ಎ. ಆರ್. ರೆಹಮಾನ್.. ಆಸ್ಕರ್ ಪ್ರಶಸ್ತಿ ವಿಜೇತ. ಭಾರತೀಯ ಚಿತ್ರರಂಗದ ದಿ ಬೆಸ್ಟ್ ಮ್ಯೂಸಿಕ್ ಕಂಪೋಸರ್ ಗಳಲ್ಲಿ ಒಬ್ಬರಾದ ರೆಹಮಾನ್ ಇಂದು ಮುಂಜಾನೆ ಡಿಢೀರ್ ಅಂತ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಷ್ಟಕ್ಕೂ ರೆಹಮಾನ್ ಗೆ ಏನಾಗಿತ್ತು ಅಂತ ನೋಡಿದ್ರೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
58 ವರ್ಷದ ರೆಹಮಾನ್ ಗೆ ಕೂಡಲೇ ಆಸ್ಪತ್ರೆಯಲ್ಲಿ ಒಂದಷ್ಟು ಟೆಸ್ಟ್ ಗಳನ್ನ ಮಾಡಲಾಗಿದೆ. ಆಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಅವಶ್ಯಕತೆಯಿರೋದು ದೃಢವಾಗಿದೆ. ವೈದ್ಯರು ಸ್ಟಂಟ್ ಅಳವಡಿಸಿ, ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಇಂದು ಬೆಳಗ್ಗೆಯೇ ಲಂಡನ್ ನಿಂದ ಚೆನ್ನೈಗೆ ಆಗಮಿಸಿದ್ರು ರೆಹಮಾನ್.
ರಂಜಾನ್ ಉಪವಾಸದಲ್ಲಿದ್ದ ರೆಹಮಾನ್, ಈ ಇಳಿವಯಸ್ಸಿನಲ್ಲಿ ಅವರ ದೇಹ ಅದಕ್ಕೆ ತಡೆದಿಲ್ಲ. ಬಾಡಿ ಡೀ ಹೈಡ್ರೇಟ್ ಆಗಿ ನಿತ್ರಾಣರಾಗಿ ಕುಸಿದು ಬಿದ್ದರು ಎನ್ನಲಾಗ್ತಿದೆ. ಒಂದ್ಕಡೆ ಕೆಲಸದ ಒತ್ತಡ, ಮತ್ತೊಂದ್ಕಡೆ ರಂಜಾನ್ ಉಪವಾಸ ಇವೆರಡೂ ಕಾರಣಗಳಿಂದಾಗಿ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಅನ್ನೋದು ವೈದ್ಯರ ಅಭಿಪ್ರಾಯ.
ಫೆಬ್ರವರಿಯಲ್ಲಿ ಚೆನ್ನೈನ ಲೈವ್ ಕಾನ್ಸರ್ಟ್ ಒಂದರಲ್ಲಿ ರೆಹಮಾನ್ ಕಾಣಿಸಿಕೊಂಡಿದ್ರು. ಅದಾದ ಬಳಿಕ ಇತ್ತೀಚೆಗೆ ನಡೆದ ವಿಕ್ಕಿ ಕೌಶಲ್- ರಶ್ಮಿಕಾ ಕಾಂಬೋನ ಛಾವಾ ಚಿತ್ರದ ಆಡಿಯೋ ಲಾಂಚ್ ಫಂಕ್ಷನ್ ನಲ್ಲೂ ಕಾಣಿಸಿಕೊಂಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಇತ್ತೀಚೆಗೆ ಪತ್ನಿ ಸಾಯಿರಾ ಬಾನುಗೆ ರೆಹಮಾನ್ ಡಿವೋರ್ಸ್ ನೀಡಿದ್ದರು. ಅದರ ಒತ್ತಡದಲ್ಲೂ ಇದ್ದರು ಅನ್ನೋದು ಓಪನ್ ಸೀಕ್ರೆಟ್. ರೆಹಮಾನ್ ಮಾಜಿ ಪತ್ನಿ ಸಾಯಿರಾ ಬಾನು ವಕೀಲ ವಂದನಾ ಶಾ ಹೇಳಿಕೆಯಂತೆ ಸಾಯಿರಾ ಬಾನು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೊಂದು ಸರ್ಜರಿ ಮಾಡಬೇಕಿದೆ ಅಂತ ವೈದ್ಯರು ಹೇಳಿದ್ದನ್ನ ಸ್ಟೇಟ್ ಮೆಂಟ್ ಆಗಿ ನೀಡಿದ್ದರು ವಂದನಾ ಶಾ. ಸೋ.. ರೆಹಮಾನ್ ಜೊತೆ ಅವರ ಮಾಜಿ ಪತ್ನಿಗೂ ಅನಾರೋಗ್ಯ.
ರೋಜಾ, ಜಂಟಲ್ ಮ್ಯಾನ್, ಬಾಂಬೆ, ರಂಗೀಲಾ, ಜೀನ್ಸ್, ದಿಲ್ ಸೇ, ಲಗಾನ್, ರೋಬೋ.. ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಎವರ್ ಗ್ರೀನ್ ಸಾಂಗ್ಸ್ ನೀಡಿದ್ದಾರೆ ಎ ಆರ್ ರೆಹಮಾನ್. ಇಂದಿಗೂ ರೆಹಮಾನ್ ಮೋಸ್ಟ್ ಡಿಮ್ಯಾಂಡಿಂಗ್ ಮ್ಯೂಸಿಕ್ ಕಂಪೋಸರ್. ಇವರ ಲೈವ್ ಕಾನ್ಸರ್ಟ್ ಗಳಿಗೆ ವಿಶ್ವದಾದ್ಯಂತ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.
29 ವರ್ಷಗಳ ಕಾಲ ಸಹಜೀವನ ನಡೆಸಿದ್ದ ರೆಹಮಾನ್, 1995ರಲ್ಲಿ ಸಾಯಿರಾ ಬಾನು ಕೈ ಹಿಡಿದಿದ್ದರು. ಅವರಿಗೆ ಮೂರು ಮಂದಿ ಮಕ್ಕಳು ಕೂಡ ಇದ್ದಾರೆ. ಅದೇನೇ ಇರಲಿ ಸಾಯಿರಾ ಬಾನು ಬೇಗ ಗುಣಮುಖರಾಗಲಿ. ಇತ್ತ ಭಾರತೀಯ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ತಂದುಕೊಟ್ಟಂತಹ ರೆಹಮಾನ್ ಅವರು ಬೇಗ ಆರೋಗ್ಯವಂತರಾಗಲಿ ಅನ್ನೋದು ಅವರ ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಆಗಿದೆ.