ನವದೆಹಲಿ, ಜನವರಿ 20: ಕಳೆದ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಭರ್ಜರಿ ತೆರಿಗೆ ರಿಲೀಫ್ ನೀಡಿದ್ದ ಕೇಂದ್ರ ಸರ್ಕಾರ, ಮುಂಬರುವ ಬಜೆಟ್‌ನಲ್ಲಿ ಮತ್ತೊಂದು ದೊಡ್ಡ ತೆರಿಗೆ ಸುಧಾರಣೆಗೆ ಮುಂದಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಅಮೆರಿಕ, ಜರ್ಮನಿ ಸೇರಿದಂತೆ ಹಲವು ಅಭಿವೃದ್ಧಿ ರಾಷ್ಟ್ರಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ (Joint Taxation System) ಅನ್ನು ಭಾರತದಲ್ಲೂ ಪರಿಚಯಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ, ವಿಶೇಷವಾಗಿ ಒಂದೇ ಆದಾಯ ಮೂಲ ಹೊಂದಿರುವ ಕುಟುಂಬಗಳಿಗೆ ದೊಡ್ಡ ಮಟ್ಟದ ತೆರಿಗೆ ಉಳಿತಾಯವಾಗುವ ನಿರೀಕ್ಷೆ ಇದೆ. ‘ಫ್ಯಾಮಿಲಿ ಭಾಗ್ಯ’ ಎನ್ನಬಹುದಾದ ಈ ಯೋಜನೆ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ನಿರೀಕ್ಷೆ ಮೂಡಿಸಿದೆ.
ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಎಂದರೇನು?
ಭಾರತದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಆದಾಯವನ್ನು ಪ್ರತ್ಯೇಕವಾಗಿ ಘೋಷಿಸಿ ಐಟಿ ರಿಟರ್ನ್ಸ್ (ITR) ಸಲ್ಲಿಸಬೇಕಾಗುತ್ತದೆ. ಆದರೆ ಜಾಯಿಂಟ್ ಟ್ಯಾಕ್ಸೇಶನ್ ವ್ಯವಸ್ಥೆಯಲ್ಲಿ, ಪತಿ-ಪತ್ನಿ ಇಬ್ಬರೂ ಒಟ್ಟಾಗಿ ಒಂದು ಸಂಯುಕ್ತ ಐಟಿ ರಿಟರ್ನ್ ಸಲ್ಲಿಸಲು ಅವಕಾಶ ದೊರೆಯುತ್ತದೆ.
ಈ ರೀತಿ ಜಂಟಿಯಾಗಿ ತೆರಿಗೆ ಸಲ್ಲಿಸಿದರೆ,
-
ಹೆಚ್ಚಿನ ಮೂಲ ವಿನಾಯಿತಿಗಳು (Basic Exemption)
-
ಹೆಚ್ಚಿದ ಸ್ಟ್ಯಾಂಡರ್ಡ್ ಡಿಡಕ್ಷನ್
-
ಹೆಚ್ಚಿನ ಆದಾಯ ಮಿತಿವರೆಗೆ ಕಡಿಮೆ ತೆರಿಗೆ ದರ
-
ಸರ್ಚಾರ್ಜ್ ಮಿತಿಯಲ್ಲಿ ರಿಲೀಫ್
ಇವೆಲ್ಲಾ ಲಭ್ಯವಾಗುವ ಸಾಧ್ಯತೆ ಇದೆ.
ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ?
ಸದ್ಯದ ಪ್ರಸ್ತಾಪಗಳ ಪ್ರಕಾರ, ಜಾಯಿಂಟ್ ಟ್ಯಾಕ್ಸೇಶನ್ ವ್ಯವಸ್ಥೆಯಲ್ಲಿ ಪತಿ-ಪತ್ನಿಯ ಒಟ್ಟು ಆದಾಯದಲ್ಲಿ ₹8 ಲಕ್ಷವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ವೈಯಕ್ತಿಕ ತೆರಿಗೆ ವಿನಾಯಿತಿಗಿಂತ ಬಹಳ ಹೆಚ್ಚು.
ಇನ್ನೂ ಪ್ರಮುಖ ಅಂಶವೆಂದರೆ
-
ಈಗಿರುವ ವ್ಯವಸ್ಥೆಯಲ್ಲಿ ₹24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30 ತೆರಿಗೆ ಅನ್ವಯವಾಗುತ್ತದೆ
-
ಆದರೆ ಜಾಯಿಂಟ್ ಟ್ಯಾಕ್ಸೇಶನ್ ಜಾರಿಗೆ ಬಂದರೆ, ಶೇ.30 ತೆರಿಗೆ ₹48 ಲಕ್ಷ ಆದಾಯ ಮೀರಿದಾಗ ಮಾತ್ರ ಅನ್ವಯವಾಗಬಹುದು
ಇದು ದೊಡ್ಡ ಆದಾಯ ಹೊಂದಿರುವ ಕುಟುಂಬಗಳಿಗೆ ದೊಡ್ಡ ರಿಲೀಫ್ ಆಗಲಿದೆ.
ಸರ್ಚಾರ್ಜ್‌ನಲ್ಲೂ ಸಡಿಲಿಕೆ?
ತೆರಿಗೆ ವ್ಯವಸ್ಥೆಯಲ್ಲಿ ₹50 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.10ರಿಂದ 25ರ ವರೆಗೆ ಸರ್ಚಾರ್ಜ್ ವಿಧಿಸಲಾಗುತ್ತಿದೆ. ಆದರೆ ಜಂಟಿ ತೆರಿಗೆ ವ್ಯವಸ್ಥೆಯಲ್ಲಿ ಸರ್ಚಾರ್ಜ್ ₹75 ಲಕ್ಷ ಆದಾಯದಿಂದ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ. ಇದರಿಂದ ಹೆಚ್ಚಿನ ಆದಾಯದ ಕುಟುಂಬಗಳು ಹೆಚ್ಚುವರಿ ತೆರಿಗೆ ಹೊರೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ.
ಯಾರಿಗೆ ಹೆಚ್ಚು ಲಾಭ?
ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಿಂದ ಹೆಚ್ಚು ಲಾಭ ಪಡೆಯುವವರು.
-
ಗಂಡ ಮಾತ್ರ ದುಡಿಯುವ, ಹೆಂಡತಿ ಗೃಹಿಣಿಯಾಗಿರುವ ಕುಟುಂಬಗಳು
-
ಒಂದೇ ಆದಾಯ ಮೂಲ ಹೊಂದಿರುವ ದಂಪತಿಗಳು
-
ಹೆಚ್ಚಿನ ಸಂಬಳ ಅಥವಾ ವ್ಯವಹಾರ ಆದಾಯ ಇರುವ ಕುಟುಂಬಗಳು
ಇಂತಹ ಕುಟುಂಬಗಳಲ್ಲಿ ಆದಾಯ ಒಬ್ಬರ ಹೆಸರಲ್ಲಿ ಮಾತ್ರ ಇರುವುದರಿಂದ ತೆರಿಗೆ ದರ ಹೆಚ್ಚು ಆಗುತ್ತದೆ. ಜಂಟಿ ವ್ಯವಸ್ಥೆಯಲ್ಲಿ ಆದಾಯ ಹಂಚಿಕೆಯಾಗಿ ಲೆಕ್ಕ ಹಾಕಲಾಗುವುದರಿಂದ ತೆರಿಗೆ ಹೊರೆ ಕಡಿಮೆಯಾಗುತ್ತದೆ.
ದುಡಿಯುವ ದಂಪತಿಗಳಿಗೆ ಏನು ಆಯ್ಕೆ?
ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ, ಜಂಟಿಯಾಗಿ ತೆರಿಗೆ ಸಲ್ಲಿಸುವುದು ಕಡ್ಡಾಯವಲ್ಲ. ಅವರು ಬಯಸಿದರೆ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಐಟಿ ರಿಟರ್ನ್ ಸಲ್ಲಿಸಬಹುದು. ಯಾವ ವಿಧಾನದಲ್ಲಿ ತೆರಿಗೆ ಕಡಿಮೆ ಬರುತ್ತದೆ ಎಂಬುದನ್ನು ಲೆಕ್ಕ ಹಾಕಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇರುತ್ತದೆ.
ಈ ಯೋಜನೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಆದರೆ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಘೋಷಣೆ ಬಂದರೆ, ಅದು ದೇಶದ ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಎನ್ನಬಹುದು.





