ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡ್ತಿರೋ 418 ಹಾರರ್ ಸಾಮ್ರಾಜ್ಯ ಈಗ ಮತ್ತಷ್ಟು ದೊಡ್ಡದಾಗಿದೆ. ಯೆಸ್.. ಆಂಧ್ರಗೆ ಮಾತ್ರ ಸೀಮಿತ ಆಗಿದ್ದ ಆ ಸಿನಿಮಾ, ಕನ್ನಡ, ತಮಿಳು ಹಾಗೂ ಹಿಂದಿಗೂ ವೊಸ್ತರಣೆ ಆಗಿದೆ. ಟ್ರೈಲರ್ ಸಿಕ್ಕಾಪಟ್ಟೆ ಭಯಾನಕವಾಗಿದ್ದು, ಮಕ್ಕಳು, ಹಾರ್ಟ್ ವೀಕ್ ಇರೋರು, ಗರ್ಭಿಣಿಯರು ಕಡ್ಡಾಯವಾಗಿ ನೋಡುವಂತಿಲ್ಲ ಎಂದಿದ್ದಾರೆ ನೀಲ್.
- 3 ರಾಜ್ಯಗಳಿಗೆ 418 ಹಾರರ್ ಸಾಮ್ರಾಜ್ಯ ವಿಸ್ತರಿಸಿದ ನೀಲ್
- ಅ-23ಕ್ಕೆ ನೋಡುಗರನ್ನ ನಡುಗಿಸಲು ಬರ್ತಿದ್ದಾಳೆ ದೇವಿಕಾ
- ಪ್ರಶಾಂತ್ ನೀಲ್ ಪ್ರೆಸೆಂಟ್ಸ್‌ನಲ್ಲಿ ಚೈತ್ರಾ, ರಮೇಶ್ ಇಂದಿರ
- ತೆಲುಗಿನಿಂದ ಕನ್ನಡ, ತಮಿಳು, ಹಿಂದಿಯತ್ತ 418 ಡೆವಿಲ್..!
ರೂಮ್ ನಂ. 418ಗೆ ಎಂಟ್ರಿ ಕೊಡೋಕೆ ನಿಮಗೆ ಧೈರ್ಯವಿದೆಯೇ..? ಹೀಗಂತ ಕೆಜಿಎಫ್, ಸಲಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಚಿತ್ರಪ್ರೇಮಿಗಳಿಗೆ ಒಂದು ಸವಾಲು ಹಾಕಿದ್ದಾರೆ. ಇನ್‌ಫ್ಯಾಕ್ಟ್ ಇದು ಸವಾಲು ಅನ್ನೋದಕ್ಕಿಂತ ರಿಯಲ್ ಫ್ಯಾಕ್ಟ್ ಕೂಡ ಹೌದು. ಯಾಕಂದ್ರೆ ನೀಲ್ ಪ್ರೆಸೆಂಟ್ ಮಾಡ್ತಿರೋ ಹಾರರ್ ಸಿನಿಮಾ 418 ಟ್ರೈಲರ್ ಸಖತ್ ಭಯ ಹುಟ್ಟಿಸಿದೆ.
ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ. ನಮ್ಮ ನೀಲ್ ಅರ್ಪಿಸುತ್ತಿರುವ, ನವ ನಿರ್ದೇಶಕ ಕೀರ್ತನ್ ನಾಡಗೌಡ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ 418 ಈಗಾಗ್ಲೇ ತೆಲುಗಿನಲ್ಲಿ ಟ್ರೈಲರ್ ರಿಲೀಸ್ ಆಗಿತ್ತು. ಇದೀಗ ಚಿತ್ರದ ಕನ್ನಡ, ಹಿಂದಿ ಹಾಗೂ ತಮಿಳು ಆವೃತ್ತಿಯ ಟ್ರೈಲರ್‌ಗಳು ಅಧಿಕೃತವಾಗಿ ಬಿಡುಗಡೆಯಾಗಿವೆ. ಈ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ಕನ್ನಡತಿ ಚೈತ್ರಾ ಆಚಾರ್, ರಮೇಶ್ ಇಂದಿರ, ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಮತ್ತು ಶಶಾಂಕ್ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಸಿಗುತ್ತಾರೆ.
ಆ ಮನೆಯೊಳಗೆ ಒಂದು ಹಕ್ಕಿಯೂ ಕಾಲಿಟ್ಟಿಲ್ಲ.. ಅನ್ನೋ ವಾಚ್‌ಮನ್‌ನ ಬೆಚ್ಚಿಬೀಳಿಸುವ ಸಂಭಾಷಣೆಯೊಂದಿಗೆ ಆರಂಭವಾಗೋ ಟ್ರೈಲರ್‌ನಲ್ಲಿ, ಮೊದಲಿಗೇನೇ ಅದೃಶ್ಯ ಶಕ್ತಿಯ ಭೀಕರ ಉಪಸ್ಥಿತಿಯ ಸುಳಿವು ನೀಡುತ್ತದೆ. ವಾಸ್ತವ ಮತ್ತು ಭ್ರಮೆಗಳ ನಡುವೆ ಸಿಲುಕಿ ಒದ್ದಾಡುವ 18 ವರ್ಷದ ವಿವೇಕ್ ಎಂಬ ಯುವಕನ ಸುತ್ತ ಕಥೆಯ ಎಳೆ ತೆರೆದುಕೊಳ್ಳುತ್ತದೆ. ಸ್ಥಳೀಯರ ಪ್ರಬಲ ವಿರೋಧದ ನಡುವೆಯೂ ಬರೋಬ್ಬರಿ 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ VIMS ಕಟ್ಟಡವನ್ನು ಮರುಪ್ರವೇಶಿಸಿದಾಗ ನಿಗೂಢತೆ ಇನ್ನಷ್ಟು ಗಾಢವಾಗುತ್ತದೆ. ಅಲ್ಲಿನ ರೂಮ್ ನಂ. 418 ಅಡಗಿಸಿಕೊಂಡಿರುವ ಆ ಭಯಾನಕ ರಹಸ್ಯವೇನು..? ಅನ್ನೋ ಕುತೂಹಲದ ನಡುವೆ, ದೇವಿಕಾ ಪಾತ್ರದ ಆಗಮನವಾಗುತ್ತಿದ್ದಂತೆ ನೈಜ ನಡುಕ ಶುರುವಾಗುತ್ತದೆ.
ಟ್ರೈಲರ್‌ನ ಮೊದಲಾರ್ಧವು ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸೈಕಲಾಜಿಕಲ್ ಥ್ರಿಲ್ಲರ್‌ನಂತೆ ಭಾಸವಾದರೆ.. ದ್ವಿತೀಯಾರ್ಧದಲ್ಲಿ ಸೂಪರ್‌ನ್ಯಾಚುರಲ್ ಹಾಗೂ ಹಾರರ್ ಅಂಶಗಳ ಭಯಾನಕದ ಸಮ್ಮಿಶ್ರಣದೊಂದಿಗೆ ತೀವ್ರ ತಿರುವು ಪಡೆದುಕೊಳ್ಳುತ್ತದೆ. ಯಾವುದೇ ಅನಗತ್ಯ ಹಾಸ್ಯ ಅಥವಾ ಕಮರ್ಷಿಯಲ್ ಅಂಶಗಳಿಗೆ ಜಾಗ ನೀಡದೆ, ನಿರ್ದೇಶಕ ಕೀರ್ತನ್ ನಾಡಗೌಡ ಪ್ರತಿಯೊಂದು ಫ್ರೇಮ್‌ನಲ್ಲೂ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತೆ ಕಥೆಯನ್ನು ಗಂಭೀರವಾಗಿ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಚೈತ್ರಾ ಆಚಾರ್ ಆತಂಕಕಾರಿ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಅದ್ಭುತ ನಟನೆ ಟ್ರೈಲರ್‌ನ ಹೈಲೈಟ್ ಆಗಿದೆ. ಅವರ ದೇವಿಕಾ ಪಾತ್ರದ ಎಂಟ್ರಿ.. ಕಥೆಯ ಗತಿಯನ್ನೇ ಬದಲಿಸುವ ಸೂಚನೆ ನೀಡಿದೆ. ಉಳಿದಂತೆ ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಹಾಗೂ ಶಶಾಂಕ್ ಪಾಟೀಲ್ ಅವರ ಅಭಿನಯವೂ ಕಥೆಗೆ ಪೂರಕವಾಗಿದೆ.
ಚಿತ್ರದ ತಾಂತ್ರಿಕ ಗುಣಮಟ್ಟ ಟ್ರೈಲರ್‌ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ದಿನೇಶ್ ದಿವಾಕರ್ ಛಾಯಾಗ್ರಹಣ, ವೆಂಕಿ ಜಿಜಿ ಹಿನ್ನೆಲೆ ಸಂಗೀತ ಪ್ರತಿ ಕ್ಷಣದಲ್ಲೂ ರೋಮಾಂಚನ ಉಂಟುಮಾಡುತ್ತದೆ. ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಹಾಗೂ ಆ ನಿಗೂಢ ಕಟ್ಟಡದ ಸೆಟ್ ವಿನ್ಯಾಸವು ಕಥೆಯ ಮತ್ತೊಂದು ಪ್ರಮುಖ ಪಾತ್ರದಂತೆ ಕೆಲಸ ಮಾಡಿದೆ. ದಸರಾ ಹಬ್ಬದ ವಿಶೇಷ ಇದೇ ಅಕ್ಟೋಬರ್ 23ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





