ಡಿಜಿಟಲ್ ಪಾವತಿ ವಲಯದಲ್ಲಿ ಕ್ರಾಂತಿ ಮಾಡಿದ ಗೂಗಲ್ ಪೇ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಆಕ್ಸಿಸ್ ಬ್ಯಾಂಕ್‌ನೊಂದಿಗೆ ಸಹಭಾಗಿತ್ವದಲ್ಲಿ ‘ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್’ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಭಾರತದ ಮೊದಲ ಸಂಪೂರ್ಣ ಡಿಜಿಟಲ್, UPI-ಪವರ್ಡ್ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಎಂದು ಹೆಸರಾಗಿದೆ.
ಈ ಕಾರ್ಡ್ ರುಪೇ ಪಾವತಿ ನೆಟ್‌ವರ್ಕ್ ಮೇಲೆ ಕಾರ್ಯನಿರ್ವಹಿಸುತ್ತದೆ. UPIಯಂತೆಯೇ QR ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು. ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ದೊಡ್ಡ ಆನ್‌ಲೈನ್ ಖರೀದಿವರೆಗೆ ಪಾವತಿ ಮಾಡಬಹುದು. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್ ಲೈನ್ ಬಳಸಿ ಪಾವತಿಸಿ, ನಂತರ ಸುಲಭವಾಗಿ ತೀರಿಸಬಹುದು. ಆಕ್ಸಿಸ್ ಬ್ಯಾಂಕ್ ಖಾತೆ ಇರಬೇಕಿಲ್ಲ, ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆ
ಗೂಗಲ್ ಪೇ ಆ್ಯಪ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಯಾವುದೇ ಕಾಗದಪತ್ರಗಳು, ದಾಖಲೆಗಳು ಅಥವಾ ಬ್ಯಾಂಕ್ ಶಾಖೆಗೆ ಭೇಟಿ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಅನುಮೋದನೆ ದೊರೆತರೆ ತಕ್ಷಣ ಬಳಕೆ ಆರಂಭಿಸಬಹುದು. ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಿಂದ ಯುವಜನರಿಗೆ ಹೆಚ್ಚು ಸೂಕ್ತವಾಗಿದೆ.
ರಿವಾರ್ಡ್‌ಗಳು ಮತ್ತೊಂದು ಹೈಲೈಟ್
ಸಾಮಾನ್ಯ ಕ್ರೆಡಿಟ್ ಕಾರ್ಡ್‌ಗಳು ತಿಂಗಳ ಅಂತ್ಯದಲ್ಲಿ ಕ್ಯಾಶ್‌ಬ್ಯಾಕ್ ನೀಡುತ್ತವೆ. ಆದರೆ ಫ್ಲೆಕ್ಸ್‌ನಲ್ಲಿ ಪ್ರತಿ ವಹಿವಾಟಿಗೂ ತಕ್ಷಣ ‘ಸ್ಟಾರ್ಸ್’ ರೂಪದಲ್ಲಿ ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತವೆ. ಇವುಗಳನ್ನು ಮುಂದಿನ ಖರೀದಿಯಲ್ಲೇ ರಿಡೀಮ್ ಮಾಡಬಹುದು. ಗೂಗಲ್ ಪೇಯ ಸೀನಿಯರ್ ಡೈರೆಕ್ಟರ್ ಶರತ್ ಬುಲುಸು ಅವರು ಹೇಳುವಂತೆ, “ಗ್ರಾಹಕರು ರಿವಾರ್ಡ್ ಪಡೆಯುವಲ್ಲಿ ತೊಂದರೆ ಅನುಭವಿಸಬಾರದು ಎಂಬುದಕ್ಕಾಗಿ ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ.” ಎಂದು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ, ಮಾಸಿಕ ಬಿಲ್ ಅನ್ನು EMIಗೆ ಪರಿವರ್ತಿಸುವ ಸೌಲಭ್ಯವಿದೆ. ಆರು ಅಥವಾ ಒಂಬತ್ತು ತಿಂಗಳ ಕಂತುಗಳಲ್ಲಿ ಪಾವತಿಸಬಹುದು. ಆ್ಯಪ್‌ನಲ್ಲಿಯೇ ವ್ಯವಹಾರ ಮಿತಿ ಹೊಂದಿಸುವುದು, ಕಾರ್ಡ್ ತಾತ್ಕಾಲಿಕವಾಗಿ ಬ್ಲಾಕ್ ಮಾಡುವುದು, PIN ರೀಸೆಟ್ ಮಾಡುವುದು ಸೇರಿದಂತೆ ಎಲ್ಲ ನಿಯಂತ್ರಣಗಳೂ ಲಭ್ಯ.
ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಇನ್ನೂ ಕಡಿಮೆ. ಸುಮಾರು 100 ಮಿಲಿಯನ್‌ಗೂ ಹೆಚ್ಚು ಕಾರ್ಡ್‌ಗಳಿವೆ ಆದರೆ UPI ಬಳಕೆದಾರರು ಕೋಟ್ಯಂತರ. ಈ ಅಂತರವನ್ನು ಕಡಿಮೆ ಮಾಡುವುದೇ ಫ್ಲೆಕ್ಸ್‌ನ ಗುರಿಯಾಗಿದೆ. ಗೂಗಲ್ ಪೇಯು ಈಗಾಗಲೇ ದೊಡ್ಡ UPI ಪ್ಲಾಟ್‌ಫಾರ್ಮ್ ಆಗಿರುವುದರಿಂದ ಹೆಚ್ಚಿನ ಜನರಿಗೆ ಕ್ರೆಡಿಟ್ ಪ್ರವೇಶ ಸುಲಭವಾಗಲಿದೆ.
ಈ ಕಾರ್ಡ್ ಈಗ ರೋಲ್‌ಔಟ್ ಆರಂಭವಾಗಿದೆ. ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗಲಿದೆ. ಗೂಗಲ್ ಪೇ ಆ್ಯಪ್‌ನಲ್ಲಿ ವೇಯ್ಟ್‌ಲಿಸ್ಟ್‌ಗೆ ಸೇರಿ ಅರ್ಜಿ ಸಲ್ಲಿಸಬಹುದು. ಭಾರತದ ಡಿಜಿಟಲ್ ಆರ್ಥಿಕತೆಗೆ ಇದು ಹೊಸ ಉತ್ತೇಜನ ನೀಡಲಿದೆ.





