ದುಬಾರಿ ಜೀವನ ವೆಚ್ಚದಿಂದ ಕೂಡಿದ ಬೆಂಗಳೂರಿನಲ್ಲಿ ಉಳಿತಾಯ ಮಾಡುವುದು ಕನಸಿನಂತೆ ಎನಿಸಿದರೂ, ಒಬ್ಬ ಯುವಕ ಕೇವಲ 15 ಸಾವಿರ ರೂ. ತಿಂಗಳ ಸಂಬಳದಿಂದ 30 ವರ್ಷಕ್ಕೂ ಮೊದಲೇ 1 ಕೋಟಿ ರೂ. ಉಳಿತಾಯ ಮಾಡಿದ್ದಾನೆ. ಈ ಯುವಕನ ಸಕ್ಸಸ್ ಸ್ಟೋರಿಯು ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಆತನ ಮಿತವ್ಯಯ ಜೀವನಶೈಲಿ ಮತ್ತು ಸ್ಮಾರ್ಟ್ ಹೂಡಿಕೆ ತಂತ್ರಗಳು ಈ ಗುರಿಯನ್ನು ಸಾಧ್ಯವಾಗಿಸಿವೆ. ಈತನ ಕಥೆಯನ್ನು ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿಹಂಚಿಕೊಂಡಿದ್ದು, ಆತನ ಆರ್ಥಿಕ ಯಾತ್ರೆಯ ರಹಸ್ಯವನ್ನು ತಿಳಿಯೋಣ.
ಈ ಯುವಕ ಶ್ರೀಮಂತ ಕುಟುಂಬದಿಂದ ಬಂದವನಲ್ಲ, ಬದಲಿಗೆ ಸಾಮಾನ್ಯ ಬಡ ಕುಟುಂಬದಿಂದ ಉದ್ಭವಿಸಿದವನು. ಎಂಜಿನಿಯರಿಂಗ್ ಪದವೀಧರನಾದ ಈತ ಕೋಡಿಂಗ್‌ನನಲ್ಲಿ ಪರಿಣತಿಯನ್ನು ಹೊಂದಿದ್ದಾನೆ. ಆತನ ವೃತ್ತಿಜೀವನದ ಆರಂಭದಲ್ಲಿ ವಾರ್ಷಿಕ 2.5 ಲಕ್ಷ ರೂ. ಸಂಬಳವಿತ್ತು, ಇದರಲ್ಲಿ ತೆರಿಗೆ ಕಳೆದ ನಂತರ ತಿಂಗಳಿಗೆ ಕೇವಲ 15 ಸಾವಿರ ರೂ. ಕೈಗೆ ಸಿಗುತ್ತಿತ್ತು. ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಈ ಕಡಿಮೆ ಸಂಬಳದಿಂದ ಜೀವನ ನಡೆಸುವುದೇ ಸವಾಲಿನ ಸಂಗತಿಯಾಗಿತ್ತು. ಆದರೂ, ಆತ ತಿಂಗಳಿಗೆ 2 ಸಾವಿರ ರೂ. ಉಳಿತಾಯ ಮಾಡುವ ಶಿಸ್ತನ್ನು ರೂಢಿಸಿಕೊಂಡಿದ್ದ.
2018ರಲ್ಲಿ ಆತನ ವೃತ್ತಿಜೀವನ 2.4 ಲಕ್ಷ ರೂ. ವಾರ್ಷಿಕ ಸಂಬಳದಿಂದ ಆರಂಭವಾಯಿತು. ಆಗ ಆತ ಬೆಂಗಳೂರಿನಲ್ಲಿ ಪಿಜಿಯಲ್ಲಿ ಕೊಠಡಿ ಹಂಚಿಕೊಂಡು, ಕಡಿಮೆ ವೆಚ್ಚದಲ್ಲಿ ಜೀವನ ನಡೆಸುತ್ತಿದ್ದ. ಕಾಲೇಜು ಶಿಕ್ಷಣಕ್ಕಾಗಿ ಸಂಬಂಧಿಕರಿಂದ ಆರ್ಥಿಕ ಸಹಾಯವನ್ನು ಪಡೆದಿದ್ದ ಆತ, ತನ್ನ ವೆಚ್ಚವನ್ನು ಕಟ್ಟಿಹಾಕಿಕೊಂಡು ಮಿತವ್ಯಯದ ಜೀವನವನ್ನು ಅಳವಡಿಸಿಕೊಂಡಿದ್ದ. ಆರಂಭದಲ್ಲಿ ತಿಂಗಳಿಗೆ ಕೇವಲ 2,000 ರೂ. ಉಳಿಸುತ್ತಿದ್ದ ಆತ, ಕ್ರಮೇಣ ತನ್ನ ವೃತ್ತಿಯಲ್ಲಿ ಬೆಳೆದಂತೆ ಉಳಿತಾಯದ ಪ್ರಮಾಣವನ್ನು ಹೆಚ್ಚಿಸಿದ.
ಮೂರು ವರ್ಷಗಳಲ್ಲಿ ಆತನ ಸಂಬಳ 2.4 ಲಕ್ಷ ರೂ.ನಿಂದ 12 ಲಕ್ಷ ರೂ.ಗೆ ಮತ್ತು ನಂತರ 32 ಲಕ್ಷ ರೂ.ಗೆ ಏರಿತು. ಕಂಪನಿಯಿಂದ ಸಿಗುವ ಸ್ಟಾಕ್ ಆಪ್ಶನ್‌ಗಳು ಮತ್ತು ಬೋನಸ್‌ಗಳು ಆತನ ವಾರ್ಷಿಕ ಆದಾಯವನ್ನು 45-50 ಲಕ್ಷ ರೂ. ದಾಟುವಂತೆ ಮಾಡಿತು. ಆತ ಆರಂಭದಲ್ಲಿ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ)ನಲ್ಲಿ 3.5 ಲಕ್ಷ ರೂ. ಹೂಡಿಕೆ ಮಾಡಿದ್ದ. ಆದರೆ, ಪ್ರಾಂಜಲ್ ಕಮಾನಂತಹ ಯೂಟ್ಯೂಬ್ ಚಾನೆಲ್‌ಗಳ ಮೂಲಕ ಮ್ಯೂಚುವಲ್ ಫಂಡ್‌ಗಳು ಮತ್ತು ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಬಗ್ಗೆ ತಿಳಿದುಕೊಂಡು ತನ್ನ ಹೂಡಿಕೆ ತಂತ್ರವನ್ನು ಬದಲಾಯಿಸಿದ.
ಈಗ ಆತ ತಿಂಗಳಿಗೆ 71,000 ರೂ. ಹೂಡಿಕೆ ಮಾಡುತ್ತಿದ್ದು, ತನ್ನ ನಿವ್ವಳ ಮೌಲ್ಯವನ್ನು ಧಾರ್ಮಿಕವಾಗಿ ಟ್ರ್ಯಾಕ್ ಮಾಡುತ್ತಾನೆ. ಆರಂಭದಲ್ಲಿ ಎಫ್‌ಡಿಯಲ್ಲಿ ಇರಿಸಿದ್ದ ಹಣವನ್ನು ಈಗ ತನ್ನ ತುರ್ತು ನಿಧಿಯಾಗಿ ಬಳಸುತ್ತಾನೆ. ಈ ಸ್ಮಾರ್ಟ್ ಹೂಡಿಕೆ ತಂತ್ರಗಳು ಮತ್ತು ಶಿಸ್ತಿನ ಜೀವನಶೈಲಿಯಿಂದ ಆತ 1 ಕೋಟಿ ರೂ. ಸಂಪಾದನೆಯ ಗುರಿಯನ್ನು ಸಾಧಿಸಿದ್ದಾನೆ.
ಈ ಯುವಕನ ಗುರಿಯು 40 ವರ್ಷಕ್ಕೆ ಆರ್ಥಿಕ ಸ್ವಾತಂತ್ರ್ಯ (Financial Independence) ಸಾಧಿಸಿ, 45 ವರ್ಷಕ್ಕೆ ನಿವೃತ್ತಿ ಹೊಂದುವುದಾಗಿದೆ. “ನಾನು 45 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಬಹುಶಃ ಒಂದು ದಿನವೂ ಕೆಲಸ ಮಾಡದೇ, ಇತರರಿಗೆ ಸಹಾಯ ಮಾಡುವ ಜೀವನವನ್ನು ಕಲ್ಪಿಸಿಕೊಂಡಿದ್ದೇನೆ,” ಎಂದು ಆತ ರೆಡಿಟ್‌ನಲ್ಲಿ ಬರೆದಿದ್ದಾನೆ. ಹಿಮಾಚಲ ಪ್ರದೇಶದ ಬೆಟ್ಟದ ತುದಿಯ ಕೆಫೆಯಿಂದ ಈ ಯಶಸ್ಸನ್ನು ಕಂಡು ನಗುತ್ತಿರುವ ಭವಿಷ್ಯವನ್ನು ಆತ ಕನಸಿನಲ್ಲಿ ಚಿತ್ರಿಸಿದ್ದಾನೆ.





