ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್ ನೀಡಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ಕೇವಲ ಇಂಟರ್ನೆಟ್‌ನಲ್ಲಿ ಮಾತ್ರವಲ್ಲ, ಭಾರತೀಯ ಷೇರು ಮಾರುಕಟ್ಟೆಯಲ್ಲೂ ದೊಡ್ಡ ಸಂಚಲನ ಮೂಡಿಸಿದೆ. ‘ಮೆಲೋಡಿ’ ಹೆಸರು ಟ್ರೆಂಡ್ ಆಗುತ್ತಿದ್ದಂತೆ, ‘ಪಾರ್ಲೆ ಇಂಡಸ್ಟ್ರೀಸ್’ ಕಂಪನಿಯ ಷೇರುಗಳು ಏಕಾಏಕಿ ಶೇ.5 ರಷ್ಟು ಏರಿಕೆ ಕಂಡು ಅಪರ್ ಸರ್ಕ್ಯೂಟ್ ತಲುಪಿವೆ.
ವೈರಲ್ ಆದ ‘ಮೆಲೋಡಿ’ ಚಾಕೊಲೇಟ್ ಮತ್ತು ಷೇರು ಮಾರುಕಟ್ಟೆಯಲ್ಲಿ ಜಿಗಿದ ‘ಪಾರ್ಲೆ ಇಂಡಸ್ಟ್ರೀಸ್’ ಕಂಪನಿಗೆ ನೇರ ಸಂಬಂಧವೇ ಇಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೋದಿ-ಮೆಲೋನಿ ಭೇಟಿ ಹಾಗೂ ‘ಮೆಲೋಡಿ’ ಚಾಕೊಲೇಟ್ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆ, ಅನೇಕ ಚಿಲ್ಲರೆ ಹೂಡಿಕೆದಾರರು ‘ಪಾರ್ಲೆ’ ಎಂಬ ಹೆಸರನ್ನು ನೋಡಿ ಗೊಂದಲಕ್ಕೀಡಾದರು. ಇದೇ ‘ಮೆಲೋಡಿ’ ತಯಾರಿಸುವ ಕಂಪನಿ ಎಂದು ಭಾವಿಸಿ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ‘ಪಾರ್ಲೆ ಇಂಡಸ್ಟ್ರೀಸ್’ ಷೇರುಗಳನ್ನು ಖರೀದಿಸಲು ಮುಗಿಬಿದ್ದರು.
‘ಮೆಲೋಡಿ’ ಟಾಫಿ ತಯಾರಿಸುವುದು ಭಾರತದ ಖ್ಯಾತ FMCG ಕಂಪನಿಯಾದ ಪಾರ್ಲೆ ಪ್ರಾಡಕ್ಟ್ಸ್ (Parle Products). ಇದೇ ಸಂಸ್ಥೆ ‘ಪಾರ್ಲೆ-ಜಿ’ ಬಿಸ್ಕೆಟ್, ‘ಮೊನಾಕೊ’, ‘ಕ್ರಾಕ್‌ಜಾಕ್’ ಹಾಗೂ ‘ಮ್ಯಾಂಗೋ ಬೈಟ್’ ಸೇರಿದಂತೆ ಹಲವು ಜನಪ್ರಿಯ ಉತ್ಪನ್ನಗಳನ್ನು ತಯಾರಿಸುತ್ತದೆ. ಆದರೆ ಈ ಕಂಪನಿ ಖಾಸಗಿ ಒಡೆತನದಲ್ಲಿದ್ದು, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ.
ಇದಕ್ಕೆ ವಿರುದ್ಧವಾಗಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಇರುವ ಪಾರ್ಲೆ ಇಂಡಸ್ಟ್ರೀಸ್ (Parle Industries) ಕಂಪನಿ ಸಂಪೂರ್ಣ ಬೇರೆ ವ್ಯವಹಾರ ನಡೆಸುತ್ತದೆ. ಈ ಕಂಪನಿಗೂ ‘ಮೆಲೋಡಿ’ ಚಾಕೊಲೇಟ್ ಬ್ರಾಂಡ್‌ಗೂ ಯಾವುದೇ ಬಿಸಿನೆಸ್ ಸಂಪರ್ಕ ಇಲ್ಲ. ಕೇವಲ ಹೆಸರಿನ ಸಾಮ್ಯತೆಯಿಂದ ಹೂಡಿಕೆದಾರರು ಗೊಂದಲಕ್ಕೆ ಸಿಲುಕಿದ್ದು, ಷೇರು ಬೆಲೆಯಲ್ಲಿ ದಿಢೀರ್ ಏರಿಕೆಗೆ ಕಾರಣವಾಗಿದೆ.
ಮಂಗಳವಾರದ ವಹಿವಾಟಿನಲ್ಲಿ ಪಾರ್ಲೆ ಇಂಡಸ್ಟ್ರೀಸ್ ಷೇರುಗಳು ಶೇ.5 ರಷ್ಟು ಏರಿ ಸುಮಾರು ₹5.25 ಮಟ್ಟ ತಲುಪಿದವು. ಕಳೆದ ಒಂದು ವಾರದಲ್ಲಿ ಈ ಸಣ್ಣ ಬಿ-ಗ್ರೂಪ್ ಷೇರು ಒಟ್ಟು ಶೇ.7 ರಷ್ಟು ಏರಿಕೆ ಕಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದ ‘ಮೆಲೋಡಿ’ ಪದವೇ ಈ ಏರಿಕೆಗೆ ಪ್ರಮುಖ ಕಾರಣವೆಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.
ಆದರೆ ಮಾರುಕಟ್ಟೆ ತಜ್ಞರು ಹೂಡಿಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಷಯಗಳು ಕೆಲವೊಮ್ಮೆ ಷೇರು ಮಾರುಕಟ್ಟೆಯಲ್ಲಿ ತಾತ್ಕಾಲಿಕ ಹೈಪ್ ಸೃಷ್ಟಿಸುತ್ತವೆ. ಆದರೆ ಕಂಪನಿಯ ಮೂಲಭೂತ ಆರ್ಥಿಕ ಸ್ಥಿತಿ, ವ್ಯವಹಾರ ಮಾದರಿ ಹಾಗೂ ದೀರ್ಘಾವಧಿಯ ಬೆಳವಣಿಗೆಯನ್ನು ಪರಿಶೀಲಿಸದೆ ಹೂಡಿಕೆ ಮಾಡುವುದು ಅಪಾಯಕಾರಿಯಾಗಬಹುದು ಎಂದು ಅವರು ಸೂಚಿಸಿದ್ದಾರೆ.





