ಬೆಂಗಳೂರು: ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಸಂಪರ್ಕಕ್ಕೆ ಸಹಾಯಕವಾಗಿದ್ದರೂ, ಕೆಲವೊಮ್ಮೆ ಅವು ಭಯಾನಕ ಕಿರುಕುಳಕ್ಕೆ ಕಾರಣವಾಗುತ್ತವೆ. ಇದಕ್ಕೆ ಉದಾಹರಣೆಯೇ ಬೆಂಗಳೂರಿನಲ್ಲಿ ನಡೆದಿರುವ ಸೀರಿಯಲ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ. ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಈ ಸಂತ್ರಸ್ತೆಗೆ ಆರೋಪಿ ಕಳೆದ ಮೂರು ತಿಂಗಳಿಂದ ನಿರಂತರ ಕಾಟ ನೀಡುತ್ತಿದ್ದ. ಫೇಸ್‌ಬುಕ್ ಮೆಸೆಂಜರ್ ಮೂಲಕ ಗುಪ್ತಾಂಗದ ಫೋಟೋಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ, ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮೊದಲು ಫೇಸ್‌ಬುಕ್‌ನಲ್ಲಿ ಎಲ್ಲವೂ ಪ್ರಾರಂಭವಾಗಿದ್ದು, ಆರೋಪಿ ಮೊದಲು ನಟಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಆದರೆ ನಟಿ ಅದನ್ನು ಸ್ವೀಕರಿಸದೇ ಇರುವುದನ್ನು ಗಮನಿಸಿದ ಆರೋಪಿ, ನೇರವಾಗಿ ಮೆಸೆಂಜರ್‌ಗೆ ತೆರಳಿ ಸಂದೇಶಗಳನ್ನು ಕಳುಹಿಸತೊಡಗಿದ. “ನಿನ್ನನ್ನು ಪ್ರೀತಿಸುತ್ತೇನೆ” ಎಂಬ ಸಾಮಾನ್ಯ ಸಂದೇಶಗಳಿಂದ ಪ್ರಾರಂಭವಾಯಿತು. ಬಳಿಕ ಅಶ್ಲೀಲ ಮಾತುಗಳು ಮುಂದುವರೆದವು. ನಟಿ ಆರೋಪಿಗೆ ಕಟುವಾಗಿ ಎಚ್ಚರಿಕೆ ನೀಡಿ, ಮೆಸೇಜ್ ಮಾಡದಂತೆ ಆದೇಶಿಸಿದರು. ಆದರೆ ಆರೋಪಿ ನಿಲ್ಲಲಿಲ್ಲ. ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ನಟಿ ಅವನ ಐಡಿಯನ್ನು ಬ್ಲಾಕ್ ಮಾಡಿದರು.
ಇದರಿಂದ ಕೋಪಗೊಂಡ ಆರೋಪಿ, ಬೇರೆ ಬೇರೆ ಫೇಕ್ ಐಡಿಗಳನ್ನು ರಚಿಸಿ ಮತ್ತಷ್ಟು ತೀವ್ರ ಕಿರುಕುಳ ನೀಡತೊಡಗಿದ. ಗುಪ್ತಾಂಗದ ನಗ್ನ ಫೋಟೋಗಳು, ಪೋರ್ನೋಗ್ರಾಫಿಕ್ ವಿಡಿಯೋಗಳು ಮತ್ತು ಬೆದರಿಕೆ ಸಂದೇಶಗಳು ನಟಿಯ ಇನ್‌ಬಾಕ್ಸ್‌ಗೆ ಕಳುಹಿಸಲು ಪ್ರಾರಂಭಿಸಿದ್ದ. “ನಿನ್ನ ಫೋಟೋಗಳನ್ನು ಎಲ್ಲೆಡೆ ಹಂಚುತ್ತೇನೆ” ಎಂಬ ಬೆದರಿಕೆಗಳನ್ನು ಹಾಕಿದನು. ಇದರಿಂದ ನಟಿಯನ್ನು ಆತಂಕಕ್ಕೀಡುಮಾಡಿದವು.. ನಟಿ ಆರೋಪಿಗೆ ಬುದ್ಧಿ ಹೇಳಲು ನೇರವಾಗಿ ಭೇಟಿಯಾಗುವಷ್ಟು ಧೈರ್ಯ ತೋರಿದರು.
ನವೆಂಬರ್ 1ರಂದು ಬೆಂಗಳೂರಿನ ನಾಗರಬಾವಿ ಬಳಿಯ ನಂದನ್ ಪ್ಯಾಲೇಸ್ ಸಮೀಪದಲ್ಲಿ ಬೆಳಗ್ಗೆ 11:30ಕ್ಕೆ ಭೇಟಿಯಾದರು. ಅಲ್ಲಿ ನಟಿ ಆರೋಪಿಯನ್ನು ಎಚ್ಚರಿಸಿ, “ಈ ರೀತಿ ಮೆಸೇಜ್ ಮಾಡುವುದು ಬೇಡ, ನಿಲ್ಲಿಸು” ಎಂದು ಖಡಕ್ ಆದೇಶ ನೀಡಿದರು. ಆದರೆ ಆರೋಪಿ ತನ್ನ ವಿಕೃತ ಮನೋಭಾವಕ್ಕೆ ಬ್ರೇಕ್ ಹಾಕಲಿಲ್ಲ. ಭೇಟಿಯ ನಂತರವೂ ಅದೇ ರೀತಿ ಕಿರುಕುಳ ಮುಂದುವರಿಸಿದನು.
ನಂತರ ನಟಿ ಧೈರ್ಯದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನಲ್ಲಿ ಎಲ್ಲ ವಿವರಗಳನ್ನು ನೀಡಿ, ಸ್ಕ್ರೀನ್‌ಶಾಟ್‌ಗಳು ಮತ್ತು ಮೆಸೇಜ್‌ಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದರು. ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಜಾಮೀನು ರಹಿತವಾಗಿ ಜೈಲಿಗೆ ಕಳುಹಿಸಲಾಯಿತು. ಈ ಪ್ರಕರಣದಡಿ ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.





