ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ತಮ್ಮ 61ನೇ ಹುಟ್ಟುಹಬ್ಬವನ್ನು ಕುಟುಂಬದವರ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಆದರೆ ಸಂತೋಷದಿಂದ ಆಚರಿಸಿಕೊಂಡಿದ್ದಾರೆ. ಈ ಆಚರಣೆಯಲ್ಲಿ ಹಾಲಿ ಸಂಗಾತಿ ಹಾಗೂ ಇಬ್ಬರು ಮಾಜಿ ಪತ್ನಿಯರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಗಮನ ಸೆಳೆಯಿತು.
ಶನಿವಾರ (ಮಾರ್ಚ್ 14) ನಡೆದ ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಕೆಲವು ಸಿನಿತಾರೆಯರು ಭಾಗವಹಿಸಿ ಆಮೀರ್ ಖಾನ್ ಅವರಿಗೆ ಶುಭಾಶಯ ಕೋರಿದರು. ಸಾಮಾನ್ಯವಾಗಿ ಖಾಸಗಿ ಜೀವನವನ್ನು ಬಹಳಷ್ಟು ಸಾರ್ವಜನಿಕವಾಗಿ ಹಂಚಿಕೊಳ್ಳದ ಆಮೀರ್ ಖಾನ್ ಈ ಬಾರಿ ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿರುವುದು ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.
ಈ ಸಮಾರಂಭದಲ್ಲಿ ಅವರ ಹಾಲಿ ಸಂಗಾತಿ ಗೌರಿ ಸ್ಪ್ರಾಟ್ ಭಾಗವಹಿಸಿದ್ದು ವಿಶೇಷವಾಗಿತ್ತು. ಜೊತೆಗೆ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಮತ್ತು ಎರಡನೇ ಪತ್ನಿ ಕಿರಣ್ ರಾವ್ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕುಟುಂಬದ ಎಲ್ಲ ಸದಸ್ಯರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದರು.
ಆಮೀರ್ ಖಾನ್ ಅವರ ಮಕ್ಕಳು ಕೂಡ ತಂದೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಅವರ ಪುತ್ರ ಜುನೈದ್ ಖಾನ್, ಪುತ್ರಿ ಇರಾ ಖಾನ್ ಹಾಗೂ ಕಿರಣ್ ರಾವ್ ಅವರ ಮಗ ಆಜಾದ್ ರಾವ್ ಖಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂಭ್ರಮದಲ್ಲಿ ಕೆಲವು ಬಾಲಿವುಡ್ ಸಿನಿತಾರೆಯರು ಕೂಡ ಭಾಗವಹಿಸಿದ್ದರು. ನಟ ವಿಕ್ಕಿ ಕೌಶಲ್ ಮತ್ತು ನಟಿ ಜೆನಿಲಿಯಾ ಡಿಸೋಜಾ ಆಮೀರ್ ಖಾನ್ ಅವರಿಗೆ ಶುಭಾಶಯ ಕೋರಲು ಆಗಮಿಸಿದ್ದರು. ಜೊತೆಗೆ ಖ್ಯಾತ ಚಿತ್ರ ನಿರ್ಮಾಪಕ ರಿತೇಶ್ ಸಿಧ್ವಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಜಿ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆಮೀರ್ ಖಾನ್ ಕೇಕ್ ಕತ್ತರಿಸಿ ಮೊದಲಿಗೆ ತಮ್ಮ ಮಗ ಅಜಾದ್‌ಗೆ ನೀಡುತ್ತಿರುವುದು ಕಾಣಿಸುತ್ತದೆ. ನಂತರ ಪುತ್ರಿ ಇರಾ ಹಾಗೂ ಸಂಗಾತಿ ಗೌರಿ ಸ್ಪ್ರಾಟ್ ಅವರಿಗೆ ಕೇಕ್ ತಿನಿಸುತ್ತಿರುವ ದೃಶ್ಯಗಳು ಅಭಿಮಾನಿಗಳ ಮನಗೆದ್ದಿವೆ. ಆಮೀರ್ ಖಾನ್ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಈ ಕ್ಷಣಗಳು ಅಭಿಮಾನಿಗಳಲ್ಲಿ ಮೆಚ್ಚುಗೆ ಪಡೆದಿವೆ.





