ಮೈಸೂರು ಆ.27: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರ ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಆಗಸ್ಟ್ 29ರಂದು ಆರತಕ್ಷತೆ ಹಾಗೂ ಆಗಸ್ಟ್ 30ರಂದು ಧಾರೆ ಮುಹೂರ್ತ ನಡೆಯಲಿದ್ದು, ಈಗಾಗಲೇ ಎರಡೂ ಕುಟುಂಬಗಳಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ.
ಇಂದು ಗುರುವಾರ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ವಧು ಪಾವನಾ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಸಂಭ್ರಮದಿಂದ ನೆರವೇರಿತು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾವನಾ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದರು. ಆಪ್ತ ಸ್ನೇಹಿತರೂ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕುಟುಂಬದಲ್ಲಿ ಮದುವೆಯ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.
ಇತ್ತ ಚಿಕ್ಕಣ್ಣ ಅವರ ನಿವಾಸದಲ್ಲೂ ಅರಿಶಿಣ ಶಾಸ್ತ್ರ ನೆರವೇರಿದೆ. ವಧು-ವರರ ಮನೆಯಲ್ಲಿ ಪ್ರತ್ಯೇಕವಾಗಿ ಮದುವೆ ಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ಎರಡೂ ಕುಟುಂಬಗಳಲ್ಲೂ ಮದುವೆಯ ಸಡಗರ ಕಳೆಗಟ್ಟಿದೆ.
ಚಿಕ್ಕಣ್ಣ ಅವರು ತಮ್ಮ ತಂದೆ-ತಾಯಿಯ ಆಸೆಯಂತೆ ಮೈಸೂರಿನ ಸ್ಪೆಕ್ಟ್ರಂ ಹಾಲ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆಯ ಸಿದ್ಧತೆಗಳ ಕುರಿತು ಈ ಹಿಂದೆ ಮಾತನಾಡಿದ್ದ ಅವರು, ಮದುವೆಗೆ ಎರಡು-ಮೂರು ದಿನಗಳಿರುವಾಗಲೇ ಶಾಸ್ತ್ರಗಳು ಆರಂಭವಾಗಲಿವೆ ಎಂದು ಹೇಳಿಕೊಂಡಿದ್ದರು.
ಅದರಂತೆ ಇದೀಗ ಮದುವೆ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದ್ದು, ಚಿಕ್ಕಣ್ಣ ಹಾಗೂ ಪಾವನಾ ಅವರ ಕುಟುಂಬಸ್ಥರು ಮದುವೆಯ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಸ್ಟ್ 29ರಂದು ಆರತಕ್ಷತೆ ಹಾಗೂ ಆಗಸ್ಟ್ 30ರಂದು ಧಾರೆ ಮುಹೂರ್ತ ನಡೆಯಲಿರುವುದರಿಂದ ಸ್ಯಾಂಡಲ್‌ವುಡ್‌ನಲ್ಲೂ ಮದುವೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಹಾಸ್ಯ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ ಅವರ ಮದುವೆ ಸರಳತೆಯ ಜತೆಗೆ ಅದ್ಧೂರಿತನವನ್ನೂ ಒಳಗೊಂಡಿರಲಿದೆ ಎನ್ನಲಾಗಿದ್ದು, ಮದುವೆ ಕಾರ್ಯಕ್ರಮಗಳಿಗೆ ಕುಟುಂಬಸ್ಥರು ಹಾಗೂ ಆಪ್ತರು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.





