ಕನ್ನಡದ ಅಸ್ಮಿತೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕುರಿತು ಬಾಲಿವುಡ್ ಶೆಹೆನ್ ಷಾ ಅಮಿತಾಬ್ ಬಚ್ಚನ್ ಮಾತನಾಡಿದ್ದಾರೆ. ಅಣ್ಣಾವ್ರ ಗತ್ತುನ್ನು ಇಡೀ ಇಂಡಿಯಾ ಲೆವೆಲ್‌ಗೆ ಗೊತ್ತು ಮಾಡುವ ಕಾರ್ಯವನ್ನು ಮತ್ತೊಮ್ಮೆ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಮಾಡಿದ್ದಾರೆ. ಅದಕ್ಕೆ ಕಾರಣ ಕಾಂತಾರ ಕಿಂಗ್ ರಿಷಬ್ ಶೆಟ್ಟಿ. ಅದ್ಹೇಗೆ ಅನ್ನೋದನ್ನ ನೀವೇ ನೋಡಿ.
ಕರುನಾಡ ತಿಲಕ, ಕನ್ನಡ ಚಿತ್ರರಂಗ ಹಾಗೂ ಸಾಂಸ್ಕೃತಿಕ ರಾಯಭಾರಿ, ದೊಡ್ಮನೆಯ ದಿವ್ಯಶಕ್ತಿ, ಭಾರತೀಯ ಚಿತ್ರರಂಗ ಕಂಡ ಅಪರೂಪದ ಸಿನಿಸಂತ, ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್‌ಕುಮಾರ್ ನಮ್ಮ ಕನ್ನಡದ ಅಸ್ಮಿತೆ. ಅವರು ಬರೀ ವ್ಯಕ್ತಿಯಲ್ಲ.. ನಮ್ಮ ಕರ್ನಾಟಕದ ಶಕ್ತಿ. ಚಿತ್ರರಂಗ ಇಷ್ಟು ಸಮೃದ್ಧವಾಗಿ ಬೆಳೆಯೋಕೆ ಕಾರಣೀಭೂತರಾದ ಮೇರು ನಟರು. ಕನ್ನಡ ಚಿತ್ರರಂಗದ ತಾಯಿಬೇರಾಗಿರೋ ಡಾ. ರಾಜ್‌ಕುಮಾರ್ ಬಗ್ಗೆ ಇಂದಿಗೂ ಇಡೀ ದೇಶವೇ ಕೊಂಡಾಡುತ್ತೆ. ಅಂಥದ್ದೊಂದು ಅಪರೂಪದ ಕ್ಷಣಕ್ಕೆ ಇತ್ತೀಚೆಗೆ ಸಾಕ್ಷಿಯಾಯ್ತು ಅಮಿತಾಬ್ ಬಚ್ಚನ್ ನಡೆಸಿಕೊಡೋ ಕೌನ್ ಬನೇಗಾ ಕರೋಡ್‌ಪತಿ ವೇದಿಕೆ.
ಅಣ್ಣಾವ್ರ ಗತ್ತು ಇಂಡಿಯಾ ಲೆವೆಲ್‌ಗೆ ಗೊತ್ತು ಮಾಡಿದ ಬಿಗ್‌ಬಿ
ರಾಜ್‌ಕುಮಾರ್ ದೇವರು.. KBCಯಲ್ಲಿ ರಾಜ ಮರ್ಯಾದೆ..!
ಯೆಸ್.. ಕಾಂತಾರ ಚಾಪ್ಟರ್-1 ರಿಲೀಸ್ ವೇಳೆ ಪ್ರಮೋಷನ್‌ಗಾಗಿ ಬಾಲಿವುಡ್ ಶೆಹೆನ್‌ಷಾ ಅಮಿತಾಬ್ ಬಚ್ಚನ್ ನಡೆಸಿಕೊಡೋ ಕೆಬಿಸಿ ವೇದಿಕೆಗೆ ತೆರಳಿದ್ದ ರಿಷಬ್ ಶೆಟ್ಟಿ, ಅಲ್ಲಿ ಅಣ್ಣಾವ್ರನ್ನ ನೆನೆದಿದ್ದಾರೆ. ನಮಗಂತೂ ಅವ್ರನ್ನ ಭೇಟಿ ಆಗುವ ಸೌಭಾಗ್ಯ ಸಿಗಲಿಲ್ಲ. ನೀವು ಅವರೊಂದಿಗಿನ ಯಾವುದಾದರೊಂದು ಅವಿಸ್ಮರಣೀಯ ಕ್ಷಣವನ್ನು ನೆನೆಯಬಹುದಾ ಅಂದಾಗ, ಅಮಿತಾಬ್ ಆಡಿದ ಒಂದೊಂದು ಮಾತು ಕೂಡ ಕನ್ನಡಿಗರಾದ ನಮಗೆ ಮೈ ರೋಮಾಂಚನಗೊಳಿಸುತ್ತೆ.
ಬಿಗ್ ಬಿ ಆಡಿದ ಮಾತುಗಳು ನೂರಕ್ಕೆ ಇನ್ನೂರು ಪರ್ಸೆಂಟ್ ಸತ್ಯ. ಡಾ ರಾಜ್‌ಕುಮಾರ್ ಕರ್ನಾಟಕದ ಪಾಲಿಗೆ ದೇವರು. ಹಾಗಾಗಿಯೇ ದೇವತಾ ಮನುಷ್ಯರಾದರು. ಅಷ್ಟು ದೊಡ್ಡ ಸೂಪರ್ ಸ್ಟಾರ್ ಆದ್ರೂ, ಸರಳತೆಯ ಸಾರ್ವಭೌಮರಾಗಿ ಮಾದರಿ ಸೂಪರ್ ಸ್ಟಾರ್ ಆದ್ರು. ಸದ್ಯ ಪರಭಾಷೆಗಳಲ್ಲಿರೋ ಸೂಪರ್ ಸ್ಟಾರ್‌ಗಳಾದ ರಜನೀಕಾಂತ್, ಅಮಿತಾಬ್ ಬಚ್ಚನ್, ಚಿರಂಜೀವಿಯೆಲ್ಲಾ ಇವರ ಸರಳತೆಯಿಂದ ಪ್ರಭಾವಿತರಾದವರು. ಹಾಗಾಗಿಯೇ ಅಣ್ಣಾವ್ರ ಮೇಲೆ ಅವರಿಗೆ ಅಭಿಮಾನದ ಜೊತೆ ಗೌರವವೂ ಇದೆ.
ಸರಳತೆಯ ಸಾರ್ವಭೌಮ ಜೊತೆಗಿನ ಹಳೆಯ ನೆನಪು ಮೆಲುಕು
ಕೂಲಿ ಶೂಟಿಂಗ್, ಆ್ಯಕ್ಸಿಡೆಂಟ್, ಅಣ್ಣಾವ್ರ ಹರಕೆ.. ಬಿಗ್‌ಬಿ ಪುಳಕ
ಅಲ್ಲದೆ, ಕೂಲಿ ಸಿನಿಮಾದ ಶೂಟಿಂಗ್ ವೇಳೆ ಅಮಿತಾಬ್ ಬಚ್ಚನ್‌ಗೆ ಅಪಘಾತವಾಗಿತ್ತಂತೆ. ಅದಕ್ಕಾಗಿ ಅಣ್ಣಾವ್ರು ದೇವರಿಗಾಗಿ ಹರಕೆ ಹೊತ್ತು, ಪ್ರಾರ್ಥಿಸಿದ ಪರಿ ನಿಜಕ್ಕೂ ಅನನ್ಯ. ಇದನ್ನ ರಿಷಬ್ ಶೆಟ್ಟಿ ಎದುರು ಬಿಗ್‌ಬಿ ಬಹಳ ದಿಟ್ಟವಾಗಿ, ಹಳೆಯ ನನೆಪುಗಳ ಬುತ್ತಿ ಬಿಚ್ಚಿಟ್ಟರು. ಇದಲ್ಲವೇ ಅಣ್ಣಾವ್ರ ಗತ್ತು. ಇಂದಿನ ಜನರೇಷನ್ ಅಷ್ಟೇ ಅಲ್ಲ, ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿ ಆಗಬಲ್ಲಂತಹ ಬಂಗಾರದ ಮನುಷ್ಯ ಡಾ ರಾಜ್‌ಕುಮಾರ್.
ಅಂದಹಾಗೆ ಇತ್ತೀಚೆಗೆ ಪುನೀತ ಪರ್ವ ಕಾರ್ಯಕ್ರಮಕ್ಕೆ ಅಮಿತಾಬ್ ಶುಭಾಶಯ ಕೋರಿದ್ದರು. ರಾಜರತ್ನ ಅಪ್ಪು ಬಗ್ಗೆ ಇನ್ನಿಲ್ಲದೆ ಹೊಗಳಿದ್ದರು. ಅಪ್ಪುವಿನ ಆ ನಿಷ್ಕಲ್ಮಶ ನಗುವಿನ ಗುಣಗಾನ ಮಾಡಿದ್ರು ಶೆಹೆನ್‌ಷಾ.
ಶಬರಿಮಲೆ ಯಾತ್ರೆಯನ್ನ ಅಣ್ಣಾವ್ರ ಜೊತೆಗೂಡಿ ಮಾಡ್ತಿದ್ದ ಅಮಿತಾಬ್‌ಗೆ ಅಯ್ಯಪ್ಪನ ದರ್ಶನ ಸಿಕ್ಕಿದ್ದೇ ನಮ್ಮ ಕನ್ನಡದ ಹೆಮ್ಮೆಯ ರಾಜ್‌ಕುಮಾರ್‌ರ ಮೂಲಕ ಅನ್ನೋದು ವಿಶೇಷ. ಇದಲ್ಲದೆ, ಈ ಲೆಜೆಂಡ್‌ಗಳ ನಡುವೆ ಪರಸ್ಪರ ಪ್ರೀತಿ, ಗೌರವವಿತ್ತು. ಇದೀಗ ದೊಡ್ಮನೆಯ ಹಿರಿಯ ರಾಜಕುಮಾರ ಶಿವಣ್ಣನ ಜೊತೆಗೂ ಬಿಗ್‌ಬಿಗೆ ಅದೇ ನಂಟಿದೆ. ಒಟ್ಟಾರೆ ಒಬ್ಬ ಗ್ರೇಟೆಸ್ಟ್ ಲಿವಿಂಗ್ ಲೆಜೆಂಡ್ ಮತ್ತೊಬ್ಬ ಲೆಜೆಂಡ್ ಬಗ್ಗೆ ಹೀಗೆ ಅಭಿಮಾನ ತೋರಿಸೋದು ನಿಜಕ್ಕೂ ಅಪರೂಪದಲ್ಲಿ ಅಪರೂಪ.





