ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಅಧಿಕೃತವಾಗಿ ತೆರೆ ಬಿದ್ದಿದೆ. ದಂಪತಿಯ ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಂತಿಮ ಆದೇಶ ನೀಡಿದ್ದು, ವಿಚ್ಛೇದನ ಮಂಜೂರು ಮಾಡಿದೆ. ಇದೇ ವೇಳೆ ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ಪಾವತಿಸುವಂತೆ ನಟ ದುನಿಯಾ ವಿಜಯ್ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದೆ. ಈ ಮೂಲಕ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ವೈವಾಹಿಕ ವಿವಾದಕ್ಕೆ ಕಾನೂನುಬದ್ಧ ಅಂತ್ಯ ಸಿಕ್ಕಂತಾಗಿದೆ.
ಡಿವೋರ್ಸ್ ಬಳಿಕ ನಾಗರತ್ನ ಭಾವುಕ ಪೋಸ್ಟ್
ಹೈಕೋರ್ಟ್‌ನ ಆದೇಶದ ಬೆನ್ನಲ್ಲೇ ನಾಗರತ್ನ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ತಾವು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮದುವೆ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
“ಇಷ್ಟು ವರ್ಷಗಳ ಕಾಲ ನಾನು ನನ್ನ ಮಕ್ಕಳಿಗಾಗಿ ಹಾಗೂ ಅವರ ಭವಿಷ್ಯದ ಒಳಿತಿಗಾಗಿ ಎಲ್ಲವನ್ನೂ ಸಹಿಸಿಕೊಂಡು, ಈ ಮದುವೆಯನ್ನು ಉಳಿಸಿಕೊಳ್ಳುವ ಆಶಯದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದೆ. ಅದು ಸುಲಭವಾಗಿರಲಿಲ್ಲ. ಆದರೆ ಇಂದು ನ್ಯಾಯಾಲಯವು ಅಂತಿಮವಾಗಿ ವಿಚ್ಛೇದನವನ್ನು ಮಂಜೂರು ಮಾಡಿದೆ” ಎಂದು ನಾಗರತ್ನ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ನೋವಿನ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ತಾವು ಅನುಭವಿಸಿದ ‘ನಾರ್ಸಿಸಿಸ್ಟಿಕ್ ಅಬ್ಯೂಸ್’ ಹಾಗೂ ಅದರಿಂದ ಉಂಟಾದ ನೋವು ಮತ್ತು ಪರಿಣಾಮಗಳನ್ನು ಸಹಿಸಿಕೊಂಡಿರುವುದಾಗಿ ಹೇಳಿದ್ದಾರೆ. ಹೊರಗಿನಿಂದ ಯಾರಿಗೂ ಕಾಣದ ಆಳವಾದ ಮಾನಸಿಕ ಹಾಗೂ ಭಾವನಾತ್ಮಕ ನೋವಿನೊಂದಿಗೆ ಬದುಕುವುದು ಹೇಗಿರುತ್ತದೆ ಎಂಬುದು ತಮಗೆ ಮಾತ್ರ ಗೊತ್ತು ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
‘ನನ್ನ ಅನುಭವವನ್ನು ಒಂದು ದಿನ ಹಂಚಿಕೊಳ್ಳುತ್ತೇನೆ’
ತಮ್ಮ ಹೇಳಿಕೆ ಯಾರ ಮೇಲೂ ಆರೋಪ ಹೊರಿಸುವ ಉದ್ದೇಶ ಹೊಂದಿಲ್ಲ ಎಂದು ನಾಗರತ್ನ ಸ್ಪಷ್ಟಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಅರಿವು ಮೂಡಿಸುವುದೇ ತಮ್ಮ ಉದ್ದೇಶ ಎಂದು ಹೇಳಿದ್ದಾರೆ.
ತಮ್ಮ ಅನುಭವವನ್ನು ಒಂದು ದಿನ ತಮ್ಮದೇ ಮಾತುಗಳಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿರುವ ನಾಗರತ್ನ, ಸದ್ಯ ಮೌನವಾಗಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. “ಎಲ್ಲದಕ್ಕೂ ಒಂದು ಸರಿಯಾದ ಸಮಯವಿದೆ” ಎಂಬ ಅರ್ಥದೊಂದಿಗೆ ತಮ್ಮ ನೋವು ಮತ್ತು ಅನುಭವಗಳನ್ನು ಸದ್ಯ ಬಹಿರಂಗಪಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮಕ್ಕಳ ಭವಿಷ್ಯವೇ ಮೊದಲ ಆದ್ಯತೆ
ನಾಗರತ್ನ ತಮ್ಮ ಮೂವರು ಮಕ್ಕಳೇ ತಮ್ಮ ಶಕ್ತಿ ಎಂದು ಹೇಳಿದ್ದಾರೆ. ಮಕ್ಕಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೋವುಗಳು ಅವರ ಬದುಕಿನ ಮೇಲೆ ನೆರಳು ಬೀಳುವುದು ತಮಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
“ನನ್ನ ಮಕ್ಕಳ ಭವಿಷ್ಯವೇ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿತ್ತು. ಇಂದಿಗೂ ಅದೇ ನನ್ನ ಮೊದಲ ಆದ್ಯತೆ” ಎಂದು ಅವರು ಹೇಳಿದ್ದಾರೆ. ತಮ್ಮ ಮೂವರು ಮಕ್ಕಳು ಯಾವಾಗಲೂ ತಮ್ಮ ಶಕ್ತಿಯಾಗಿ ತಮ್ಮೊಂದಿಗೆ ನಿಂತಿದ್ದಾರೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ದುನಿಯಾ ವಿಜಯ್‌ಗೆ ಶುಭ ಹಾರೈಕೆ
ಇದೇ ವೇಳೆ ನಾಗರತ್ನ ಅವರು ದುನಿಯಾ ವಿಜಯ್ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ. ವಿಜಯ್ ಕುಮಾರ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸಿರುವ ಅವರು, ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಟ್ಟಿರುವುದಾಗಿ ಹೇಳಿದ್ದಾರೆ.





