ಸ್ಯಾಂಡಲ್‌ವುಡ್‌ನಲ್ಲಿ ನಟನೆಯ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಧ್ರುವ ಸರ್ಜಾ, ಇದೀಗ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಮತ್ತೊಮ್ಮೆ ಫ್ಯಾನ್ಸ್‌ನ ಮನಸ್ಸು ಗೆದ್ದಿದ್ದಾರೆ. ಮಗುವಿನ ಕಣ್ಣು ಆಪರೇಷನ್‌ಗೆ ಆರ್ಥಿಕ ಸಹಾಯ ಮಾಡುವ ಮೂಲಕ ಧ್ರುವ ಸರ್ಜಾ ಅವರು, ಮತ್ತೊಂದು ಮಾನವೀಯ ಕೆಲಸದಿಂದ ಸುದ್ದಿಯಾಗಿದ್ದಾರೆ.
ಗಾರೆ ಕೆಲಸದಾತನ ಮಗನಿಗೆ ದೃಷ್ಟಿ ಸಂಬಂಧಿತ ಗಂಭೀರ ಸಮಸ್ಯೆಯಾಗಿತ್ತು. ಆ ಮಗುವಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯ ಆಗತ್ಯವಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ಮಾಡಿಸಲು ಆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು. ಆಪರೇಷನ್‌ಗಾಗಿ ಧ್ರುವ ಸರ್ಜಾ ಬಳಿ ಆ ಕುಟುಂಬ ಸಹಾಯ ಕೇಳಿದ್ದು, ಅವರ ಈ ಸಮಸ್ಯೆಗೆ ಸ್ಪಂದಿಸಿದ ಅವರು, ಆ ಹುಡುಗನ ಎರಡೂ ಕಣ್ಣುಗಳ ಆಪರೇಷನ್‌ಗೆ ಆರ್ಥಿಕ ಸಹಾಯ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದ ನಂತರ, ಮಗು ಪ್ರಪಂಚವನ್ನು ಮತ್ತೆ ನೋಡಲು ಸಾಧ್ಯವಾಗಿದೆ. ಇದೊಂದು ಸಂತಸದ ಕ್ಷಣವಾಗಿದ್ದು, ಕುಟುಂಬದವರು ಧ್ರುವ ಸರ್ಜಾಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಧ್ರುವ ಅವರು ವೈದ್ಯರಿಗೆ ಸೂಚಿಸಿದ್ದರು. ಆದರೆ, ಆ ಮಗು ದೃಷ್ಟಿ ಪಡೆದ ಸಂತೋಷದಲ್ಲಿ ವೈದ್ಯರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಕರೆ ಮೂಲಕ ಮಗುವಿನ ಆರೋಗ್ಯವನ್ನು ಧ್ರುವ ಸರ್ಜಾ ವಿಚಾರಿಸಿದ್ದು, ಈ ಘಟನೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಧ್ರುವ ಸರ್ಜಾ ಅವರ ಈ ಕಾರ್ಯಕ್ಕೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.





