ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಪ್ರತಿ ವಾರವೂ ಹೊಸ ಡ್ರಾಮಾ, ಹೊಸ ತಿರುವುಗಳು ನಡೆಯುತ್ತಲೇ ಇದ್ದು. ಈ ಬಾರಿ ಕ್ಯಾಪ್ಟನ್ ಮಾಳು ಅವರ ವಿಶೇಷ ಅಧಿಕಾರದಿಂದ ಆರು ಸ್ಪರ್ಧಿಗಳನ್ನು ನೇರ ನಾಮಿನೇಷನ್‌ಗೆ ಕಳುಹಿಸಿದ್ದಾರೆ. ಆ ಪಟ್ಟಿಯಲ್ಲಿ ಅಶ್ವಿನಿ ಗೌಡ, ಸುಧೀ, ರಕ್ಷಿತಾ ಶೆಟ್ಟಿ, ಧ್ರುವಂತ್, ರಾಶಿಕಾ ಶೆಟ್ಟಿ ಮತ್ತು ಜಾಹ್ನವಿ ಇದ್ದಾರೆ. ಈ ಆರು ಮಂದಿಯೂ ಈ ವಾರ ಮನೆಯಿಂದ ಹೊರಹೋಗುವ ಅಪಾಯದಲ್ಲಿದ್ದಾರೆ.
ನಾಮಿನೇಷನ್ ಘೋಷಣೆಯೇ ಆಯ್ತು ಎನ್ನುವಷ್ಟರಲ್ಲಿ ಬಿಗ್‌ಬಾಸ್ ಮತ್ತೊಂದು ಟಾಸ್ಕ್ ಘೋಷಿಸಿದರು. ಮನೆಯನ್ನು ಎರಡು ತಂಡಗಳಾಗಿ ವಿಭಜಿಸಲಾಯಿತು. ಒಂದು ತಂಡ ನಾಮಿನೇಟ್ ಆಗಿರುವವರು ಒಂದು, ಮತ್ತೊಂದು ಸೇಫ್ ಆಗಿರುವವರು. ಈ ಎರಡೂ ತಂಡಗಳ ನಡುವೆ ವಿಶೇಷ ಚಟುವಟಿಕೆ ನಡೆಯಿತು. ಆ ಟಾಸ್ಕ್‌ನಲ್ಲಿ ನಾಮಿನೇಟ್ ತಂಡವೇ ಗೆಲುವು ಸಾಧಿಸಿತು.
ಗೆಲುವಿನ ರಿವಾರ್ಡ್ ಏನೆಂದರೆ ನಾಮಿನೇಟ್ ತಂಡದ ಒಬ್ಬ ಸದಸ್ಯನನ್ನು ಸೇಫ್ ಮಾಡಬೇಕು, ಆದರೆ ಸೇಫ್ ತಂಡದಿಂದ ಒಬ್ಬರನ್ನು ನಾಮಿನೇಷನ್‌ಗೆ ತಳ್ಳಬೇಕು. ಈ ಒಂದು ನಿರ್ಧಾರಕ್ಕೆ ನಾಮಿನೇಟ್ ತಂಡದಲ್ಲಿ ಭಾರೀ ಗೊಂದಲ, ಜಗಳ, ಆಕ್ರೋಶ ಶುರುವಾಯಿತು.
ತಂಡದಲ್ಲಿ ಎಲ್ಲರೂ ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಒತ್ತಡ ಹಾಕತೊಡಗಿದರು. ಆದರೆ ರಕ್ಷಿತಾ ಶೆಟ್ಟಿ ಮಾತ್ರ ದೃಢವಾಗಿ ನಿಂತರು. “ಕಾಕ್ರೋಚ್ ಸುಧಿ ಸೇಫ್ ಆಗಬೇಕು” ಎಂದು ಒತ್ತಾಯ ಮಾಡಿದರು. ರಕ್ಷಿತಾ ಅವರ ಈ ನಿಲುವಿಗೆ ತಂಡದಲ್ಲಿ ಯಾರೂ ವಿರೋಧಿಸಲಿಲ್ಲ. ಆದರೆ ರಾಶಿಕಾ ಶೆಟ್ಟಿ ಇದನ್ನು ಸಹಿಸಲಿಲ್ಲ.
“ಪ್ರತಿ ವಾರ ನಾನು ನಾಮಿನೇಟ್ ಆಗ್ತಿದ್ದೀನಿ. ಈಗಾಗಲೇ ನಾಲ್ಕು ವಾರಗಳಿಂದ ನಾನು ಅಪಾಯದಲ್ಲಿದ್ದೇನೆ. ಈ ಬಾರಿ ನನಗೆ ಅವಕಾಶ ಕೊಡಿ” ಎಂದು ರಾಶಿಕಾ ಕಣ್ಣೀರಿಟ್ಟು ಮನವಿ ಮಾಡಿದರು. ಆದರೆ ರಕ್ಷಿತಾ ಒಪ್ಪಲಿಲ್ಲ. ಒಂಟಿ ಹಿಡಿತದಿಂದ ಸುಧಿಯನ್ನೇ ಸೇಫ್ ಮಾಡಬೇಕೆಂದು ಒತ್ತಾಯ ಮಾಡಿದರು.
ಇದರಿಂದ ರಾಶಿಕಾ , “ನೀನು ವಿಷಕಾರಿ! ನಿನ್ನಂತೆ ಒಬ್ಬಳ ಮೇಲೆ ಈ ನಿರ್ಧಾರ ಹಾಕೋಕೆ ನಾನು ಬಿಡಲ್ಲ” ಎಂದು ಕೂಗಿದರು. ರಕ್ಷಿತಾ ಕೂಡ ಸುಮ್ಮನಿರಲಿಲ್ಲ. “ನೀನು ಮಾತನಾಡುವ ರೀತಿಯೇ ಸರಿಯಿಲ್ಲ. ಇಷ್ಟೊತ್ತು ಯಾರೂ ನಿನಗೆ ಏನೂ ಹೇಳಲಿಲ್ಲ, ಆದರೆ ನಿನ್ನ ನಡವಳಿಕೆ ಸರಿಯಿಲ್ಲ” ಎಂದು ಪ್ರತ್ಯುತ್ತರ ನೀಡಿದರು.
ಇಬ್ಬರ ನಡುವೆ ಗಲಾಟೆ ಇಶುರುವಾಗಿ, ಉಳಿದ ಸ್ಪರ್ಧಿಗಳು ಶಾಂತಗೊಳಿಸಲು ಮಧ್ಯಪ್ರವೇಶಿಸಬೇಕಾಯಿತು. ರಾಶಿಕಾ ಅವರ ಕಣ್ಣೀರು, ರಕ್ಷಿತಾ ಅವರ ದೃಢ ನಿಲುವು ಎಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜಗಳದ ನಡುವೆಯೇ ಸುಧಿಯನ್ನು ಸೇಫ್ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿತೇ? ಅಥವಾ ರಾಶಿಕಾ ಅವರ ಆಕ್ರೋಶಕ್ಕೆ ಬಿಗ್‌ಬಾಸ್ ಮನೆಯಲ್ಲಿ ಬೇರೆ ತಿರುವು ಬಂತೇ?
ಅಂತಿಮವಾಗಿ ಸೇಫ್ ಆದ ಸದಸ್ಯ ಸೇಫ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ನಾಮಿನೇಟ್ ಆದ ಸದಸ್ಯ ನಾಮಿನೇಟ್ ತಂಡದೊಂದಿಗೆ ಹೋಗಿ, ಈ ವಾರ ಎಲಿಮಿನೇಷನ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಡ್ರಾಮಾದ ನಂತರ ಯಾರು ಸೇಫ್, ಯಾರು ಅಪಾಯದಲ್ಲಿ ಎಂಬುದು ಇವತ್ತಿನ ಸಂಚಿಕೆಯಲ್ಲಿ ಬಯಲಾಗಲಿದೆ.





