ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಮನೆ ಒಳಗಿನ ಸ್ಪರ್ಧಿಗಳ ಬಣ್ಣ ಬಣ್ಣದ ಆಟಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಆದರೆ ಈ ಬಾರಿ ಟಾಸ್ಕ್ ಸಮಯದಲ್ಲಿ ಸುಧಿ ಅವರು ಮಾಡಿದ ಕಳ್ಳಾಟ ಬಿಗ್ ಬಾಸ್‌ನ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಸಿಕ್ಕಿದೆ. ಇದರ ಪರಿಣಾಮವಾಗಿ ಬಿಗ್ ಬಾಸ್ ನೇರವಾಗಿ ಸುಧಿ ಅವರಿಗೆ ಎಚ್ಚರಿಕೆ ನೀಡಿದೆ.
ಮನೆಗೆ ಪ್ರವೇಶಿಸುವ ಮೊದಲು ಕಾಕ್ರೋಚ್ ಸುಧಿ ಖಡಕ್ ವಿಲನ್ ಇಮೇಜ್‌ನಿಂದ ಜನಮನ ಸೆಳೆದಿದ್ದರು. ಸಿನಿಮಾಗಳಲ್ಲಿ ಅವರ ನಟನೆಯು ಅವರಿಗೆ ಪ್ರಖ್ಯಾತಿ ತಂದಿತ್ತು. ಆದರೆ ಬಿಗ್ ಬಾಸ್ ಮನೆಯೊಳಗಿನ ಅವರ ಆಟದ ಪ್ರದರ್ಶನ ಉತ್ತಮವಾಗಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೆ “ಈ ಮನೆಯಲ್ಲಿ ಹೆಚ್ಚು ವಿಷಕಾರ ವ್ಯಕ್ತಿ ಯಾರು?” ಎಂಬ ಟಾಸ್ಕ್ ನೀಡಿದರು. ಸ್ಪರ್ಧಿಗಳು ತಮಗೆ ವಿಷಕಾರ ಎಂದು ಭಾಸವಾಗುವವರ ಹೆಸರನ್ನು ಹೇಳಬೇಕಿತ್ತು. ಆ ಹೆಸರಿನವರು ಪ್ರತೀ ಬಾರಿ ಒಂದು ಹಸಿ ಮೆಣಸಿನಕಾಯಿ ತಿನ್ನಬೇಕಾಗಿತ್ತು.
ಆದರೆ ಟಾಸ್ಕ್ ಮುಂದುವರಿಯುತ್ತಿದ್ದಂತೆ ಬಹುತೇಕ ಸ್ಪರ್ಧಿಗಳು ಕಾಕ್ರೋಚ್ ಸುಧಿ ಅವರ ಹೆಸರನ್ನೇ ಹೇಳಿದರು. ಒಂದರ ಹಿಂದೆ ಒಂದು ಮೆಣಸಿನಕಾಯಿ ತಿನ್ನಬೇಕಾದ ಪರಿಸ್ಥಿತಿ ಸುಧಿ ಅವರಿಗೆ ಬಂದಿತ್ತು. ಮೆಣಸಿನಕಾಯಿ ತಿನ್ನುತ್ತಿದ್ದಂತೆ ಅವರು ಯಾರಿಗೂ ಕಾಣದಂತೆ ಮೆಣಸಿನಕಾಯಿಯೊಳಗಿನ ಬೀಜಗಳನ್ನು ನೆಲಕ್ಕೆ ಹಾಕಲು ಶುರುಮಾಡಿದರು. ಈ ರೀತಿ ತಿನ್ನುವ ಪ್ರಯತ್ನ ಮಾಡಿದರು.
ಆದರೆ ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಸನ್ನಿವೇಸದಲ್ಲಿ ತಪ್ಪಿಸಿಕೊಳ್ಳುವುದು ಸುಲಭವಲ್ಲ! ಕ್ಯಾಮೆರಾ ಕಣ್ಣಿನಲ್ಲಿ ಸುಧಿಯ ಈ ಕಳ್ಳಾಟ ಸಂಪೂರ್ಣವಾಗಿ ಸೆರೆಯಾಯಿತು. ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್‌ನಿಂದ ಎಚ್ಚರಿಕೆಯ ಸೌಂಡು ಬಂತು. “ಕಾಕ್ರೋಚ್ ಸುಧಿ, ನೀವು ಮಾಡಿದ ತಪ್ಪು ನಮಗೆ ಸ್ಪಷ್ಟವಾಗಿ ಕಂಡಿದೆ. ಸರಿಯಾಗಿ ಟಾಸ್ಕ್ ಪೂರೈಸಿ.”
ಬಿಗ್ ಬಾಸ್‌ನ ಈ ಮಾತು ಕೇಳುತ್ತಿದ್ದಂತೆಯೇ ಸುಧಿ ಮುಖ ಬದಲಾಯಿಸಿಕೊಳ್ಳಬೇಕಾಯಿತು. ಹೊಸ ಮೆಣಸಿನಕಾಯಿ ನೀಡಲಾಯಿತು, ಈ ಬಾರಿ ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಇರಲಿಲ್ಲ. ಒಂದು ನಂತರ ಒಂದು ಮೆಣಸಿನಕಾಯಿ ತಿನ್ನುತ್ತಾ ಅವರು ಸುಸ್ತಾದರು.
ಈ ಟಾಸ್ಕ್ ವೇಳೆ ಅಶ್ವಿನಿ ಗೌಡ ಅವರ ಹೆಸರು ಕೂಡ “ವಿಷಕಾರಿ ಸ್ಪರ್ಧಿ” ಪಟ್ಟಿಯಲ್ಲಿ ಕೇಳಿಬಂದಿತ್ತು. ಅದೇ ವೇಳೆ ಜಾಹ್ನವಿ ಮತ್ತು ಅಶ್ವಿನಿ ನಡುವೆ ನಡೆದ ಜಟಾಪಟಿ ಮನೆಯ ವಾತಾವರಣವನ್ನು ಇನ್ನಷ್ಟು ಉದ್ವಿಗ್ನಗೊಳಿಸಿತ್ತು. ಅಶ್ವಿನಿ ಗೌಡ ಅವರು, “ನಾವಿಬ್ಬರು ಮೈಕ್ ಇಲ್ಲದೇ ಡ್ರೆಸಿಂಗ್ ರೂಮ್‌ನಲ್ಲಿ ಜಗಳ ಮಾಡೋ ಪ್ಲ್ಯಾನ್ ಮಾಡಿದ್ದೆವು” ಎಂದು ಬಾಯಿ ಬಿಟ್ಟ ಬಳಿಕ ಸೀಕ್ರೆಟ್ ಬಯಲಾಗಿತು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಕಾಕ್ರೋಚ್ ಸುಧಿಯ ವರ್ತನೆ ಕುರಿತು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು “ಇದು ಕೇವಲ ಮನರಂಜನೆಗಾಗಿ ಮಾಡಿದ ಸ್ಟಂಟ್” ಎಂದು ಹೇಳಿದರೆ, ಮತ್ತಿಬ್ಬರು “ಬಿಗ್ ಬಾಸ್ ಮುಂದೆ ಕಳ್ಳಾಟ ಮಾಡುವುದೇ ಮೂರ್ಖತನ” ಎಂದು ಟೀಕಿಸಿದ್ದಾರೆ.





