ಅಭಿನೇತ್ರಿ ಲೀಲಾವತಿ ಇಂದು ನಮ್ಮೊಂದಿಗೆ ಇಲ್ಲ. ಆದ್ರೆ ಆಕೆಯ ಕನಸುಗಳನ್ನ ನನಸು ಮಾಡೋದೊಂದೇ ನನ್ನ ಏಕಮೇವ ಧ್ಯೇಯ ಅಂತ ನಟ ವಿನೋದ್ ರಾಜ್, ಅಮ್ಮನ ಹಾದಿಯಲ್ಲೇ ನಡೆಯುತ್ತಿರೋದು ಇಂಟರೆಸ್ಟಿಂಗ್. ಚೆನ್ನೈನಲ್ಲಿ ಇಂದು ಡಾ. ಲೀಲಾವತಿ ಹೆಲ್ತ್ ಸೆಂಟರ್ ಅನಾವರಣಗೊಂಡಿದ್ದು, ವಿನೋದ್ ರಾಜ್ಗೆ ಪತ್ನಿ ಹಾಗೂ ಮಗ ಕೂಡ ಸಾಥ್ ನೀಡಿದ್ದಾರೆ.
- ಚೆನ್ನೈನಲ್ಲಿ ಲೀಲಾವತಿ ಆಸ್ಪತ್ರೆ.. ತಾಯಿ ಕನಸು ಮಗನಿಂದ ನನಸು
- ತಮಿಳುನಾಡಿನ ಲೇಬರ್ ಮಿನಿಸ್ಟರ್ ಮೂಲಕ ಆಸ್ಪತ್ರೆ ಉದ್ಘಾಟನೆ
- ಬಡವರಿಗೆ ಬಟ್ಟೆ, ಅನ್ನದಾನ.. ವಿನೋದ್ಗೆ ಪತ್ನಿ & ಮಗ ಸಾಥ್
- ಸಾಮಾಜಿಕ ಸೇವೆಗಳಿಂದ ಲೀಲಮ್ಮನ ಮಗ ಸಖತ್ ಸೆನ್ಸೇಷನ್
ಎಷ್ಟು ದಿನ ಬದುಕಿದ್ವಿ ಅನ್ನೋದು ಮುಖ್ಯ ಆಗಲ್ಲ. ಹೇಗೆ ಬದುಕಿದ್ವಿ ಅನ್ನೋದು ಬಹಳ ಮುಖ್ಯವಾಗುತ್ತೆ. ಹಣ ಎಲ್ಲರೂ ಮಾಡ್ತಾರೆ. ಆದ್ರೆ ದುಡಿದ ಹಣದಲ್ಲಿ ಒಂದಷ್ಟು ಮಂದಿ ಅಸಹಾಯಕರಿಗೆ ಆಸರೆ ಆದ್ರೆ ಅದಕ್ಕಿಂತ ಸಾರ್ಥಕ ಬದುಕು ಮತ್ತೊಂದಿರಲು ಸಾಧ್ಯವೇ? ನಮ್ಮ ಕನ್ನಡ ಚಿತ್ರರಂಗದ ಅಭಿನೇತ್ರಿ ದಿವಂಗತ ಹಿರಿಯನಟಿ ಲೀಲಾವತಿ, ತಮ್ಮ ಇಡೀ ಜೀವನದುದ್ದಕ್ಕೂ ಅದೆಷ್ಟೋ ಮಂದಿಗೆ ಸಹಾಯ ಮಾಡ್ತಾ ಬಂದಿದ್ರು. ಇದೀಗ ಆಕೆಯ ಕನಸುಗಳನ್ನ ಮಗ ವಿನೋದ್ ರಾಜ್ ನನಸು ಮಾಡ್ತಿರೋದು ವಿಶೇಷ.
ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿ ನಿಧನರಾದಾಗ ಎಷ್ಟು ಜನ ಬಂದಿದ್ರು ಅನ್ನೋದು ಗೊತ್ತೇಯಿದೆ. ಅದೇ ಆಕೆಯ ನಿಜವಾದ ಆಸ್ತಿ. ಅಷ್ಟೇ ಅಲ್ಲ, ಬಡ ಕಲಾವಿದರಿಗೆ ಬಹಳ ವರ್ಷಗಳಿಂದ ಆರ್ಥಿಕ ಸಹಾಯ ಮಾಡ್ತಾ ಬಂದಿದ್ರು. ಸೋಲದೇವನಹಳ್ಳಿಯಲ್ಲಿ ಬಡವರಿಗಾಗಿ ಒಂದು ಆಸ್ಪತ್ರೆ ಹಾಗೂ ಪಶು ಆಸ್ಪತ್ರೆ ಕೂಡ ಕಟ್ಟಿಸಿದ್ರು. ಇದೀಗ ಲೀಲಮ್ಮನ ಆಶಯದಂತೆ ವಿನೋದ್ ರಾಜ್, ಲೀಲಾವತಿಯ ಅಚ್ಚುಮೆಚ್ಚಿನ ಚೆನ್ನೈನ ಪುದುಪ್ಪಾಕಂನಲ್ಲಿ ಒಂದು ಹೆಲ್ತ್ ಸೆಂಟರ್ ಕಟ್ಟಿಸಿದ್ದಾರೆ.
ಚೆನ್ನೈನಲ್ಲಿ ತಲೆ ಎತ್ತಿರೋ ಸುಸಜ್ಜಿತ ಡಾ. ಲೀಲಾವತಿ ಹೆಲ್ತ್ ಸೆಂಟರ್ ಇಂದು ಅನಾವರಣಗೊಂಡಿದ್ದು, ಲೇಬರ್ ಮಿನಿಸ್ಟರ್ ಟಿ ಎಂ ಅನ್ಬರಸನ್ ಬಂದು, ಟೇಪ್ ಕತ್ತರಿಸಿ, ಆಸ್ಪತ್ರೆ ಉದ್ಘಾಟಿಸಿದ್ದಾರೆ. ಅಲ್ಲದೆ ಇಂಜಿನಿಯರ್ ಕಲೈ ಮೋಹನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆರ್ಮುಗಂ ಕೂಡ ವಿನೋದ್ ರಾಜ್ರ ಈ ಸಾಮಾಜಿಕ ಕಳಕಳಿಯನ್ನ ಶ್ಲಾಘಿಸಿ, ಶುಭ ಕೋರಿದ್ದಾರೆ. ಇನ್ನು ವಿನೋದ್ರಾಜ್ ಪತ್ನಿ ಅನು ಹಾಗೂ ಮಗ ಯುವರಾಜ್ ಕೂಡ ವಿನೋದ್ ರಾಜ್ಗೆ ಸಾಥ್ ನೀಡಿರೋದು ಗಮನಾರ್ಹ ವಿಷಯ.
ಸುಮಾರು 8 ಬೆಡ್ಗಳುಳ್ಳ ಆಸ್ಪತ್ರೆ ಇದಾಗಿದ್ದು, ಇದರ ಉದ್ಘಾಟನೆಯ ಬಳಿಕ ಅನ್ನದಾನ ಕೂಡ ಮಾಡಿದ್ದಾರೆ. ಅಲ್ಲದೆ, ಅಲ್ಲಿ ಸುತ್ತ ಮುತ್ತಲು ಇರೋ ಅಸಹಾಯಕರಿಗೆ ಬಟ್ಟೆ ಕೂಡ ಕೊಡಿಸಿದ್ದಾರೆ ವಿನೋದ್ ರಾಜ್. ಇದಕ್ಕೆ ಸದಾ ವಿನೋದ್ ರಾಜ್ಗೆ ಬೆನ್ನೆಲುಬಾಗಿ ನಿಂತಿದ್ದಾರೆ ಲೀಲಮ್ಮನ ಮ್ಯಾನೇಜರ್ ನಾಗರಾಜ್ ಹಾಗೂ ಮುತ್ತು.
ಇನ್ನು ಇತ್ತೀಚೆಗೆ ಮಳೆಯಿಂದ ರಸ್ತೆಗಳು ಗುಂಡಿಮಯ ಆಗಿದ್ದು, ಜನರು ಸಂಚಾರಕ್ಕಾಗಿ ಪರದಾಡುತ್ತಿದ್ದರು. ನೆಲಮಂಗಲದ ಹೈವೇ ಇಂದ ಸೋಲದೇವನಹಳ್ಳಿವರೆಗೂ ಸುತ್ತ ಮುತ್ತಲ ಊರುಗಳ ಕನೆಕ್ಟಿಂಗ್ ರಸ್ತೆಗಳಿಗೆ ಸಿಮೆಂಟ್ ಕಾಂಕ್ರೀಟ್ ಮೂಲಕ ಗುಂಡಿ ಮುಚ್ಚುವ ಕಾರ್ಯ ಮಾಡಿದ್ರು ವಿನೋದ್ ರಾಜ್. ಜನಪ್ರತಿನಿಧಿಗಳು ಮಾಡದ ಕಾರ್ಯಗಳನ್ನ ಲೀಲಮ್ಮನ ಮಗ ಮಾಡಿದ್ದು ಕಂಡು ಅದೆಷ್ಟೋ ಮಂದಿ ಅವ್ರನ್ನ ತುಂಬು ಹೃದಯದಿಂದ ಹರಸಿ, ಆಶೀರ್ವದಿಸಿದ್ರು. ಇಂದಿಗೂ ಅಮ್ಮನ ಆಶಯಗಳನ್ನು ಈಡೇರಿಸುತ್ತಾ, ಆ ಕನಸುಗಳನ್ನ ಜೀವಂತವಾಗಿ ಇರಿಸಿರೋ ವಿನೋದ್ ರಾಜ್ಗೆ ಹ್ಯಾಟ್ಸಾಫ್ ಹೇಳಲೇಬೇಕು.





