ಭಾರತದ ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಒಂದು ಹಂತದಲ್ಲಿ 1,400 ಅಂಕಗಳಷ್ಟು ಏರಿಕೆಯಾಗಿ 24,280ರ ಮಟ್ಟವನ್ನು ಮುಟ್ಟಿತ್ತು. ಪ್ರಸ್ತುತ 384 ಅಂಕಗಳ ಏರಿಕೆಯೊಂದಿಗೆ 24,163ರ ಮಟ್ಟದಲ್ಲಿದೆ. ನಿಫ್ಟಿ ಕೂಡ 400 ಅಂಕಗಳ ಹೆಚ್ಚಳದೊಂದಿಗೆ ಶೇ. 2ರಷ್ಟು ಏರಿಕೆ ಕಂಡಿದೆ.
ಇಂದಿನ ಏರಿಕೆಯಿಂದಾಗಿ ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂಪಾಯಿ ಸಂಪತ್ತು ಹೆಚ್ಚಳವಾಗಿದೆ. ಬಿಎಸ್‌ಇನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 449 ಲಕ್ಷ ಕೋಟಿಯಿಂದ 458 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಷೇರು ಬಜಾರ್ ಏಕೆ ಖುಷಿಯಲ್ಲಿದೆ?
- ಅಮೆರಿಕ-ಇರಾನ್ ಮಾತುಕತೆ ಪುನಾರಂಭದ ಸಾಧ್ಯತೆ ಪಾಕಿಸ್ತಾನದಲ್ಲಿ ಎರಡನೇ ಸುತ್ತಿನ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳಲ್ಲಿ ಮಾತುಕತೆ ಪುನಾರಂಭಗೊಳ್ಳುವ ನಿರೀಕ್ಷೆಯಿದೆ. ಇದು ಜಾಗತಿಕ ಉದ್ವಿಗ್ನತೆ ಕಡಿಮೆಯಾಗುವ ಸಂಕೇತವಾಗಿದೆ.
- ಕಚ್ಚಾ ತೈಲ ಬೆಲೆಯಲ್ಲಿ ಇಳಿಮುಖ ಬ್ಯಾರಲ್‌ಗೆ 100 ಡಾಲರ್ ಮೀರಿದ್ದ ಕಚ್ಚಾ ತೈಲ ಬೆಲೆ ಈಗ 95 ಡಾಲರ್‌ಗಿಂತ ಕಡಿಮೆಗೆ ಇಳಿದಿದೆ. ಇದು ಭಾರತದ ಆಮದು ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ.
- ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ಸಾಹ ಜಪಾನ್‌ನ ನಿಕ್ಕೀ, ಸೌತ್ ಕೊರಿಯಾದ ಕೊಸ್ಪಿ, ಅಮೆರಿಕದ ನಾಸ್ಡಾಕ್ ಮತ್ತು ಎಸ್&ಪಿ ಸೂಚ್ಯಂಕಗಳು ಹುರುಪಿನಲ್ಲಿವೆ. ಇದು ಭಾರತದ ಮಾರುಕಟ್ಟೆಗೂ ಪಾಸಿಟಿವ್ ಪ್ರಭಾವ ಬೀರಿದೆ.
- ರುಪಾಯಿ ಬಲವರ್ಧನೆ ಡಾಲರ್ ಎದುರು ರುಪಾಯಿ 12 ಪೈಸೆ ಬಲಗೊಂಡಿದೆ. ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ರುಪಾಯಿಯ ಮೇಲಿನ ಒತ್ತಡ ಕಡಿಮೆಯಾಗಿದೆ.
ಇಂದಿನ ಷೇರು ಮಾರುಕಟ್ಟೆಯ ಏರಿಕೆಯು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ಆದರೆ ಮಾರುಕಟ್ಟೆ ತಜ್ಞರು ಮುಂದಿನ ದಿನಗಳಲ್ಲಿ ಜಾಗತಿಕ ಸುದ್ದಿಗಳನ್ನು ಗಮನಿಸುವಂತೆ ಸಲಹೆ ನೀಡುತ್ತಿದ್ದಾರೆ.





