ಬೆಂಗಳೂರು: ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸಮಾಧಿ ಸ್ಥಳದ ಕುರಿತು ಮಾಡಿದ ವಿವಾದಿತ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ತೀವ್ರ ಒತ್ತಡದ ಹಿನ್ನೆಲೆ ಚೇತನ್ ಅಹಿಂಸಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಅಣ್ಣಾವ್ರ ಸ್ಮಾರಕ ಪ್ರಶ್ನಿಸಿದ ಚೇತನ್
ನಟ ಚೇತನ್ ಅಹಿಂಸಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹಂಚಿಕೊಂಡು, ಬೆಂಗಳೂರಿನಲ್ಲಿ ಡಾ. ರಾಜ್‌ಕುಮಾರ್ ಅವರ ಸಮಾಧಿಗೆ ಜಾಗ ನೀಡಿರುವುದನ್ನು ಪ್ರಶ್ನಿಸಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕನ್ನಡದ ಅಭಿಮಾನಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು.
ಹಿರಿಯ ನಟ, ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಚೇತನ್ ವಿರುದ್ಧ ಸಿಡಿದೆದ್ದರು. “ಚೇತನ್‌ಗೆ ಈ ಬಾರಿ ಒದೆ ಬೀಳೋದು ಫಿಕ್ಸ್. ಅವನೊಬ್ಬ ಹುಚ್ಚ ರಾಜ್ಯದಿಂದ ಓಡಿಸಬೇಕು. ಡಾ. ರಾಜ್‌ಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಅವರ ಸ್ಮಾರಕ ಕನ್ನಡಿಗರಿಗೆ ದೇವಸ್ಥಾನದಂತೆ. ಅಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿಲ್ಲ” ಎಂದು ತರಾಟೆ ತೆಗೆದುಕೊಂಡರು.
“ಅಣ್ಣಾವ್ರ ಸಾಧನೆಯ ಅರಿವಿಲ್ಲದೇ ಮಾತನಾಡುವ ಯೋಗ್ಯತೆ ಚೇತನ್‌ಗೆ ಇಲ್ಲ. ಜನ ಮತ್ತು ಅಭಿಮಾನಿಗಳು ಅವನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಸಾರಾ ಗೋವಿಂದು ಎಚ್ಚರಿಕೆ ನೀಡಿದರು.
ಅಭಿಮಾನಿಗಳ ಆಕ್ರೋಶ, ಮನೆಗೆ ಮುತ್ತಿಗೆ
ಚೇತನ್ ಅಹಿಂಸಾ ಹೇಳಿಕೆಯನ್ನು ಖಂಡಿಸಿ ರಾಜ್‌ಕುಮಾರ್ ಅಭಿಮಾನಿಗಳು ಸಾರಾ ಗೋವಿಂದು ನೇತೃತ್ವದಲ್ಲಿ ಆಂದೋಲನ ನಡೆಸಿದರು. ಕೆರಳಿದ ಅಭಿಮಾನಿಗಳು ಚೇತನ್ ನಿವಾಸಕ್ಕೆ ಮುತ್ತಿಗೆ ಹಾಕಿದರು. “ತಕ್ಷಣ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದರು.
ಕ್ಷಮೆಯಾಚನೆ: ವಿವಾದಕ್ಕೆ ತೆರೆ?
ಕೊನೆಗೂ ನಟ ಚೇತನ್ ಅಹಿಂಸಾ ತಮ್ಮ ಹೇಳಿಕೆಗಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದರು. “ನನ್ನ ಹೇಳಿಕೆಯಿಂದ ಅಣ್ಣಾವ್ರ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ಅದಕ್ಕಾಗಿ ಮನಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ಆದರೆ ಈ ಕ್ಷಮೆಯಿಂದ ವಿವಾದ ಸಂಪೂರ್ಣವಾಗಿ ಕೊನೆಗೊಂಡಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಚೇತನ್ ವಿರುದ್ಧ ಈಗಾಗಲೇ ಪೊಲೀಸ್ ಠಾಣೆ ಮತ್ತು ಚಲನಚಿತ್ರ ಸಂಘಗಳಿಗೆ ದೂರುಗಳು ಸಲ್ಲಿಕೆಯಾಗಿವೆ.





