ಒಂಥರಾ ಪಂಜರದ ಪಕ್ಷಿಯಂತಾಗಿದ್ರು ಡಿಬಾಸ್ ದರ್ಶನ್. ಆದ್ರೀಗ ಒಂದೊಂದೇ ಸಂಕೋಲೆಗಳಿಂದ ಮುಕ್ತರಾಗ್ತಾ ಬರ್ತಿದ್ದಾರೆ. ಯೆಸ್.. ದೇಶಕ್ಕೆ ಸೀಮಿತ ಆಗಿದ್ದ ಇವ್ರ ಜರ್ನಿ ಇದೀಗ ವಿದೇಶಗಳವರೆಗೆ ವಿಸ್ತರಣೆ ಆಗಿದೆ. ಈ ಸುದ್ದಿ ಕೇಳ್ತಿದ್ದಂತೆ ಬರೀ ದಚ್ಚು ಫ್ಯಾಮಿಲಿ, ಫ್ರೆಂಡ್ಸ್ ಅಷ್ಟೇ ಅಲ್ಲ, ಇಡೀ ಅಭಿಮಾನಿ ಬಳಗ ದಿಲ್‌ಖುಷ್ ಆಗಿದೆ.
ಅಭಿಮಾನಿಗಳ ನೆಚ್ಚಿನ ಡಿಬಾಸ್, ಬಾಕ್ಸ್ ಆಫೀಸ್ ಸುಲ್ತಾನ, ಕುಟುಂಬದ ಪಾಲಿನ ಯಜಮಾನ, ಆಪ್ತರ ಅಚ್ಚುಮೆಚ್ಚಿನ ಐರಾವತ, ನಂಬಿದವರ ಒಡೆಯ, ಚಾಲೆಂಜ್‌ಗಳನ್ನ ಬಹಳ ಸ್ಫೋರ್ಟೀವ್ ಆಗಿ ತೆಗೆದುಕೊಂಡು, ಸಕ್ಸಸ್ ತೋರಿಸಿದ ರಿಯಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಸ್ ಬ್ಯಾಕ್. ಇಲ್ಲಿಯವರೆಗೂ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ ಅಂತಿದ್ದಾರೆ ಸೆಲೆಬ್ರಿಟೀಸ್. ಅದಕ್ಕೆ ಕಾರಣ ನಿನ್ನೆ ದಚ್ಚುಗೆ ಸಿಕ್ಕ ಬಹುದೊಡ್ಡ ಸಕ್ಸಸ್.
ಡೆವಿಲ್ ಸಿನಿಮಾದ ಶೂಟಿಂಗ್ ನಿಮಿತ್ತ ನಿರ್ದೇಶಕ ಕಮ್ ನಿರ್ಮಾಪಕ ಮಿಲನ ಪ್ರಕಾಶ್ ದುಬೈ ಹಾಗೂ ಯೂರೋಪ್‌ಗೆ ದರ್ಶನ್ ಹಾಗೂ ಟೀಂನ ಕರೆದೊಯ್ಯಲು ಯೋಜನೆ ರೂಪಿಸಿತ್ತು. ಸಾಂಗ್ಸ್ ಸೇರಿದಂತೆ ಒಂದಷ್ಟು ಮುಖ್ಯ ಮಾತಿನ ಭಾಗದ ಚಿತ್ರೀಕರಣ ವಿದೇಶಿ ಸುಂದರ ತಾಣಗಳಲ್ಲಿ ಮಾಡಲು ನಿರ್ಧರಿಸಿದ್ದರು. ಆದ್ರೆ ಅದಕ್ಕೆ ಕಾನೂನಿನ ತೊಡಕಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರೋ ದಚ್ಚು ಪಾಸ್‌ಪೋರ್ಟ್‌ನ ಮುಟ್ಟುಗೋಲು ಹಾಕಿಕೊಂಡಿತ್ತು ಕೋರ್ಟ್.
ಆದ್ರೀಗ ಕೋರ್ಟ್ ಪಾಸ್‌ಪೋರ್ಟ್ ವಾಪಸ್ ನೀಡಿ, 25 ದಿನಗಳ ಕಾಲ ವಿದೇಶಕ್ಕೆ ಪಯಣ ಮಾಡಲು ಅನುಮತಿ ಕೂಡ ನೀಡಿದೆ. ಹೌದು.. ಜೂನ್ 1ರಿಂದ 25ರ ತನಕ ಬರೋಬ್ಬರಿ 25 ದಿನಗಳ ಕಾಲ, ಅಂದ್ರೆ ಒಂದು ತಿಂಗಳ ಮಟ್ಟಿಗೆಗೆ ಕೋರ್ಟ್ ಪರ್ಮಿಷನ್ ನೀಡಿದೆ. ಸಿನಿಮಾ ಶೂಟಿಂಗ್‌ಗೆ ತೆರಳಲು ಸ್ವತಃ ದರ್ಶನ್ 57ಸಿಸಿಹೆಚ್‌ಗೆ ಮನವಿ ಪತ್ರ ಸಲ್ಲಿಸಿದ್ದರು. ಅದರ ವಿಚಾರಣೆ 64ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದು, ನ್ಯಾಯಾಧೀಶ ಐ.ಪಿ. ನಾಯಕ್ ಪೀಠದಿಂದ ಸಿನಿಮಾ ಚಿತ್ರೀಕರಣಕ್ಕೆ ತೆರಳಲು ಅನುಮತಿ ಸಿಕ್ಕಿದೆ.
ಇದು ನಿರ್ದೇಶಕ ಮಿಲನ ಪ್ರಕಾಶ್ ಸೇರಿದಂತೆ ದಚ್ಚು ಫ್ಯಾಮಿಲಿ, ಹಿತೈಷಿಗಳು, ಆಪ್ತರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದಚ್ಚುಗೆ ಕರಿಯರ್ ಮುಗಿದೇ ಹೋಯ್ತು ಎನ್ನಲಾಗಿತ್ತು. ಆದ್ರೀಗ ಹಂತ ಹಂತವಾಗಿ ಒಂದೊಂದೇ ಸಂಕೋಲೆಗಳಿಂದ ಮುಕ್ತರಾಗುತ್ತಾ ಹೊರಬರುತ್ತಿದ್ದಾರೆ ಡಿಬಾಸ್. ಮೊದಲಿಗೆ ಮೆಡಿಕಲ್ ಬೇಲ್ ಪಡೆದು ಹೊರಬಂದರು. ನಂತ್ರ ರೆಗ್ಯೂಲರ್ ಬೇಲ್ ಪಡೆದರು.
ಬೆಂಗಳೂರಿಗಷ್ಟೇ ಸೀಮಿತ ಆಗಿದ್ದ ಅವರ ಪಯಣ ಮೈಸೂರು, ಕರ್ನಾಟಕ ಹಾಗೂ ಹೊಸ ರಾಜ್ಯಗಳಿಗೂ ವಿಸ್ತರಣೆ ಆಗಿತ್ತು. ಇದೀಗ ವಿದೇಶದವರೆಗೂ ತೆರಳಲು ಅನುಮತಿ ಸಿಕ್ಕಿರೋದು ದಚ್ಚು ಖುಷಿಯನ್ನ ಇಮ್ಮಡಿಗೊಳಿಸಿದೆ. ಪಾಸ್‌ಪೋರ್ಟ್ ಸಿಗ್ತಿದ್ದಂತೆ ವೀಸಾಗೆ ಅಪ್ಲೈ ಮಾಡಿದೆ ಟೀಂ. ಇದೇ ಜೂನ್ 1ರಂದು ದುಬೈಗೆ ಹಾರಲಿದ್ದು, ಅಲ್ಲಿಂದ ಯೂರೋಪಿಯನ್ ಕಂಟ್ರಿಗಳಲ್ಲಿ ನಾನ್‌ಸ್ಟಾಪ್ ಶೂಟೀಂಗ್ ನಡೆಸಲಿದೆಯಂತೆ.
ಇನ್ಮೇಲೆ ಆನೆ ನಡೆದದ್ದೇ ದಾರಿ ಎನ್ನಲಾಗ್ತಿದೆ. ಸದ್ಯ ಈಗ 25 ದಿನಗಳ ಮಟ್ಟಿಗೆಗೆ ಪರ್ಮಿಷನ್ ಪಡೆದಿರೋ ದಚ್ಚು, ಮತ್ತೊಂದು ಮನವಿ ಪತ್ರದ ಮೂಲಕ ಯಾವಾಗ ಬೇಕಾದ್ರೂ ವಿದೇಶಕ್ಕೆ ತೆರಳಲು ಅನುಮತಿ ಪಡೆಯೋದು ಕಷ್ಟವೇನಲ್ಲ. ಒಟ್ಟಾರೆ ದಚ್ಚುಗಾಗಿ ವಿಜಯಲಕ್ಷ್ಮೀ ಮಾಡಿದ ಟೆಂಪಲ್ ರನ್ ಹಾಗೂ ಸ್ವತಃ ದರ್ಶನ್ ಅವರೇ ಮಾಡಿಸಿದ್ದ ಶತ್ರು ಸಂಹಾರ ಪೂಜೆ ಭಾಗಶಃ ಫಲಿಸಿದಂತಿದೆ.