ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಡ್ರಾಮಾ ಮತ್ತು ಘರ್ಷಣೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಸೀಸನ್ ನಲ್ಲಿ ಕಿಚ್ಚ ಸುದೀಪ್ ಹೋಸ್ಟ್ ಆಗಿ ಮರಳಿ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿಗಳು ಮನೆಯನ್ನು ರಣರಂಗವನ್ನಾಗಿ ಮಾರ್ಪಡಿಸಿದ್ದಾರೆ. ವಿಶೇಷವಾಗಿ ಜಾನ್ವಿ ಮತ್ತು ರಿಷಾ ಗೌಡರ ನಡುವಿನ ಮಾತಿನ ಚಕಮಕಿ ಎಲ್ಲರ ಗಮನ ಸೆಳೆದಿದೆ. ಇದರ ಜೊತೆಗೆ ಕಾಕ್ರೋಚ್ ಸುಧಿ ಮತ್ತು ರಕ್ಷಿತಾ ಶೆಟ್ಟಿ ಸಂಬಂಧಿಸಿದ ಘಟನೆಯೂ ಸದ್ದು ಮಾಡುತ್ತಿದೆ.
ಮೊದಲಿಗೆ ಜಾನ್ವಿ ಮತ್ತು ರಿಷಾ ನಡುವಿನ ಘರ್ಷಣೆಯ ಬಗ್ಗೆ ಮಾತನಾಡೋಣ. ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಿಷಾ ಗೌಡ, ಗಿಲ್ಲಿ ನಟ ಮತ್ತು ಚಂದ್ರಪ್ರಭ ಜೊತೆ ತುಂಬಾ ಆತ್ಮೀಯತೆಯಿಂದ ಕಾಣಿಸಿಕೊಳ್ಳುತ್ತಿದ್ದರು. ಇದು ಜಾನ್ವಿ ಮತ್ತು ಅಶ್ವಿನಿ ಅವರಿಗೆ ಸಹಿಸಲು ಆಗುತ್ತಿರಲಿಲ್ಲ. ಮೊನ್ನೆ ವಾರದ ಮಧ್ಯೆ ಜಾನ್ವಿ, ಅಶ್ವಿನಿ ಜೊತೆ ಮಾತನಾಡುತ್ತಾ, “ನಿನ್ನೆ ಮೊನ್ನೆ ಬಂದವರೆಲ್ಲ ಕ್ಯಾಪ್ಟನ್ ಆದರು” ಎಂದು ರಘು ಬಗ್ಗೆ ಕಾಮೆಂಟ್ ಮಾಡಿದ್ದರು.
ಇಂದಿನ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್, ಸ್ಪರ್ಧಿಗಳಿಗೆ “ನಿಮ್ಮ ದೃಷ್ಟಿಕೋನದಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೇಲೆ ಅಭಿಪ್ರಾಯ ತಿಳಿಸಿ” ಎಂದು ಕೇಳಿದರು. ಅಶ್ವಿನಿ ಮೊದಲು ಪ್ರತಿಕ್ರಿಯಿಸಿ, “ರಿಷಾ ಬಗ್ಗೆ ನನಗೆ ತುಂಬಾ ಪಾಸಿಟಿವ್ ಅನಿಸಲಿಲ್ಲ” ಎಂದರು. ಬಳಿಕ ಜಾನ್ವಿ, “ರಿಷಾ ಅವರು ಚಂದ್ರಪ್ರಭ ಜೊತೆಗೆ ಇರಬಹುದು ಅಥವಾ ಗಿಲ್ಲಿ ಜೊತೆಗೆ ಇರಬಹುದು, ಅವರು ಫನ್ ಆಗೇ ಇರ್ತಾರೆ. ಆದ್ರೆ ನಮಗೆ ಅದು ಎಲ್ಲೊ ಒಂದುಕಡೆ ಸಣ್ಣದಾಗಿ ಮುಜುಗರ ಆಗುತ್ತೆ” ಎಂಬ ಸ್ಟೇಟ್ಮೆಂಟ್ ಕೊಟ್ಟರು.
ಈ ಹೇಳಿಕೆಗೆ ಕೆರಳಿ ಕೆಂಡವಾದ ರಿಷಾ, ತಕ್ಷಣ ಪ್ರತಿಕ್ರಿಯಿಸಿದರು. “ನೀವು ಆಡಿದಾಗ ಆಟ ಚೆನ್ನಾಗಿರುತ್ತೆ.. ನಾವು ಆಡಿದ್ರೆ ಅದು ಅಸಹ್ಯ ಥೂ ಆಗುತ್ತಾ?” ಎಂದು ಕೇಳಿದರು. ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ರಿಷಾ ಮತ್ತಷ್ಟು ಆಕ್ರಮಣಕಾರಿಯಾಗಿ, “ನನ್ನ ತಾಕತ್ ಏನು ಅಂತ ತೋರಿಸ್ತೇನೆ” ಎಂದು ಹೇಳಿದರು. ಕಿಚ್ಚ ಸುದೀಪ್ ಇದನ್ನೆಲ್ಲ ಗಮನಿಸುತ್ತಿದ್ದರು. ಅವರು ಮಧ್ಯಸ್ಥಿಕೆ ಮಾಡಿ, ಎಲ್ಲರನ್ನೂ ಶಾಂತಗೊಳಿಸಲು ಪ್ರಯತ್ನಿಸಿದರು.
ಸುದೀಪ್ ಅವರು ಜಾನ್ವಿ ಮತ್ತು ಅಶ್ವಿನಿ ಅವರ ಅಭಿಪ್ರಾಯಗಳನ್ನು ಟೀಕಿಸಿ, “ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ಸಮಾನ ಅವಕಾಶಕ್ಕೆ ಅರ್ಹರು” ಎಂದು ಹೇಳಿದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ, ಅಭಿಮಾನಿಗಳು ರಿಷಾ ಅವರ ಧೈರ್ಯವನ್ನು ಮೆಚ್ಚಿದ್ದಾರೆ.
ಇದರ ಜೊತೆಗೆ ಮತ್ತೊಂದು ವಿವಾದಾಸ್ಪದ ಘಟನೆಯೂ ನಡೆದಿದೆ. ಕಾಕ್ರೋಚ್ ಸುಧಿ ಎಂದು ಕರೆಯಲ್ಪಡುವ ಸ್ಪರ್ಧಿ ಸುಧಿ, ರಕ್ಷಿತಾ ಶೆಟ್ಟಿಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದರು. ಅವರು ರಕ್ಷಿತಾ ಅವರನ್ನು ‘ಸೆಡೆ’ ಎಂದು ಕರೆದಿದ್ದರು. ಇದಕ್ಕೆ ಸಮರ್ಥನೆಯಾಗಿ, “ಇದು ನಮ್ಮ ಏರಿಯಾದಲ್ಲಿ ಕಾಮನ್ ಆಗಿ ಮಾತಾಡೋ ವರ್ಡ್, ಸೆಡೆ ಎಂದರೆ ಚೈಲ್ಡ್ ಅಥವಾ ಚಿಕ್ಕ ಹುಡುಗಿ ಅಂತ ಅರ್ಥ” ಎಂದು ಹೇಳಿದ್ದರು. ಆದರೆ ಇದು ರಕ್ಷಿತಾ ಅವರಿಗೆ ಮುಜುಗರ ಉಂಟುಮಾಡಿತು. ನಿನ್ನೆಯ ಎಪಿಸೋಡ್ ನಲ್ಲಿ ಸುಧಿ, ಹಂಗಿಸುವ ರೀತಿಯಲ್ಲಿ ಕ್ಷಮೆ ಕೇಳಿದ್ದು ವಿಚಿತ್ರವಾಗಿತ್ತು. ಇಂದಿನ ಎಪಿಸೋಡ್ ನಲ್ಲಿ ಇದು ದೊಡ್ಡ ಸದ್ದು ಮಾಡುವುದು ಖಚಿತ. ಕಿಚ್ಚ ಸುದೀಪ್ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಸುಧಿಗೆ ಕ್ಲಾಸ್ ತೆಗೆದುಕೊಂಡರು ಎಂಬ ಮಾಹಿತಿ ಇದೆ.





