ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಈಗ ಪ್ರೇಕ್ಷಕರ ಹೃದಯದಲ್ಲಿ ದೊಡ್ಡ ಸ್ಥಾನ ಪಡೆದುಕೊಂಡಿದೆ. ಪ್ರತಿ ವಾರಾಂತ್ಯದ ಎಪಿಸೋಡ್‌ಗಳು ಜನರನ್ನು ಕುಶಿಗೊಳಿಸುತ್ತವೆ. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ಗೆ ಇಡೀ ರಾಜ್ಯವೇ ಕಾಯುತ್ತಿದೆ. ದೊಡ್ಮನೆಯೊಳಗೆ ನಡೆಯುತ್ತಿರುವ ಘಟನೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಮುಖ್ಯವಾಗಿ ‘ದೆವ್ವದ ಮ್ಯಾಟರ್’ ಎಂಬ ವಿಷಯವು ವಾರಪೂರ್ತಿ ಮನೆಯಲ್ಲಿ ಸೌಂಡ್ ಮಾಡಿತ್ತು. ಈ ವಿಷಯದಲ್ಲಿ ಸ್ಪರ್ಧಿಗಳ ನಡುವಿನ ಘರ್ಷಣೆಗಳು, ಆರೋಪಗಳು ಮತ್ತು ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರನ್ನು ಬೆರಗುಗೊಳಿಸಿವೆ.
ತನ್ನಪಾಡಿಗೆ ಇದ್ದ ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಗೌಡ ಮತ್ತು ಜಾನ್ವಿ ಈ ದೆವ್ವದ ಮ್ಯಾಟರ್‌ನಲ್ಲಿ ಎಳೆದುಕೊಂಡು ಬಂದರು. ರಕ್ಷಿತಾ ಅವರು ಮೊದಲೇ ತಮ್ಮದೇ ಆದ ಆಟದಲ್ಲಿ ತೊಡಗಿದ್ದರು. ಆದರೆ ಅಶ್ವಿನಿ ಮತ್ತು ಜಾನ್ವಿ ಅವರು ಈ ಮ್ಯಾಟರ್‌ಗೆ ರಕ್ಷಿತಾ ಅವರನ್ನು ಗುರಿಯಾಗಿಸಿದ್ದರು. ಇದು ಕೇವಲ ಆಟದ ಭಾಗವಲ್ಲ, ಬದಲಿಗೆ ವೈಯಕ್ತಿಕ ಅವಮಾನಕ್ಕೆ ಕಾರಣವಾಯಿತು. ಅಶ್ವಿನಿ ಮತ್ತು ಜಾನ್ವಿ ಅವರು ಗೆಜ್ಜೆ ಶಬ್ದ ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಿದರು. ರಕ್ಷಿತಾ ಅವರು ನಾಗದಂತೆ ಆಡುತ್ತಾರೆ ಎಂಬ ಸುಳ್ಳು ಆರೋಪಗಳನ್ನು ಮಾಡಿದರು. ಈ ಆರೋಪಗಳು ವಾರಪೂರ್ತಿ ಮನೆಯೊಳಗೆ ಸದ್ದು ಮಾಡಿತ್ತು. ರಕ್ಷಿತಾ ಅವರಿಗೆ ಪದೇ ಪದೇ ಕಿರುಕುಳ ನೀಡುವ ಪ್ರಯತ್ನಗಳು ನಡೆದವು.
ಅಷ್ಟೇ ಅಲ್ಲದೆ, ಅಶ್ವಿನಿ ಮತ್ತು ಜಾನ್ವಿ ಅವರು ರಕ್ಷಿತಾ ಅವರನ್ನು ‘ಈಡಿಯೆಟ್’, ‘ಮುಚ್ಕೊಂಡು ಮಲ್ಕೋ’ ಎಂಬಂತಹ ಅವಮಾನಕರ ಪದಗಳನ್ನು ಬಳಸಿದರು. ರಕ್ಷಿತಾ ಅವರು ತಮ್ಮ ಗೌರವವನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ತಂದಿಟ್ಟರು. ಈ ಎಲ್ಲ ವಿಚಾರಗಳು ಹೋಸ್ಟ್ ಕಿಚ್ಚ ಸುದೀಪ್ ಅವರನ್ನು ಕೆರಳಿಸಿದವು. ಸುದೀಪ್ ಅವರು ಯಾವಾಗಲೂ ನ್ಯಾಯದ ಪರವಾಗಿ ನಿಲ್ಲುತ್ತಾರೆ. ಈ ಬಾರಿ ಅವರು ಕೆಂಡದಂತೆ ಕೋಪಗೊಂಡರು.
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಸುದೀಪ್ ಅವರ ಖಡಕ್ ಮಾತುಗಳು ಪ್ರೇಕ್ಷಕರನ್ನು ಉತ್ಸುಕರನ್ನಾಗಿ ಮಾಡಿವೆ. “ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾವು ಕೈ ತಟ್ಟಿ ಚಪ್ಪಾಳೆಯನ್ನು ಸಹ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನು ಮರೆತು ಬಾಯಿಗೆ ಬಂದ ಹಾಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ದಿ ಹೇಳಬೇಕಾಗುತ್ತದೆ” ಎಂದು ಸುದೀಪ್ ಹೇಳಿದ್ದಾರೆ. ಇದು ಸ್ಪಷ್ಟವಾಗಿ ಅಶ್ವಿನಿ ಮತ್ತು ಜಾನ್ವಿ ಅವರ ಕಡೆಗೆ ಸೂಚಿಸುತ್ತದೆ. ಅವರ ತಪ್ಪುಗಳನ್ನು ಎತ್ತಿ ಹಿಡಿದು, ನ್ಯಾಯದ ಮಾತುಗಳನ್ನು ಆಡಿದ್ದಾರೆ.
ಪ್ರೋಮೋದಲ್ಲಿ ಸುದೀಪ್ ಅವರು ಅಶ್ವಿನಿ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ್ದಾರೆ. “ಅಶ್ವಿನಿ ಅವರೆ ನಿಮ್ಮ ಸ್ಟೇಟ್ಮೆಂಟ್ ಹೇಳ್ತಾ ಹೋಗ್ತೀನಿ, ಇದನ್ನ ನೋಡಿದ್ರೆ ಹೇಳಬಹುದು ಇಲ್ಲಿಂದ ಬಂದಿದ್ಯಾ ನೀನು.. ಕಾರ್ಟೂನ್.. ಈ ಯಮ್ಮ ಅಂದಾಕ್ಷಣ ನೀವು ನನ್ನನ್ನ ಯಮ್ಮ.. ಗಿಮ್ಮ ಅಂತ ಕರೀಬೇಡಿ ನನ್ಗೆ ಒಂದು ಹೆಸರು ಇದೆ ಅಂತ ಹೇಳ್ತೀರ.. ಆದ್ರೆ ನೀವು ಅವರನ್ನು ಈಡಿಯೆಟ್ ಅಂತೀರಿ. ತಮಾಷೆ ಮಾಡ್ಕೊಂಡು ನಿಮ್ಮ ಪರ್ಸನಾಲಿಟಿಯನ್ನು ಕೊಲೆ ಮಾಡ್ತಾ ಇದ್ದೀರಾ.. ಒಬ್ಬರ ಮರಿಯಾದೆ.. ಒಬ್ಬರ ಅಸ್ತಿತ್ವ.. ಒಬ್ಬನ ಗೌರವ. ಇನ್ನೊಬ್ಬನ ಆಸ್ತಿ ಆಟಸಾಮಾನು ಆಗಬಾರದು.. ಯಾರ ಅಪ್ಪನ ಆಸ್ತಿನೂ ಅಲ್ಲ ಅದು” ಎಂದು ಹೇಳಿದ್ದಾರೆ. ಇದು ಸ್ಪರ್ಧಿಗಳಿಗೆ ದೊಡ್ಡ ಪಾಠವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆಟದ ಹೆಸರಲ್ಲಿ ವೈಯಕ್ತಿಕ ದಾಳಿಗಳು ನಡೆಯಬಾರದು ಎಂಬ ಸಂದೇಶವನ್ನು ಸುದೀಪ್ ಸ್ಪಷ್ಟಪಡಿಸಿದ್ದಾರೆ.





