯೋಗಗಳು ನಿಮ್ಮಿಂದ ಆಗಲಿ ವಿಜಯ್ ಸರ್ ಅಂತ ಹಾರೈಸೋಣ.





