ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರ ಅಶ್ವಿನಿ ಗೌಡ ಅವರ ‘ಏಕವಚನ ಹೈಡ್ರಾಮಾ’ ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯನಲ್ಲಿ ಹಾಸ್ಟ್ ಕಿಚ್ಚ ಸುದೀಪ್ ಅವರು, ಅಶ್ವಿನಿ ಗೌಡ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲರ ಮುಂದೆಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶನಿವಾರದ “ವಾರದ ಕತೆ ಕಿಚ್ಚನ ಜೊತೆ” ಸಂಚಿಕೆಯ ಆರಂಭದಲ್ಲೇ ಸುದೀಪ್ ಅವರು ಪ್ರೇಕ್ಷಕರನ್ನು ಕೇಳುವಂತೆ ಮಾಡಿದ ಪ್ರಶ್ನೆ, “ಏಕವಚನ, ಏಕವಚನ, ಏಕವಚನ…?” ಇದು ಪ್ರೇಕ್ಷಕರ ಕಿವಿಗೂ ಅಂಟಿಕೊಂಡಿದೆ. ಕಳೆದ ವಾರ ಮನೆಯೊಳಗಿನ ಅನೇಕ ಸಂದರ್ಭಗಳಲ್ಲಿ ಅಶ್ವಿನಿ ಗೌಡ ಅವರ ಮಾತಿನ ಶೈಲಿ, ವರ್ತನೆ ಮತ್ತು ಅವರ ಪ್ರತಿಕ್ರಿಯೆಗಳು ಹಲವು ಬಾರಿ ಏಕವಚನ ಬಳಕೆಯಾಗಿತ್ತು. ಇದು ಬಿಗ್ ಬಾಸ್ ಮನೆಯಲ್ಲಿ ಚರ್ಚೆಯ ವಿಷಯವಾಗಿದೆ.
ಅಶ್ವಿನಿ ಗೌಡ ಈ ವಾರ ಮನೆಯ ಇಬ್ಬರು ಪುರುಷ ಸ್ಪರ್ಧಿಗಳೊಂದಿಗೆ ತೀವ್ರ ಜಗಳಕ್ಕೆ ಮುಂದಾಗಿದ್ದರು. ಮೊದಲು ಗಿಲ್ಲಿ ನಟನೊಂದಿಗೆ ವಾಗ್ವಾದ, ನಂತರ ರಘು ಜೊತೆ ಕಿತ್ತಾಟ ನಡೆದಿತ್ತು. ಎರಡೂ ಬಾರಿಯೂ ಅಶ್ವಿನಿ ಕಣ್ಣೀರಿಟ್ಟು, “ನನಗೆ ಇಲ್ಲಿ ಮಾತಿಗೆ ಯಾರೂ ಮರ್ಯಾದೆ ಕೊಡ್ತಾ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ತೀರಾ ಡ್ರಾಮಾಟಿಕ್ ಆಗಿ ಬಿಗ್‌ಬಾಸ್ ಬಳಿ “ಡೋರ್ ಓಪನ್ ಮಾಡಿ, ನಾನು ಹೋಗ್ತೀನಿ” ಎಂದು ಕೂಗಿದ್ದರು. ಬಿಗ್‌ಬಾಸ್ ಸುಮ್ಮನಿದ್ದಾಗ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದರು. ಇಡೀ ಮನೆಯಲ್ಲಿ “ಅಶ್ವಿನಿಗೆ ಮರ್ಯಾದೆ ಇಲ್ಲ” ಎಂಬ ಚರ್ಚೆಯೇ ನಡೆಯುತ್ತಿತ್ತು.
ಇದೆಲ್ಲವನ್ನೂ ಗಮನಿಸಿದ್ದ ಕಿಚ್ಚ ಸುದೀಪ್, ವೀಕೆಂಡ್ ಎಪಿಸೋಡ್‌ನಲ್ಲಿ ಅಶ್ವಿನಿಯನ್ನು ನೇರವಾಗಿ ಪ್ರಶ್ನಿಸಿದರು. “ಏಕವಚನ.. ಏಕವಚನ.. ಏಕವಚನ..” ಎಂದು ಮೂರು ಬಾರಿ ಪುನರುಚ್ಚರಿಸಿ ಆರಂಭಿಸಿದ ಸುದೀಪ್, “ನೀವು ಯಾರ ಮೇಲೆ ಗೌರವ ಇಲ್ಲ ಎಂದು ಹೇಳ್ತಿದ್ದೀರಿ? ಇಲ್ಲಿ ಯಾರು ನಿಮಗೆ ಅಪಮಾನ ಮಾಡಿದ್ದಾರೆ?” ಎಂದು ಕೇಳಿದರು.
ಅಶ್ವಿನಿ ತಕ್ಷಣ “ಒಬ್ಬ ವ್ಯಕ್ತಿಯಾಗಿ ಎಷ್ಟು ತೇಜೋವಧೆ ಮಾಡಬೇಕೋ ಅಷ್ಟು ಮಾಡುತ್ತಿದ್ದಾರೆ” ಎಂದು ರಾಗ ಎಳೆದರು. ಇದನ್ನು ಕೇಳಿ ಸುದೀಪ್, “ಅಶ್ವಿನಿ ಅವರೇ, ನಿಮಗೆ ಹೋಗಿ-ಬನ್ನಿ ಅನಿಸಿದ್ರೆ ಮೊದಲು ಪ್ರತಿಯೊಬ್ಬರಿಗೂ, ಚಿಕ್ಕ ಮಕ್ಕಳಿಗೂ ಸಹ ‘ಹೋಗಿ-ಬನ್ನಿ’ ಎನ್ನೋದನ್ನ ಕಲಿಯಿರಿ. ಇಲ್ಲಿ ಯಾರು ನಿಮಗೆ ಏಕವಚನದಲ್ಲಿ ಮಾತಾಡಿದ್ದಾರೆ? ಯಾವ ಹುಡುಗಿ ನಿಮ್ಮ ಮುಂದೆ ತಲೆ ತಗ್ಗಿಸಿ, ಮಾನ-ಮರ್ಯಾದೆ ಕೊಟ್ಟು ಕೂತಿದ್ದಾರೆ?” ಎಂದು ಗುಡುಗಿದರು.
ನಂತರ ಮನೆಯ ಎಲ್ಲ ಹೆಣ್ಣು ಸ್ಪರ್ಧಿಗಳನ್ನು ಉದ್ದೇಶಿಸಿ, “ಕೈ ಮೇಲೆತ್ತಿ” ಎಂದು ಹೇಳಿದ ಸುದೀಪ್, ಬಹುತೇಕ ಎಲ್ಲ ಹೆಣ್ಣು ಸ್ಪರ್ಧಿಗಳು ಕೈ ಎತ್ತಿದ್ದನ್ನು ನೋಡಿ, “ಇವರ್ಯಾರು ನಿಮ್ಮ ಮೇಲೆ ಏಕವಚನದಲ್ಲಿ ಮಾತಾಡಿದ್ದಾರೆ? ಇವರ್ಯಾರು ನಿಮಗಿಂತ ಕಡಿಮೆ ಗೌರವ ಕೊಟ್ಟಿದ್ದಾರೆ?” ಎಂದು ಪ್ರಶ್ನಿಸಿದರು.
ಕೊನೆಯಲ್ಲಿ ಸುದೀಪ್ ಅವರು, “ಅಶ್ವಿನಿ ಅವರೇ, ಈ ಮನೆಯಲ್ಲಿ ವುಮನ್ ಕಾರ್ಡ್ ಆಡಬೇಡಿ. ನಿಮ್ಮ ವರ್ತನೆಯೇ ಇತರ ಹೆಣ್ಣು ಸ್ಪರ್ಧಿಗಳಿಗೆ ಅವಮಾನ ಮಾಡುತ್ತಿದೆ” ಎಂದು ಎಚ್ಚರಿಕೆ ನೀಡಿದರು.
ಈ ತರಾಟೆಯ ನಂತರ ಅಶ್ವಿನಿ ಗೌಡ ಸಂಪೂರ್ಣ ಮೌನಕ್ಕೆ ಒಳಗಾದರು. ಮನೆಯ ಇತರ ಸ್ಪರ್ಧಿಗಳು ಕೂಡ ಸುದೀಪ್ ಅವರ ಮಾತುಗಳಿಗೆ ತಲೆತಗ್ಗಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಲಿಪ್ ವೈರಲ್ ಆಗುತ್ತಿದೆ.





