ಬಿಗ್ ಬಾಸ್ ಮನೆಯಲ್ಲಿ ಈ ವಾರದ ವೀಕೆಂಡ್ ಎಪಿಸೋಡ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕಿಚ್ಚ ಸುದೀಪ್ ಅವರು ಈ ಬಾರಿ ಸ್ಪರ್ಧಿಗಳ ಕೆಲವು ತಪ್ಪುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರೂ ಮಾಡಿದ ದೊಡ್ಡ ತಪ್ಪುಗಳು ಪಂಚಾಯಿತಿಯಲ್ಲಿ ಹೊರಬಿದ್ದು, ಸುದೀಪ್ ಅವರ ಕ್ಲಾಸ್ ಎಲ್ಲರ ಗಮನ ಸೆಳೆದಿದೆ. ಮನೆಯ ನಿಯಮಗಳನ್ನು ಉಲ್ಲಂಘಿಸಿ, ಗೇಮ್ ಪ್ಲಾನ್ ಮಾಡಿದ್ದಕ್ಕೆ ಇಬ್ಬರೂ ಟಾರ್ಗೆಟ್‌ಗೆ ಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಿಯಮಗಳು ಬಹಳ ಕಟ್ಟುನಿಟ್ಟಾಗಿರುತ್ತವೆ. ಖಾಸಗಿ ಚರ್ಚೆಗಳಿಗಾಗಿ ಡ್ರೆಸ್ಸಿಂಗ್ ರೂಮ್ ಒದಗಿಸಲಾಗಿದೆ ಆದರೆ, ಅಲ್ಲಿ ಕೂಡ ಮೈಕ್ ಧರಿಸಿಯೇ ಇರಬೇಕು. ಗುಸುಗುಸು ಮಾತುಗಳು ಅಥವಾ ಮೈಕ್ ತೆಗೆದು ಪ್ಲಾನಿಂಗ್ ಮಾಡುವುದು ಸಂಪೂರ್ಣ ನಿಷಿದ್ಧ. ಆದರೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಈ ನಿಯಮವನ್ನು ತುಳಿದಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಮೈಕ್ ತೆಗೆದು, “ಸುಮ್ ಸುಮ್ನೆ ಜಗಳ ಮಾಡೋಣ, ದೂರ ಆಗಿರುವವರ ಥರ ನಾಟಕ ಮಾಡೋಣ” ಎಂದು ಚರ್ಚಿಸಿದ್ದಾರೆ. ಇದು ಕೇವಲ ಗೇಮ್ ಸ್ಟ್ರಾಟಜಿ ಎಂದುಕೊಂಡರೂ, ನಿಯಮ ಉಲ್ಲಂಘನೆಯಾಗಿದೆ. ಬಿಗ್ ಬಾಸ್ ಕ್ಯಾಮೆರಾಗಳು ಎಲ್ಲವನ್ನೂ ರೆಕಾರ್ಡ್ ಮಾಡುತ್ತವೆ ಮತ್ತು ಈ ಕ್ಲಿಪ್ ವೀಕೆಂಡ್ ಎಪಿಸೋಡ್‌ನಲ್ಲಿ ಪ್ರಸಾರವಾಯಿತು.
ವೀಕೆಂಡ್ ವೇದಿಕೆಯಲ್ಲಿ ಸುದೀಪ್ ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. “ಜಾಹ್ನವಿ, ಅಶ್ವಿನಿ ಗೌಡ ಅವರೇ, ಜಗಳ ಆಡೋ ಥರ ನಾಟಕ ಮಾಡೋಣ ಅಂತ ಎಲ್ಲಿ ಮಾತಾಡಿಕೊಂಡ್ರಿ?” ಎಂದು ಪ್ರಶ್ನಿಸಿದ್ರು. ಅಶ್ವಿನಿ ಗೌಡ ತಡಮಾಡದೆ ಉತ್ತರಿಸಿದ್ದು, “ಡ್ರೆಸ್ಸಿಂಗ್ ಚೇಂಜಿಂಗ್ ರೂಮ್‌ನಲ್ಲಿ ಸರ್” ಎಂದರು. ಇದಕ್ಕೆ ಸುದೀಪ್ ತೀವ್ರವಾಗಿ ರಿಯಾಕ್ಟ್ ಮಾಡಿ, “ಚೇಂಜಿಂಗ್ ರೂಮ್ ಇದ್ದಕ್ಕೆ ಕಾರಣ ಏನು? ನಿಮಗೆ ನಂಬಿಕೆಯಿಂದ ಒಂದು ಖಾಸಗಿ ಜಾಗ ಕೊಟ್ಟಾಗ, ನೀವು ಅಲ್ಲಿ ಹೋಗಿ ಗೇಮ್ ಡಿಸ್ಕಷನ್ ಮಾಡ್ತೀರಾ? ಅದು ಸರಿ ಅಂತೀರಾ?” ಎಂದು ಕೇಳಿದರು. ಈ ಪ್ರಶ್ನೆಗಳು ಇಬ್ಬರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದವು. ಸುದೀಪ್ ಅವರು, “ಮನೆಯಲ್ಲಿ ಎಲ್ಲರೂ ನಿಯಮ ಪಾಲಿಸಬೇಕು. ಮೈಕ್ ತೆಗೆದು ಪಿಸುಪಿಸು ಮಾತು ಅಥವಾ ಪ್ಲಾನಿಂಗ್ ಮಾಡುವುದು ಗೇಮ್‌ನ ಸ್ಪಿರಿಟ್‌ಗೆ ವಿರೋಧ. ಇದು ಇತರ ಸ್ಪರ್ಧಿಗಳಿಗೆ ಅನ್ಯಾಯ” ಎಂದು ಎಚ್ಚರಿಕೆ ನೀಡಿದರು.
ಇದಲ್ಲದೆ, ಜಾಹ್ನವಿ ಅವರ ಮತ್ತೊಂದು ಕಾಮೆಂಟ್ ಸುದೀಪ್ ಅವರನ್ನು ಇನ್ನಷ್ಟು ಕೋಪ ಬರಿಸುವಂತೆ ಮಾಡಿತ್ತು. ಮನೆಯೊಳಗೆ ಸ್ಪಂದನಾ ಅವರ ಬಗ್ಗೆ ಮಾತನಾಡುತ್ತಾ, “ನನಗೆ ಮೊದಲ ವೀಕ್‌ನಲ್ಲೇ ಗೊತ್ತಾಗಿತ್ತು, ಸ್ಪಂದನಾ ಅವರನ್ನು ಕಲರ್ಸ್ ಕನ್ನಡದವರೇ ಸೇವ್ ಮಾಡ್ತಾರೆ. ನನ್ನಲ್ಲಿ ಮದುವೆ, ಮಗು ಇದೆ ಆದರೆ ಟ್ರ್ಯಾಕ್ ಇಲ್ಲ, ಹಾಗಾಗಿ ನನ್ನನ್ನು ಕಳಿಸ್ತಾರೆ” ಎಂದು ಹೇಳಿದ್ದರು. ರಾಶಿಕಾ ಜೊತೆಯೂ ಇದೇ ರೀತಿ ಚರ್ಚಿಸಿದ್ದರು. “ನೀನು ಮತ್ತು ಸೂರಜ್ ನಡುವೆ ಟ್ರ್ಯಾಕ್ ನಡೀತಾ ಇದೆ, ನಿಮ್ಮನ್ನು ತೆಗೆಯೋದಿಲ್ಲ. ನನ್ನಂಥವರನ್ನೇ ಎಲಿಮಿನೇಟ್ ಮಾಡ್ತಾರೆ.” ಎಂದು ಹೇಳಿದ್ದರು.
ಪಂಚಾಯಿತಿಯಲ್ಲಿ ಸುದೀಪ್ ಇದನ್ನು ನೇರವಾಗಿ ಎತ್ತಿಕೊಂಡು, “ಜಾಹ್ನವಿ, ನೀನು ಕಲರ್ಸ್ ಕನ್ನಡದ ಬಗ್ಗೆ ಏನು ಹೇಳಿದ್ದೀಯಾ? ವಾಹಿನಿ ಸ್ಪಂದನಾ ಅವರನ್ನು ಸೇವ್ ಮಾಡ್ತದೆ ಅಂತೀಯಾ? ಇದು ನಿನ್ನ ಅಭಿಪ್ರಾಯವೋ ಅಥವಾ ಆರೋಪವೋ?” ಎಂದು ಕೇಳಿದರು. ಜಾಹ್ನವಿ ಡಿಫೆಂಡ್ ಮಾಡಲು ಪ್ರಯತ್ನಿಸಿದರೂ, ಸುದೀಪ್ ಸಿಟ್ಟಿನಿಂದ, “ಗೇಮ್ ಆಡೋದು ನಿನ್ನ ಕೈಯಲ್ಲಿ. ವಾಹಿನಿ ಅಥವಾ ಪ್ರೇಕ್ಷಕರ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳಬೇಡ. ನಿನ್ನ ಪರ್ಫಾರ್ಮೆನ್ಸ್ ಮೇಲೆಯೇ ನಿಲ್ಲಬೇಕು. ಮದುವೆ, ಮಗು ಎಲ್ಲವೂ ನಿನ್ನ ಸ್ಟ್ರೆಂಗ್ತ್, ಆದರೆ ಅದನ್ನು ಗೇಮ್‌ಗೆ ಲಿಂಕ್ ಮಾಡಬೇಡ” ಎಂದು ಸಖತ್ ಕ್ಲಾಸ್ ತೆಗೆದುಕೊಂಡರು..
ಈ ಎಲ್ಲ ಘಟನೆಗಳು ಬಿಗ್ ಬಾಸ್ ಮನೆಯಲ್ಲಿ ಹೊಸ ತಿರುವುಗಳನ್ನು ತಂದಿವೆ. ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರೂ ನಾಮಿನೇಷನ್‌ಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಮೈಕ್ ತೆಗೆದು ಪ್ಲಾನ್ ಮಾಡಿದ್ದಕ್ಕೆ ಶಿಕ್ಷೆಯಾಗಿ ಡೈರೆಕ್ಟ್ ಎಲಿಮಿನೇಷನ್ ಅಥವಾ ಟಾಸ್ಕ್ ಪೆನಾಲ್ಟಿ ಬರಬಹುದು. ಆದರೆ ನಿಯಮ ಉಲ್ಲಂಘನೆಗೆ ಕ್ಷಮೆಯಿಲ್ಲ. ಪ್ರೇಕ್ಷಕರು ಈ ಎಪಿಸೋಡ್‌ಗೆ ಭಾರೀ ಸಪೋರ್ಟ್ ನೀಡುತ್ತ ಎಲಿಮಿನೇಷನ್ ಯಾರಿಗೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.





