ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು 50ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ವಿಶೇಷ ದಿನದಂದು ಅವರ ಅಭಿಮಾನಿಗಳು, ಕುಟುಂಬದವರು ಹಾಗೂ ಚಿತ್ರರಂಗದ ಸಹೋದ್ಯೋಗಿಗಳು ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಈ ಬಾರಿ ಎಲ್ಲರ ಗಮನ ಸೆಳೆದಿರುವುದು ಪತ್ನಿ ಐಶ್ವರ್ಯಾ ರೈ ಬಚ್ಚನ್ ಅವರು ಮಾಡಿದ ಭಾವುಕ ಜನ್ಮದಿನದ ವಿಶ್.
ಅಭಿಷೇಕ್ ಬಚ್ಚನ್ 50ನೇ ಹುಟ್ಟುಹಬ್ಬದ ಅಂಗವಾಗಿ ಐಶ್ವರ್ಯಾ ರೈ ಅವರು ಇನ್ಸ್ಟಾಗ್ರಾಮ್‌ನಲ್ಲಿ ಒಂದು ಅಪರೂಪದ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಅಭಿಷೇಕ್ ಅವರ ಮುಖ ಸಂಪೂರ್ಣವಾಗಿ ಕಾಣಿಸದೇ, ಕೇವಲ ಅವರ ಕಣ್ಣುಗಳು ಮಾತ್ರ ಕಾಣಿಸುತ್ತಿದ್ದು, ಅದು ಅಭಿಮಾನಿಗಳ ಮನ ಗೆದ್ದಿದೆ. ಫೋಟೋಗೆ ಜೊತೆಗೆ ಐಶ್ವರ್ಯಾ ರೈ ಅವರು ಭಾವನಾತ್ಮಕವಾಗಿ ಬರೆದಿರುವ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
“ಪ್ರೀತಿಯ ಬೇಬಿ–ಪಪ್ಪಾ, ನಿಮಗೆ 50ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಪ್ರೀತಿ, ಶಾಂತಿ, ಸಂತೋಷ, ಸಂತೃಪ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ. ಬಂಗಾರವಾಗಿರಿ, ಪ್ರೀತಿಯಲ್ಲಿ ಮಿಂಚಿರಿ” ಎಂದು ಐಶ್ ಬರೆದಿದ್ದಾರೆ. ಪತ್ನಿಯ ಈ ಮುದ್ದಾದ ಸಂದೇಶಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್‌ಗಳಲ್ಲಿ ಹೃದಯದ ಇಮೋಜಿಗಳು ಹಾಗೂ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಇದರೊಂದಿಗೇ, ತಂದೆ ಅಮಿತಾಭ್ ಬಚ್ಚನ್ ಕೂಡ ತಮ್ಮ ಏಕೈಕ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಭಾವುಕ ಸಂದೇಶದ ಮೂಲಕ ಆಶೀರ್ವಾದ ನೀಡಿದ್ದಾರೆ. ಅಭಿಷೇಕ್‌ಗೆ ಜನ್ಮದಿನದ ಶುಭಾಶಯ ಕಳುಹಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಬಿಗ್ ಬಿ, “ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ಅವರಿಗೆ ಮುಂದುವರಿಯಲು ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತವೆ” ಎಂದು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಅಭಿಷೇಕ್ ಅವರ ಹುಟ್ಟುಹಬ್ಬಕ್ಕೆ ಕುಟುಂಬ ಮಾತ್ರವಲ್ಲದೆ, ಬಾಲಿವುಡ್‌ನ ಅನೇಕ ಸ್ನೇಹಿತರು ಹಾಗೂ ಸಹನಟರೂ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ನಟ ಜಾಕಿ ಶ್ರಾಫ್ ಅಭಿಷೇಕ್ ಅವರ ಚಿತ್ರಗಳನ್ನು ಒಳಗೊಂಡ ವೀಡಿಯೊ ಹಂಚಿಕೊಂಡು “Big Hugs” ಎಂದು ಬರೆದಿದ್ದಾರೆ. ನಟ ರಿತೇಶ್ ದೇಶಮುಖ್ ಕೂಡ ತಮ್ಮ ಸಹನಟ ಹಾಗೂ ಆಪ್ತ ಸ್ನೇಹಿತ ಅಭಿಷೇಕ್‌ಗೆ ಭಾವುಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
“ಪ್ರಿಯ @bachchan, ನೀನು ನನ್ನ ಪಾಲಿಗೆ ಅಣ್ಣನಂತೆ. ನಿನಗೆ ನಗು, ಪ್ರೀತಿ ಮತ್ತು ಉತ್ತಮ ಆರೋಗ್ಯದಿಂದ ತುಂಬಿದ ಜಗತ್ತು ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು ಸಹೋದರ” ಎಂದು ರಿತೇಶ್ ಬರೆದಿದ್ದಾರೆ.
ಇದರ ನಡುವೆ, ಅಭಿಷೇಕ್–ಐಶ್ವರ್ಯಾ ದಾಂಪತ್ಯ ಜೀವನದ ಬಗ್ಗೆ ಹರಡಿದ್ದ ವಿಚ್ಛೇದನ ಗಾಸಿಪ್‌ಗಳಿಗೂ ಅಭಿಷೇಕ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ಮದುವೆ ಹಾಗೂ ವಿಚ್ಛೇದನ ಕುರಿತು ಹರಡಿರುವ ಊಹಾಪೋಹಗಳು ಸಂಪೂರ್ಣ ಸುಳ್ಳು ಮತ್ತು ನೋವುಂಟು ಮಾಡುವಂತಹವು. ನಾವು ಮದುವೆಯಾದ ನಂತರವೂ ನಮ್ಮ ಬೇರ್ಪಡೆ ಬಗ್ಗೆ ಮಾತನಾಡಲಾಯಿತು. ಇದೆಲ್ಲವೂ ಅಸಂಬದ್ಧ” ಎಂದು ಹೇಳಿದ್ದಾರೆ.
ಅವರು ಮುಂದುವರೆಸಿ, “ಅವಳಿಗೆ ನನ್ನ ಬಗ್ಗೆ ಗೊತ್ತಿದೆ, ನನಗೆ ಅವಳ ಸತ್ಯ ಗೊತ್ತಿದೆ. ನಾವು ಪ್ರೀತಿಯ, ಸ್ಥಿರವಾಗಿ ನೆಲೆಗೊಂಡ ಕುಟುಂಬ. ಅದುವೇ ನಿಜವಾಗಿಯೂ ಮುಖ್ಯ” ಎಂದು ಹೇಳುವ ಮೂಲಕ ಎಲ್ಲ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.





