ಬಿಗ್‌ಬಾಸ್ ಕನ್ನಡ ಸೀಸನ್ 12ರ ಈ ವಾರದ ಎಪಿಸೋಡ್ ರೋಚಕ ಹಂತಕ್ಕೆ ತಲುಪಿದೆ. ಇಂದಿನ ಎಪಿಸೋಡ್‌ನಲ್ಲಿ ಕಾಕ್ರೋಚ್ ಸುಧಿ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಕಳೆದ ವಾರ ವಿಶೇಷ ಅಧಿಕಾರ ಬಳಸಿ ಉಳಿದುಕೊಂಡಿದ್ದ ಸುಧಿ, ಈ ವಾರ ಕಡಿಮೆ ಮತಗಳ ಕಾರಣದಿಂದ ಎಲಿಮಿನೇಟ್ ಆಗಿದ್ದಾರೆ. ವೀಕ್ಷಕರ ಊಹೆಗಳು ಸತ್ಯವಾಗಿವೆ. ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರದ ಮೂಲಕ ಪ್ರಸಿದ್ಧರಾದ ಸುಧಿ, ಬಿಗ್‌ಬಾಸ್ ಮನೆಯಲ್ಲಿ ಕೂಡ ಆ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು. ಆದರೆ ಈಗ ಅವರ ಜರ್ನಿ ಅಂತ್ಯಗೊಂಡಿದೆ.
ಸೀಸನ್‌ನ ಆರಂಭದಿಂದಲೇ ಸುಧಿ ಗಮನ ಸೆಳೆದಿದ್ದರು. ದುನಿಯಾ ವಿಜಯ್ ಅಭಿನಯದ ‘ಸಲಗ’, ‘ಭೀಮ’ ಮುಂತಾದ ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಧಿ, ಬಿಗ್‌ಬಾಸ್‌ನಲ್ಲಿ ತಮ್ಮ ನಿಜವಾದ ವ್ಯಕ್ತಿತ್ವವನ್ನು ತೋರಿಸಿದರು. ಮನೆಯೊಳಗೆ ಆಟಗಳು, ಟಾಸ್ಕ್‌ಗಳು ಮತ್ತು ವಾದ-ವಿವಾದಗಳಲ್ಲಿ ಸಕ್ರಿಯರಾಗಿದ್ದರು. ವಿಶೇಷವಾಗಿ ಮಿನಿ ಫೈನಲ್ ನಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು.
ಅಶ್ವಿನಿ ಗೌಡ, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ ಮತ್ತು ಸುಧಿ ಈ ನಾಲ್ವರೇ ಫೈನಲಿಸ್ಟ್‌ಗಳಾಗಿದ್ದರು. ಮಿನಿ ಫೈನಲ್‌ಗೂ ಮುನ್ನ ಬಿಗ್‌ಬಾಸ್ ನೀಡಿದ ಸೀಕ್ರೆಟ್ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ಪೂರೈಸಿ ಸುಧಿ ಮೊದಲ ಫೈನಲ್ ವಿನ್ನರ್ ಆದರು. ಇದರಿಂದ ಅವರಿಗೆ ‘ಸೂಪರ್ ಪವರ್’ ದೊರಕಿತು. ಈ ಪವರ್ ಮೂಲಕ ಒಂದು ಬಾರಿಗೆ ನಾಮಿನೇಷನ್‌ನಿಂದ ಸ್ವತಃ ಇಮ್ಯೂನಿಟಿ ಪಡೆಯಬಹುದು ಅಥವಾ ಬೇರೊಬ್ಬರನ್ನು ಸೇವ್ ಮಾಡಬಹುದು.
ಕಳೆದ ವಾರ ಸುಧಿ ಈ ಸೂಪರ್ ಪವರ್ ಬಳಸಿ ಮನೆಯಲ್ಲೇ ಉಳಿದುಕೊಂಡರು.. ಮನೆಯ ಕ್ಯಾಪ್ಟನ್ ಮಾಳು ನಿಪನಾಳ ಅವರು ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಎರಡು ತಂಡಗಳಾಗಿ ವಿಭಜನೆಯಾಗಿ ನೀಡಲಾದ ಟಾಸ್ಕ್‌ಗಳಲ್ಲಿ ಸುಧಿ ಮೊದಲು ನಾಮಿನೇಟೆಡ್ ತಂಡದಲ್ಲಿದ್ದರು. ಬಚಾವ್ ಆಗುವ ಅವಕಾಶ ಸಿಕ್ಕಿತ್ತು, ಆದರೆ ಎರಡನೇ ಸುತ್ತಿನಲ್ಲಿ ತಂಡದ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. ಒಬ್ಬರನ್ನು ಸೇಫ್ ಮಾಡಿ, ಇನ್ನೊಬ್ಬರನ್ನು ನಾಮಿನೇಟ್ ಮಾಡಲು ವಿಫಲರಾದರು. ಕ್ಯಾಪ್ಟನ್ ಮಾಳು ಅವರಿಗೆ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ನೀಡಲಾಯಿತು. ಅಲ್ಲಿ ಸುಧಿಯ ಹೆಸರು ತೆಗೆದುಕೊಳ್ಳಲಾಯಿತು.
ಮನೆಯೊಳಗೆ ಸುಧಿ ಅನೇಕ ವಿವಾದಗಳಿಗೆ ಕಾರಣರಾಗಿದ್ದರು. ರಕ್ಷಿತಾ ಶೆಟ್ಟಿ ಅವರೊಂದಿಗೆ ಕ್ಲೀನಿಂಗ್ ವಿಚಾರದಲ್ಲಿ ತೀವ್ರ ವಾದ ನಡೆದಿತ್ತು. ಮಾತಿನ ಉದ್ದಕ್ಕೂ ಸುಧಿ, “ಅವಳ್ಯಾವಳೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ” ಎಂದು ಹೇಳಿದ್ದರು. ಇದು ದೊಡ್ಡ ವಿವಾದಕ್ಕೆ ಗ್ರಾಸವಾಯಿತು. ವೀಕೆಂಡ್ ಎಪಿಸೋಡ್‌ನಲ್ಲಿ ಹಾಸ್ಟ್ ಕಿಚ್ಚ ಸುದೀಪ್ ಅವರು ಸುಧಿಯನ್ನು ತರಾಟೆಗೆ ತೆಗೆದುಕೊಂಡರು. ಸುಧಿ ತಲೆತಗ್ಗಿಸಿ “ಕ್ಷಮಿಸಿ, ಕ್ಷಮಿಸಿ” ಎಂದು ಕ್ಷಮೆಯಾಚಿಸಿದರು.
ನಿನ್ನೆಯಷ್ಟೇ ಅಶ್ವಿನಿ ಗೌಡ ಮತ್ತು ರಕ್ಷಿತಾ ಸೇಫ್ ಆಗಿದ್ದರು. ರಘು, ರಿಷಾ, ಕಾಕ್ರೋಚ್ ಸುಧಿ ಮತ್ತು ಜಾಹ್ನವಿ ನಡುವೆ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿತ್ತು. ಕಡಿಮೆ ಮತಗಳು ಸುಧಿಯನ್ನು ಮನೆಯಿಂದ ಹೊರಹಾಕಿದವು.





